ದೇಶ

ಪ್ರತ್ಯೇಕವಾದಿ ಬಿಡುಗಡೆ: ಕಾಶ್ಮೀರ ಮೈತ್ರಿ ಸಂಘರ್ಷ

ನೂರಿಪ್ಪತ್ತು ಮಂದಿ ಸಾವಿಗೆ ಕಾರಣನಾದ ಮುಸ್ಲಿಂ ಲೀಗ್ ಹಾಗೂ ಕಾಶ್ಮೀರಿ ಪ್ರತ್ಯೇಕವಾದಿ ಮುಖಂಡ ಮಸಾರತ್ ಆಲಂ ಬಿಡುಗಡೆ ವಿಚಾರ ಬಿಜೆಪಿ ಮತ್ತು ಪಿಡಿಪಿ ನಡುವೆ ತೀವ್ರ ತಿಕ್ಕಾಟ ಸೃಷ್ಟಿಸಿದೆ.

ಪ್ರತ್ಯೇಕವಾದಿ ಬಿಡುಗಡೆ: ಕಾಶ್ಮೀರ ಮೈತ್ರಿ ಸಂಘರ್ಷ
ಪ್ರತ್ಯೇಕತಾವಾದಿ ಮುಖಂಡ ಮಸಾರತ್ ಆಲಂ (ಸಂಗ್ರಹ ಚಿತ್ರ)
Published On :

ಜಮ್ಮು: ನೂರಿಪ್ಪತ್ತು ಮಂದಿ ಸಾವಿಗೆ ಕಾರಣನಾದ ಮುಸ್ಲಿಂ ಲೀಗ್ ಹಾಗೂ ಕಾಶ್ಮೀರಿ ಪ್ರತ್ಯೇಕವಾದಿ ಮುಖಂಡ ಮಸಾರತ್ ಆಲಂ ಬಿಡುಗಡೆ ವಿಚಾರ ಬಿಜೆಪಿ ಮತ್ತು ಪಿಡಿಪಿ ನಡುವೆ ತೀವ್ರ ತಿಕ್ಕಾಟ ಸೃಷ್ಟಿಸಿದೆ.

ಈ ವಿಚಾರದಲ್ಲಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ಮಿತ್ರ ಪಕ್ಷವನ್ನು ಸೌಜನ್ಯಕ್ಕೂ ವಿಚಾರಿಸಲಿಲ್ಲ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಜತೆಗೆ, ಮೈತ್ರಿ ಧರ್ಮ ಪಾಲಿಸುವಂತೆ ಪಿಡಿಪಿಗೆ ಸೂಚಿಸಿದೆ. ಏತನ್ಮಧ್ಯೆ, ಪಿಡಿಪಿಯ ಕೃಪಾಕಟಾಕ್ಷದಿಂದ ತಾವು ಬಿಡುಗಡೆಯಾಗಿಲ್ಲ ಎಂದು ಮಸಾರತ್ ಆಲಂ ಹೇಳಿಕೊಂಡಿದ್ದಾರೆ. ಕೋರ್ಟ್ ನಿಂದ ಜಾಮೀನು ಸಿಕ್ಕಿತು. ಹಾಗಾಗಿ ಕಾನೂನು ಪ್ರಕಾರ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪಿಡಿಪಿ ಕೈವಾಡವೇನೂ ಇಲ್ಲ ಎಂದು ಹೇಳಿದ್ದಾನೆ.

