ಶಾಸಕನ ಮಗ ಪ್ಯೂನ್ ಪೋಸ್ಟ್ ಗೆ ಅರ್ಜಿ ಹಾಕಿದ್ದೇಕೆ..?
ರಾಜಸ್ತಾನದ ಬಿಜೆಪಿ ಶಾಸಕರೊಬ್ಬರು ತಮ್ಮ ಸ್ವಂತ ಮಗನಿಂದ ಪ್ಯೂನ್ (ಕಚೇರಿ ಸಹಾಯಕ) ಪೋಸ್ಟ್ ಗೆ ಅರ್ಜಿ ಹಾಕಿಸಿದ್ದಾರಂತೆ...

ಜೈಪುರ: ರಾಜಸ್ತಾನದ ಬಿಜೆಪಿ ಶಾಸಕರೊಬ್ಬರು ತಮ್ಮ ಸ್ವಂತ ಮಗನಿಂದ ಪ್ಯೂನ್ (ಕಚೇರಿ ಸಹಾಯಕ) ಪೋಸ್ಟ್ ಗೆ ಅರ್ಜಿ ಹಾಕಿಸಿದ್ದಾರಂತೆ.
ಅಪ್ಪ ಹಾಕಿದ ಆಲದ ಮರ ಎಂಬ ಗಾದೆ ಮಾತಿನಂತೆ ಈ ದೇಶದ ಬಹುತೇಕ ರಾಜಕಾರಣಿಗಳು ತಮ್ಮಂತೆಯೇ ತಮ್ಮ ಮಕ್ಕಳು ಕೂಡ ರಾಜಕೀಯಕ್ಕೆ ಇಳಿಯಲಿ ಅಥವಾ ಅದಕ್ಕಿಂತಲೂ ಉನ್ನತ ಸ್ಥಾನವನ್ನು ಅಲಂಕರಿಸಲಿ ಎಂದು ಹವಣಿಸುತ್ತಿರುತ್ತಾರೆ. ಆತ ಯೋಗ್ಯನೋ ಅಥವಾ ಅಯೋಗ್ಯನೋ ಎಂದೂ ಸಹ ಯೋಚಿಸುವುದೇ ಇಲ್ಲ. ಒಟ್ಟಾರೆ ತನ್ನ ಕುಟುಂಬದವರು ಚೆನ್ನಾಗಿದ್ದರೆ ಅಷ್ಟೇ ಸಾಕು ಎನ್ನುವಂತಹ ಧೋರಣೆಯಲ್ಲೇ ದೇಶದ ಬಹುತೇಕ ರಾಜಕಾರಣಿಗಳು ತಮ್ಮ ಮಕ್ಕಳು ಮತ್ತು ಮರಿಮಕ್ಕಳನ್ನು ರಾಜಕೀಯಕ್ಕೆ ಇಳಿಸುತ್ತಾರೆ. ಆದರೆ ಇಂತಹ ರಾಜಕಾರಿಣಿಗಳ ಪೈಕಿ ರಾಜಸ್ತಾನದ ಬಿಜೆಪಿ ಶಾಸಕ ಹೀರಾ ಲಾಲ್ ವರ್ಮಾ ಕೊಂಚ ಭಿನ್ನವಾಗಿ ನಿಲ್ಲುತ್ತಾರೆ.
ಹೀರಾ ಲಾಲ್ ವರ್ಮಾ ಅವರು ರಾಜಸ್ತಾನದ ಟಾಂಕ್ ಜಿಲ್ಲೆಯ ಇಬ್ಬರು ಶಾಸಕರ ಪೈಕಿ ಓರ್ವರಾಗಿದ್ದು, ಜಿಲ್ಲೆಯಾದ್ಯಂತ ಮತ್ತು ಸರ್ಕಾರದಲ್ಲಿ ಸಾಕಷ್ಟು ಸ್ನೇಹಿತರನ್ನೂ ಕೂಡ ಹೊಂದಿದ್ದಾರೆ. ಇಷ್ಟೆಲ್ಲಾ ಪ್ರಭಾವವಿರುವ ವರ್ಮಾ ಅವರು ತಮ್ಮ ಪುತ್ರನಿಂದ ಮಾತ್ರ ಕಚೇರಿ ಸಹಾಯಕ ಹುದ್ದೆಗೆ ಅರ್ಜಿ ಹಾಕಿಸಿದ್ದಾರೆ. ಅಜ್ಮೀರ್ ನಲ್ಲಿರುವ ರಾಜಸ್ತಾನ ಕೃಷಿ ಮಾರುಕಟ್ಟೆ ಇಲಾಖೆ ಕಚೇರಿಯಲ್ಲಿ ಕಳೆದ ಶುಕ್ರವಾರ ನಡೆದ ಸಂದರ್ಶನಕ್ಕಾಗಿ ವರ್ಮಾ ಅವರ ಪುತ್ರ ಹಂಸರಾಜ್ ಭಾಗವಹಿಸಿದ್ದಾಗ ಈ ವಿಚಾರ ಮಾಧ್ಯಮಗಳಿಗೆ ಬಹಿರಂಗವಾಗಿದೆ.
