ರಾಜೇ ವಜಾ ಮಾಡುತ್ತಾ ಬಿಜೆಪಿ?
ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ಜತೆಗಿನ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಸಾಮೀಪ್ಯ ಮತ್ತು ವ್ಯಾವಹಾರಿಕ ಸಂಬಂಧಗಳು ಈಗ ರಾಜೇ ಅವರ ನೆತ್ತಿ ಮೇಲಿನ ತೂಗುಕತ್ತಿಯಾಗಿ ಪರಿಣಮಿಸಿದೆ...

ನವದೆಹಲಿ: ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ಜತೆಗಿನ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಸಾಮೀಪ್ಯ ಮತ್ತು ವ್ಯಾವಹಾರಿಕ ಸಂಬಂಧಗಳು ಈಗ ರಾಜೇ ಅವರ ನೆತ್ತಿ ಮೇಲಿನ ತೂಗುಕತ್ತಿಯಾಗಿ ಪರಿಣಮಿಸಿದೆ.
ಮೋದಿ ಜತೆ ರಾಜೇ ಪುತ್ರ ದುಶ್ಯಂತ್ ಸಿಂಗ್ ಅವರ ಹಣಕಾಸು ವ್ಯವಹಾರ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ರಾಜೇ ಅವರನ್ನು ವಜಾ ಮಾಡಲು ಬಿಜೆಪಿ ಚಿಂತನೆ ನಡೆಸುತ್ತಿದೆ ಎಂದು ಪಕ್ಷದ
ಮೂಲಗಳು ತಿಳಿಸಿವೆ. ಪಕ್ಷಕ್ಕೆ ಉಂಟಾಗುವ ಮತ್ತಷ್ಟು ಮುಜುಗರದಿಂದ ತಪ್ಪಿಸಿಕೊಳ್ಳಲು ಈ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ. ಅಲ್ಲದೆ, ಬಿಜೆಪಿಯು ರಾಜೇ ಪ್ರಕರಣವನ್ನು ಸುಷ್ಮಾ ಪ್ರಕರಣಕ್ಕಿಂತ ಬಿsನ್ನವಾಗಿ ನೋಡುತ್ತಿದ್ದು, ಸುಷ್ಮಾರನ್ನು ಸಮರ್ಥಿಸಿದಂತೆ ರಾಜೇಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಪಕ್ಷದ ಮೂಲಗಳ ವಾದ.
ಇದು ಸುಗ್ರೀವಾಜ್ಞೆರಾಜ್. ಎಲ್ಲ ಮಂತ್ರಿಗಳೂ ತಂತ್ರಿಗಳಾಗಿದ್ದಾರೆ. ಸಚಿವರು ಏನು ತಿನ್ನುತ್ತಾರೆ, ಏನು ಕುಡಿಯುತ್ತಾರೆ, ಎಲ್ಲಿಗೆ ಹೋಗುತ್ತಾರೆ ಎಂದು ಗೊತ್ತಿರುವ ಪ್ರಧಾನಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಬ್ರಿಟನ್ ಅಧಿಕಾರಿಗಳೊಂದಿಗೆ ಲಲಿತ್ ಪರ ಲಾಬಿ ಮಾಡಿದ್ದು ಮಾತ್ರ ಗೊತ್ತಾಗಲಿಲ್ಲವೇ? ಇದರಲ್ಲಿ ಮೋದಿಯೂ ಭಾಗಿಯಾಗಿದ್ದಾರೆ. ಅವರು ರಾಜಕೀಯ ವಿಪಾಸನಾದಿಂದ ಹೊರಬಂದು ಸತ್ಯ ಹೊರಹಾಕಲಿ.