ಸರ್ಕಾರದ ಮೇಲೆ ಪರಿಣಾಮ?
ಆಲಂ ಬಿಡುಗಡೆ ಕ್ರಮ, ವಾರದ ಹಿಂದಷ್ಟೇ ಅಸ್ತಿತ್ವಕ್ಕೆ ಬಂದಿರುವ ಮೈತ್ರಿ ಸರ್ಕಾರದಲ್ಲಿ ಬಿರುಗಾಳಿ ಎಬ್ಬಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಮುಫ್ತಿ ಪಾಕ್ ಮತ್ತು ಉಗ್ರರನ್ನು ಹೊಗಳುವ ಮೂಲಕ ಮಿತ್ರಪಕ್ಷ ಬಿಜೆಪಿಗೆ ಮುಜುಗರ ಉಂಟು ಮಾಡಿದ್ದರು. ಜಮ್ಮು ಮತ್ತು ಕಾಶ್ಮೀರದ ಭವಿಷ್ಯಕ್ಕಾಗಿ ಆ ಮುಜುಗರವನ್ನು ಬಿಜೆಪಿ ಹೇಗೋ ಉಗುಳು ನುಂಗಿ ಕೊಂಡು ಸಹಿಸಿಕೊಂಡಿತ್ತು. ಆದರೆ, ನೂರಾರು ಮಂದಿ ಅಮಾಯಕರ ಸಾವಿಗೆ ಕಾರಣನಾದ ಹಾಗೂ ಭಾರತ ವಿರೋಧಿ ನಾಯಕನೊಬ್ಬನನ್ನು ಬಿಡುಗಡೆ ಮಾಡುತ್ತಿರುವುದು ಬಿಜೆಪಿ ಮುಖಂಡರಲ್ಲಿ ಮಡುಗಟ್ಟಿದ್ದ ಆಕ್ರೋಶವನ್ನು ಹೆಚ್ಚಿಸಿದೆ.

ಸಚಿವ ಸಂಪುಟದಲ್ಲಿ ಚರ್ಚಿಸದೆ ಸಿಎಂ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಹೀಗಾದರೆ ನಾವೆಲ್ಲ ಯಾಕಿರೋದು ಎನ್ನುವ ಅಭಿಪ್ರಾಯ ಅವರಲ್ಲಿ ಬೆಳೆಯುತ್ತಿದೆ. ಈ ಮಧ್ಯೆ, ಆರೆಸ್ಸೆಸ್, ಮಿತ್ರಪಕ್ಷ ಶಿವಸೇನೆ ಹಾಗೂ ಪ್ರತಿಪಕ್ಷಗಳೂ ಪಿಡಿಪಿಯ ವಿವಾದಾತ್ಮಕ ನಿಲುವಿಗೆ ಸಂಬಂಧಿಸಿ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿ ಬಿಜೆಪಿಯ ತಲೆನೋವು ಹೆಚ್ಚಿಸುತ್ತಿವೆ. ಒಟ್ಟಾರೆ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನವೇ ಮುಫ್ತಿ ಹೇಳಿಕೆಯಿಂದ ಎರಡೂ ಪಕ್ಷಗಳ ನಡುವೆ ಹುಟ್ಟಿಕೊಂಡಿದ್ದ ಅಸಮಾಧಾನ ಮತ್ತಷ್ಟು ಹೆಚ್ಚಿದೆ.

ಯಾಕಾಗಿ ನಿರ್ಧಾರ?
ಬಿಜೆಪಿ ವಿರೋಧವಿದ್ದರೂ ಪಿಡಿಪಿ ದಿನಕ್ಕೊಂದು ವಿವಾದಾತ್ಮಕ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಯಾಕೆ? ಈ ರೀತಿಯ ನಿರ್ಧಾರಗಳ ಮೂಲಕ ಪಿಡಿಪಿ ಏನನ್ನು ಸಾ„ಸಲು ಹೊರಟಿದೆ ಎನ್ನುವುದು ಈಗ ರಾಜಕೀಯ ಪಂಡಿತರನ್ನು ಕಾಡುವ ಪ್ರಶ್ನೆ. ತತ್ವ ಸಿದ್ಧಾಂತಗಳನ್ನು ನೋಡಿದಾಗ ಒಬ್ಬರು ಉತ್ತರ, ಇನ್ನೊಬ್ಬರು ದಕ್ಷಿಣ. ಇಷ್ಟಾದರೂ ರಾಜ್ಯದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ರಚಿಸಲು ನಿರ್ಧರಿಸಿರುವುದಾಗಿ ಎರಡೂ ಪಕ್ಷಗಳು ಹೇಳಿವೆ. ಮೂಲಗಳ ಪ್ರಕಾರ, ಮೈತ್ರಿ ಮಾಡಿಕೊಂಡಿದ್ದೇವೆ ಎಂದ ಮಾತ್ರಕ್ಕೆ ನಾವು ಬಿಜೆಪಿ ನಿಲುವು ಪ್ರತಿಪಾದಿಸುತ್ತಿಲ್ಲ ಎನ್ನುವುದನ್ನು ತೋರಿಸಿಕೊಡಲೆಂದೇ ಪಿಡಿಪಿ ಈ ರೀತಿ ಮಾಡುತ್ತಿದೆ. ಇದರ ಅರಿವಿದ್ದೇ ಬಿಜೆಪಿ ರಾಷ್ಟ್ರೀಯ ಮುಖಂಡರು ಮೌನವಹಿಸಿದ್ದಾರೆ. ಸ್ವಲ್ಪ ದಿನ ಕಾದು ನೋಡೋಣ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಮೈತ್ರಿ ಮುರಿಯೋಣ ಎನ್ನುವ ನಿರ್ಧಾರಕ್ಕೆ ಅವರು ಬಂದಿದ್ದಾರೆ.