ಓದಿನಲ್ಲಿ ಅಷ್ಟೇನೂ ಆಸ್ತಕ್ತಿ ಇಲ್ಲದ ಹಂಸರಾಜ್ 10ನೇ ತರಗತಿ ಅನುತ್ತೀರ್ಣನಾಗಿದ್ದ. ಮಗನಿಗೆ ಸಾಕಷ್ಟು ಬಾರಿ ಬುದ್ದಿ ಹೇಳಿದ್ದ ವರ್ಮಾ, ತಿದ್ದುಕೊಳ್ಳದ ಮಗನ ನಡವಳಿಕೆಯಿಂದ ಅಸಮಾಧಾನಗೊಂಡಿದ್ದರು. ಕೊನೆಗೆ ತಮ್ಮ ಮಗನ ಅರ್ಹತೆ ಮತ್ತು ವಿದ್ಯೆಗನುಗುಣವಾಗಿ ಕೆಲಸ ಮಾಡಲಿ ಎಂದು ನಿರ್ಧರಿಸಿದ ವರ್ಮಾ ಅವರು, ಕೃಷಿ ಇಲಾಖೆಯಲ್ಲಿ ಕಚೇರಿ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿರುವ ಹೀರಾ ಲಾಲ್ ವರ್ಮಾ ಅವರು, ನನ್ನ ಮಗ ಹಂಸರಾಜ್ ಮೊದಲಿನಿಂದಲೂ ಓದಿನಲ್ಲಿ ಆಸಕ್ತಿ ಇರಲಿಲ್ಲ. ಆತ ಕನಿಷ್ಟ 10ನೇ ತರಗತಿಯಲ್ಲಿಯೂ ಉತ್ತೀರ್ಣನಾಗಿರಲಿಲ್ಲ. ಒಂದು ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದ ಆತ ತಿಂಗಳಿಗೆ 5 ಸಾವಿರ ರು.ಸಂಬಳ ಪಡೆಯುತ್ತಿದ್ದ. ಹೀಗಾಗಿ ನನ್ನ ಬಳಿ ಇದದ್ದು ಇದೊಂದೇ ದಾರಿ. ಕೃಷಿ ಇಲಾಖೆಯಲ್ಲಿ ಕಚೇರಿ ಸಹಾಯಕನ ಹುದ್ದೆಗೆ ಅರ್ಜಿ ಹಾಕಿಸಿದೆ. ಇಂತಹ ಶೈಕ್ಷಣಿಕ ಅರ್ಹತೆ ಹೊಂದಿರುವ ಆತ ರಾಜಕೀಯಕ್ಕಾಗಲಿ ಅಥವ ಇನ್ನಿತರೆ ಯಾವುದೇ ಉನ್ನತ ಮಟ್ಟದ ವ್ಯಾಪಾರಕ್ಕಾಗಲಿ ಸೇರಿಸುವುದು ನನಗಿಷ್ಟವಿಲ್ಲ. ನಾನದನ್ನು ಮಾಡುವುದೂ ಇಲ್ಲ ಎಂದು ವರ್ಮಾ ಹೇಳಿದ್ದಾರೆ.
ಇನ್ನು ವರ್ಮಾ ಅವರ ಈ ನಿರ್ಧಾರವನ್ನು ಅವರ ಸ್ನೇಹಿತರೇ ಪ್ರಶ್ನಿಸಿದ್ದು, ಇದಕ್ಕೆ ಹೀರಾ ಲಾಲ್ ವರ್ಮಾ ಅವರು ತಮ್ಮದೇ ರೀತಿಯಲ್ಲಿ ಉತ್ತರಿಸಿದ್ದಾರೆ. ಇದು ಪ್ರಾಮಾಣಿಕ ಜೀವನಕ್ಕೆ ಸಂಬಂಧಿಸಿದ ವಿಚಾರವಾಗಿದ್ದು, ಅಡ್ಡದಾರಿ ತುಳಿಯುವಂತೆ ನಾನು ನನ್ನ ಮಕ್ಕಳನ್ನು ಎಂದಿಗೂ ಪ್ರೋತ್ಸಾಹಿಸುವುದಿಲ್ಲ. ಆತ ತನ್ನ ಸಾಮರ್ಥ್ಯದ ಆಧಾರದ ಮೇಲೆಯೇ ಕೆಲಸ ಸಂಪಾದಿಸಬೇಕು ಎಂದು ಹೇಳಿದ್ದಾರೆ.
ಮಗನ ಸಾಮರ್ಥ್ಯದ ಬಗ್ಗೆ ಮಾತನಾಡುವ ಹೀರಾಲಾಲ್ ಅವರ ವಿಧ್ಯಾರ್ಹತೆ ಏನು ಗೊತ್ತೆ..?
ಹೀರಾಲಾಲ್ ವರ್ಮಾ ಅವರು 3 ವಿಷಯಗಳಲ್ಲಿ ಪದವಿ ಪಡೆದಿದ್ದು, ಚಿನ್ನದ ಪದಕ ಕೂಡ ಗಳಿಸಿದ್ದಾರೆ. ಅಲ್ಲದೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾಗಿಯೂ ವರ್ಮಾ ಸೇವೆಸಲ್ಲಿಸಿದ್ದಾರೆ. ಇನ್ನು ವರ್ಮಾ ಅವರ ಮೊದಲ ಪುತ್ರ ವಾಣಿಜ್ಯೋಧ್ಯಮಿಯಾಗಿದ್ದು, ಮತ್ತೋರ್ವ ಮಗ ಇತ್ತೀಚೆಗಷ್ಟೇ ಪದವಿ ಪೂರ್ಣಗೊಳಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧನಾಗುತ್ತಿದ್ದಾನೆ. ಇನ್ನು ವರ್ಮಾ ಅವರ ಪುತ್ರಿ ಬಿಎಡ್ ಪದವಿ ಪಡೆದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


