ನಿರ್ಭಯಾ ಅತ್ಯಾಚಾರ ಸಾಕ್ಷ್ಯ ಚಿತ್ರ ಪ್ರಸಾರಕ್ಕೆ ಅವಕಾಶ ನೀಡಲ್ಲ: ರಾಜನಾಥ್ ಸಿಂಗ್
ದೆಹಲಿ ಗ್ಯಾಂಗ್ ರೇಪ್ ಅಪರಾಧಿಯ ಸಂದರ್ಶನ ವಿವಾದ ಬುಧವಾರ ಸಂಸತ್ತಿನಲ್ಲೂ ಪ್ರತಿಧ್ವನಿಸಿತು. ಈ ಕುರಿತು ಮೇಲ್ಮನೆಯಲ್ಲಿ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ...

ನವದೆಹಲಿ: ದೆಹಲಿ ಗ್ಯಾಂಗ್ ರೇಪ್ ಅಪರಾಧಿಯ ಸಂದರ್ಶನ ವಿವಾದ ಬುಧವಾರ ಸಂಸತ್ತಿನಲ್ಲೂ ಪ್ರತಿಧ್ವನಿಸಿತು.
ಈ ಕುರಿತು ಮೇಲ್ಮನೆಯಲ್ಲಿ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು, ಸಾಕ್ಷ್ಯ ಚಿತ್ರ ನಿರ್ಮಾಪಕರು ಷರತ್ತುಗಳನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಪ್ರಸಾರ ತಡೆಯಲು ನ್ಯಾಯಾಲಯದಿಂದ ನಿನ್ನೆ ರಾತ್ರಿ ಅನುಮತಿ ದೊರೆತಿದ್ದು, ಯಾವುದೇ ಕಾರಣಕ್ಕೂ ಸಾಕ್ಷ್ಯ ಚಿತ್ರ ಪ್ರಸಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ಸಂಬಂಧ ಈಗಾಗಲೇ ಪ್ರಕರಣ ದಾಖಲಿಸಲಾಗಿದ್ದು, ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದರು. ಅಲ್ಲದೆ ಸಂದರ್ಶನಕ್ಕೆ ಅನುಮತಿ ನೀಡಿರುವುದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಸಿಂಗ್, 2013, ಜು.24ರಂದು ಯುಪಿಎ ಆಡಳಿತ ಅವಧಿಯಲ್ಲಿ ಅಪರಾಧಿಯ ಸಂದರ್ಶನಕ್ಕೆ ಅವಕಾಶ ನೀಡಲಾಗಿತ್ತು ಎಂದು ಹೇಳಿದರು.
ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣದ ಪ್ರಮುಖ ಅಪರಾಧಿ ಮುಕೇಶ್ ಸಿಂಗ್‌ನ ಸಂದರ್ಶನ ನಡೆಸಿದ್ದ ಸಾಕ್ಷ್ಯ ಚಿತ್ರ ನಿರ್ಮಾಪಕಿ ಲೆಸ್ಲಿ ಉಡ್ವಿನ್ ವಿರುದ್ಧ ನಿನ್ನೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಆದರೆ ಸಂದರ್ಶನ ನಡೆಸಲು ಕೇಂದ್ರ ಸಚಿವಾಲಯದ ಹಾಗೂ ತಿಹಾರ್ ಜೈಲಿನ ಅಧಿಕಾರಿಗಳಿಂದ ಅನುಮತಿ ಪತ್ರ ಪಡೆದಿದ್ದೇನೆ. ಎಲ್ಲ ನಿಯಮ ಪಾಲಿಸಿದ್ದೇನೆ ಎಂದು ಲೆಸ್ಲಿ ಸ್ಪಷ್ಟನೆ ನೀಡಿದ್ದಾರೆ.
ಇನ್ನು ಮುಕೇಶ್ ಸಿಂಗ್‌ನ ಸಂದರ್ಶನಕ್ಕೆ ನಿರ್ಭಯಾ ಪೋಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇಂದೊಂದು ಖಂಡನೀಯ ಮತ್ತು ಕೇಂದ್ರ ಸರ್ಕಾರ ಈ ಕೂಡಲೇ ಆತನನ್ನು ಗಲ್ಲಿಗೇರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮುಕೇಶ್ ನೀಡಿದ್ದ ಸಂದರ್ಶನ ಮಾರ್ಚ್ 8ರಂದು ಪ್ರಮುಖ ಸುದ್ದಿ ವಾಹಿನಿ ಬಿಬಿಸಿಯಲ್ಲಿ ಬಿತ್ತರಗೊಳ್ಳಬೇಕಿತ್ತು. ಆದರೆ ಪ್ರಸಾರಕ್ಕೂ ಮೊದಲೇ ಸಂದರ್ಶನದ ಆಯ್ದ ಭಾಗ ಸೋರಿಕೆಯಾಗಿ, ವಿವಾದ ಸೃಷ್ಟಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