ಬಿಜೆಪಿ ಸಭೆ

ಮುಫ್ತಿತ ನಿರ್ಧಾರದ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಬಿಜೆಪಿ ರಾಜ್ಯ ಮುಖಂಡರು ಭಾನುವಾರ ಸಭೆ ಸೇರಿ ಗಂಭೀರವಾಗಿ ಚರ್ಚಿಸಿದ್ದಾರೆ. ಆಲಂ ಬಿಡುಗಡೆಗೆ ನಮ್ಮ ಸಹಮತ ಇಲ್ಲ. ಈ ನಿರ್ಧಾರವನ್ನು ಕನಿಷ್ಠ ಸಾಮಾನ್ಯ ಕಾರ್ಯಕ್ರಮ(ಸಿಎಂಪಿ)ಗಳನ್ನು ಆಧಾರವಾಗಿಟ್ಟುಕೊಂಡು ತೆಗೆದುಕೊಳ್ಳಲಾಗಿಲ್ಲ. ಭವಿಷ್ಯದಲ್ಲಿ ಈ ರೀತಿಯ ಪ್ರಕರಣಗಳು ಮರುಕಳಿಸದಿರಲು ಪಿಡಿಪಿಗೆ ನಮ್ಮ ಅಸಮ್ಮತಿ ವ್ಯಕ್ತಪಡಿಸಲು ನಿರ್ಧರಿಸಿದ್ದೇವೆ. ಮುಫ್ತಿ ನಿರ್ಧಾರದಿಂದ ನಮಗೆ ನೋವಾಗಿದೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.

ಇದು 3ನೇ ಪ್ರಕರಣ!

ಕಾಶ್ಮೀರದಲ್ಲಿ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ವಾರವೊಪ್ಪತ್ತಿನಲ್ಲಿ ಪಿಡಿಪಿ ಸೃಷ್ಟಿಸಿದ ಮೂರನೇ ವಿವಾದ ಇದು. ಪಿಡಿಪಿಯ ಈ ನಡೆ ಮಿತ್ರಪಕ್ಷವಾದ ಬಿಜೆಪಿಗೆ ತೀವ್ರ ಮುಜುಗರ ತಂದಿಟ್ಟಿದೆ. ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಮುಫ್ತಿ ಅವರು ರಾಜ್ಯದಲ್ಲಿ ಶಾಂತಿಯುತ ಮತದಾನ ನಡೆಯಲು ಪಾಕಿಸ್ತಾನ, ಉಗ್ರರು, ಪ್ರತ್ಯೇಕವಾದಿಗಳು ಕಾರಣ ಎಂದಿದ್ದರು. ಇದಕ್ಕಾಗಿ ಅವರಿಗೆ ಧನ್ಯವಾದವನ್ನೂ ಅರ್ಪಿಸಿದ್ದರು. ಸಂಸತ್ತಿನ ಮೇಲಿನ ದಾಳಿ ಹಿನ್ನೆಲೆಯಲ್ಲಿ 2013ರಲ್ಲಿ ಗಲ್ಲಿಗೇರಿಸಲ್ಪಟ್ಟ ಉಗ್ರ ಅಫ್ಜಲ್ ಗುರುವಿನ ಮೃತದೇಹ ಅವಶೇಷಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಬೇಕು ಎಂದು ಪಿಡಿಪಿಯ ಕೆಲ ಶಾಸಕರು ಆಗ್ರಹಿಸಿದ್ದರು. 2008 ಮತ್ತು 2010ರಲ್ಲಿ ಕಾಶ್ಮೀರದಲ್ಲಿ ನಡೆದ ಕಲ್ಲುತೂರಾಟದಲ್ಲಿ 120 ಮಂದಿ ಸಾವಿಗೆ ಕಾರಣಕರ್ತನಾದ ಮಸಾರತ್ ಆಲಂ ಬಿಡುಗಡೆ.

