ಮಹಿಳೆ ಮೇಲೆ ಅತ್ಯಾಚಾರ: ಮಹಾ ಡಿಐಜಿ ಬಂಧನ ಸಾಧ್ಯತೆ
ಅತ್ಯಾಚಾರ ಆರೋಪದಡಿ ಇತ್ತೀಚೆಗಷ್ಟೇ ಸೇವೆಯಿಂದ ಅಮಾನತುಗೊಂಡಿರುವ ಮಹಾರಾಷ್ಟ್ರದ ಡಿಐಜಿ ಸುನಿಲ್ ಪರಸ್ಕರ್ ಅವರನ್ನು ಗುರುವಾರ...

ಮುಂಬೈ: ಅತ್ಯಾಚಾರ ಆರೋಪದಡಿ ಇತ್ತೀಚೆಗಷ್ಟೇ ಸೇವೆಯಿಂದ ಅಮಾನತುಗೊಂಡಿರುವ ಮಹಾರಾಷ್ಟ್ರದ ಡಿಐಜಿ ಸುನಿಲ್ ಪರಸ್ಕರ್ ಅವರನ್ನು ಗುರುವಾರ ಮುಂಬೈ ಅಪರಾಧ ವಿಭಾಗದ ಪೊಲೀಸರು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕಳೆದ ಶುಕ್ರವಾರ ಮುಂಬೈನ ಅಪರಾಧ ವಿಭಾಗದ ಪೊಲೀಸರು ಸುನಿಲ್ ಪರಸ್ಕರ್ ವಿರುದ್ಧ ವಿಶೇಷ ಮಹಿಳಾ ನ್ಯಾಯಾಲಯದಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಪ್ರಕರಣ ಸಂಬಂಧ ಸೋಮವಾರ ಸುನಿಲ್ ಪರಸ್ಕರ್ ಅವರಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿತ್ತು. ಪ್ರಸ್ತುತ ಪ್ರಕರಣದ ಹೆಚ್ಚಿನ ವಿಚಾರಣೆಗಾಗಿ ನಾಳೆ ಮುಂಬೈ ಸಿಸಿಬಿ ಪೊಲೀಸರು ಅವರನ್ನು ಬಂಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಮ್ಮನ್ನು ಪೊಲೀಸರು ಬಂಧಿಸಬಹುದೆಂಬ ಕಾರಣಕ್ಕಾಗಿ ಪರಸ್ಕರ್ ಅವರು ಈಗಾಗಲೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಒಂದು ವೇಳೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದರೆ ನಾಳೆ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆಯುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಸುನಿಲ್ ಪರಸ್ಕರ್ ಅವರ ಜಾಮೀನು ಅರ್ಜಿ ನ್ಯಾಯಾಲಯದಲ್ಲಿದ್ದು, ಒಂದು ವೇಳೆ ವಿಚಾರಣೆಗೆ ಅವರು ಗೈರು ಹಾಜರಾದರೆ ನಾಳೆ ಸಂಜೆಯೊಳಗೆ ಅವರನ್ನು ಬಂಧಿಸಲಿದ್ದೇವೆ ಎಂದು ಮುಂಬೈ ಅಪರಾಧ ವಿಭಾಗದ ಜಂಟಿ ಉಪ ಪೊಲೀಸ್ ಆಯುಕ್ತ ಅತುಲ್‌ಚಂದ್ರ ಕುಲಕರ್ಣಿ ತಿಳಿಸಿದ್ದಾರೆ. ಅಲ್ಲದೆ ಸುನಿಲ್ ಪರಸ್ಕರ್ ಅವರ ಅನಾರೋಗ್ಯದ ಹಿನ್ನೆಲೆಯಲ್ಲಿ ಬಂಧಿಸಲು ಸಾಧ್ಯವಾಗಿಲ್ಲ. ನಾಳೆಯೊಳಗೆ ಅವರು ಗುಣಮುಖರಾಗುವ ಸಾಧ್ಯತೆಯಿರುವುದರಿಂದ ನಾಳೆ ಅವರು ಬಂಧನಕ್ಕೊಳಗಾಗಬಹುದು ಎಂದು ಹೇಳಿದ್ದಾರೆ.
ಏನಿದು ಪ್ರಕರಣ..?
ಡಿಐಜಿ ಸುನಿಲ್ ಪರಸ್ಕರ್ ಅವರು ತಮ್ಮ ಬಂಗಲೆಯಲ್ಲಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆಂದು ಅನಾಮಧೇಯ ಮಹಿಳೆಯೊಬ್ಬಳು ದೂರು ನೀಡಿದ್ದರು. 2013ರ ನವೆಂಬರ್‌ನಲ್ಲಿ ಮಹಿಳೆ ಆರೋಪದಲ್ಲಿ ಉಲ್ಲೇಖಿಸಿರುವ ಅದೇ ಬಂಗಲೆಯಲ್ಲಿ ಮಹಿಳೆ ಜತೆ ಪರಸ್ಕರ್ ಇದ್ದರು ಎಂದು ಸಾರ್ವಜನಿಕರೊಬ್ಬರು ಸಾಕ್ಷಿ ಹೇಳಿದ್ದರು. ನವೀ ಮುಂಬೈನಲ್ಲಿರುವ ಫ್ಲಾಟ್‌ನಲ್ಲಿ ಪರಸ್ಕರ್ ತನ್ನನ್ನು ಅತ್ಯಾಚಾರ ಮಾಡಿದ್ದಾರೆ. ಸಿಸಿಟಿವಿಯಲ್ಲಿ ಇದು ದಾಖಲಾಗಿದೆ ಎಂದು ನೊಂದ ಮಹಿಳೆ ದೂರು ನೀಡಿದ್ದಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