ಪಿಡಿಪಿ ಸಮರ್ಥನೆ

ಪಿಡಿಪಿ ಮಾತ್ರ ಮುಖ್ಯಮಂತ್ರಿ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ರಾಜ್ಯದಲ್ಲಿ ಸಾಮರಸ್ಯ ಹಾಗೂ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕನಿಷ್ಠ ಸಾಮಾನ್ಯ ಕಾರ್ಯಕ್ರಮದಂತೆ ಆಲಂ ಬಿಡುಗಡೆ ಮಾಡಲಾಗಿದೆ. ಪ್ರತ್ಯೇಕವಾದಿಗಳನ್ನು ಜೈಲಿನಲ್ಲಿಟ್ಟುಕೊಂಡು ಶಾಂತಿ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಪಿಡಿಪಿ ವಕ್ತಾರ ನಯೀಮ್ ಅಖ್ತರ್ ಹೇಳಿದ್ದಾರೆ.

ಪಿಡಿಪಿಯ ಈ ನಿರ್ಧಾರಕ್ಕೆ ಬಿಜೆಪಿಯ ಒಪ್ಪಿಗೆ ಇಲ್ಲ. ಆಲಂ ಅನ್ನು ಬಿಡುಗಡೆ ಮಾಡುವ ವಿಚಾರದಲ್ಲಿ ಬಿಜೆಪಿಯ ಅಭಿಪ್ರಾಯವನ್ನೇ ಕೇಳಲಾಗಿಲ್ಲ. ಒಂದು ವೇಳೆ ಅವರು ನಮ್ಮನ್ನು ಕೇಳಿದ್ದರೆ ನಾವು ಈ ನಿರ್ಧಾರಕ್ಕೆ ಒಪ್ಪಿಗೆಯನ್ನೇ ಕೊಡುತ್ತಿರಲಿಲ್ಲ.
-ಜುಗಲ್ ಕಿಶೋರ್ ಶರ್ಮಾ, ಜಮ್ಮು ಕಾಶ್ಮೀರ ಬಿಜೆಪಿ ಅಧ್ಯಕ್ಷ

ಮುಫ್ತಿ ಭಾರತೀಯನೇ?

ಆಲಂ ಬಿಡುಗಡೆಗೆ ಆರೆಸ್ಸೆಸ್ ಕಿಡಿಕಿಡಿಯಾಗಿದೆ. ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಭಾರತೀಯ ಹೌದೇ, ಅಲ್ಲವೇ ಎಂದು ಆರೆಸ್ಸೆಸ್ ಮುಖವಾಣಿ ಆರ್ಗನೈಸರ್ ಪ್ರಶ್ನಿಸಿದೆ. ರಾಷ್ಟ್ರವಿರೋಧಿ ಪಾಕ್‍ಪರ ನಾಯಕರನ್ನು ಬಿಡುಗಡೆ ಮಾಡುವುದಕ್ಕೆ ಕಾಂಗ್ರೆಸ್ ವಿರೋಧವಿದೆ. ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಈ ನಿರ್ಧಾರಕ್ಕೆ ಪ್ರಧಾನಿ ನರೇಂದ್ರ ಮೋದಿ, ಆರೆಸ್ಸೆಸ್ ಈ ವಿಚಾರಕ್ಕೆ ಸಂಬಂಧಿಸಿ ತಮ್ಮ ನಿಲುವು ಸ್ಪಷ್ಟಪಡಿಸಬೇಕು.
- ಶಹನವಾಜ್ ಚೌಧರಿ, ಕಾಂಗ್ರೆಸ್ ಮುಖಂಡ

ಪಿಡಿಪಿ ಜತೆ ಸೇರಿಕೊಂಡು ಸರ್ಕಾರ ರಚಿಸುವಾಗಲೇ ನಾವು ಬಿಜೆಪಿಯನ್ನು ಎಚ್ಚರಿಸಿದ್ದೆವು. ಆಲಂ ಬಿಡುಗಡೆ ಸರಿಯಾದ ನಿರ್ಧಾರವಲ್ಲ. ಮುಫ್ತಿ ಮೊಹಮ್ಮದ್ ಸಯೀದ್ ನೈಜ ಭಾರತೀಯನಲ್ಲ.
-ಸಂಜಯ್ ರಾವುತ್, ಶಿವಸೇನೆ ಮುಖಂಡ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.