-ಟಾಮ್ ವಡಕ್ಕನ್, ಕಾಂಗ್ರೆಸ್ ವಕ್ತಾರ
ಹಿಮಾಚಲ ಸಿಎಂ ವಿರುದ್ಧ ತನಿಖೆ
ಇತ್ತ ಲಲಿತ್ ಮೋದಿ ಹಗರಣದಲ್ಲಿ ಸಿಲುಕಿ ಮೋದಿ ಸರ್ಕಾರ ಮುಜುಗರಕ್ಕೊಳಗಾಗಿದ್ದರೆ, ಅತ್ತ ಅಕ್ರಮ ಆಸ್ತಿ ಪ್ರಕರಣ ಸಂಬಂಧ ಹಿಮಾಚಲ ಪ್ರದೇಶ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ವೀರಭದ್ರ ಸಿಂಗ್ ಹಾಗೂ ಅವರ ಕುಟುಂಬ ಸದಸ್ಯರ ವಿರುದ್ಧ ಪ್ರಾಥಮಿಕ ತನಿಖೆಗೆ ಸಿಬಿಐ ಮುಂದಾಗಿದೆ. ಯುಪಿಎ ಸರ್ಕಾರದಲ್ಲಿ ಉಕ್ಕು ಸಚಿವರಾಗಿದ್ದ ವೇಳೆ ರು.6.1 ಕೋಟಿ ಅಕ್ರಮ ಆಸ್ತಿ ಸಂಪಾದಿಸಿದ್ದ ಆರೋಪ ಸಿಂಗ್ ಮೇಲಿದೆ. ಈ ಹಿನ್ನೆಲೆಯಲ್ಲಿ ಸಿಂಗ್, ಅವರ ಪತ್ನಿ ಪ್ರತಿಭಾಸಿಂಗ್, ಪುತ್ರ, ಪುತ್ರಿ ಮತ್ತು ಎಲ್‍ಐಸಿ ಏಜೆಂಟ್ ಆನಂದ್ ಚೌಹಾಣ್ ವಿರುದ್ಧ ತನಿಖೆ ನಡೆಸಲಾಗುತ್ತದೆ ಎಂದು ಸಿಬಿಐ ತಿಳಿಸಿದೆ ಸಿಂಗ್ ಅವರು ಎಲ್‍ಐಸಿ ಏಜೆಂಟ್ ಚೌಹಾಣ್ ನೆರವಿನಿಂದ ರು.6.1 ಕೋಟಿಯ ವಿಮೆ ಮಾಡಿಸಿದ್ದರು. ಮಂಗಳವಾರವಷ್ಟೇ ಸಿಬಿಐ ಕೇಂದ್ರದ ಮಾಜಿ ಸಚಿವ ಶಂಕರ್‍ಸಿನ್ಹಾ ವಘೇಲಾ ವಿರುದ್ಧ ಭೂಹಗರಣ ಸಂಬಂಧ ಎಫ್ಐಆರ್ ದಾಖಲು ಮಾಡಿತ್ತು.
ಶಾ ಭೇಟಿಗೆ ಅವಕಾಶ ಕೋರಿರಲಿಲ್ಲ: ರಾಜೇ
``ರಾಜೇ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಭೇಟಿಯಾಗಲು ಅಪಾಯಿಂಟ್ ಮೆಂಟ್ ಕೇಳಿಯೂ ಇಲ್ಲ, ಅವರು ಅದನ್ನು ತಿರಸ್ಕರಿಸಿಯೂ ಇಲ್ಲ'' ಎಂದು ಸಿಎಂ ರಾಜೇ ಅವರ ಕಾರ್ಯಾಲಯ ಸ್ಪಷ್ಟಪಡಿಸಿದೆ. ರಾಜೇ ಅವರನ್ನು ಭೇಟಿಯಾಗಲು ಶಾ ಅವಕಾಶ ನಿರಾಕರಿಸಿದರು ಎಂಬ ಸುದ್ದಿಗಳು ಕೇಳಿಬಂದ ಹಿನ್ನೆಲೆಯಲ್ಲಿ ರಾಜೇ ಕಾರ್ಯಾಲಯ ಈ ಸ್ಪಷ್ಟನೆ ನೀಡಿದೆ. ಇಂದು ಮುಖಾಮುಖಿ: ಶುಕ್ರವಾರ ಸಿಖ್ಖರ ಪ್ರಮುಖ ದೇಗುಲಗಳಲ್ಲಿ ಒಂದಾದ ಪಂಜಾಬ್‍ನ ಆನಂದ್‍ಪುರ ಸಾಹಿಬ್‍ನ 350ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ರಾಜೇ, ಗೃಹ ಸಚಿವ ರಾಜನಾಥ್ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮುಖಾಮುಖಿಯಾಗಲಿದ್ದಾರೆ. ಮೂವರು ನಾಯಕರೂ ಕಾರ್ಯ ಕ್ರಮದಲ್ಲಿ ವೇದಿಕೆ ಹಂಚಿಕೊಳ್ಳಲಿದ್ದಾರೆ.
ನಿವೃತ್ತ ಜಡ್ಜ್ ಕೂಡ ಲಲಿತ್‍ಗೆ ನೆರವಾಗಿದ್ದರು!
ಲಲಿತ್ ಮೋದಿ ಪರ ಬ್ಯಾಂಟಿಂಗ್ ಮಾಡಿದವರಲ್ಲಿ ಕೇವಲ ರಾಜಕಾರಣಿಗಳು ಮಾತ್ರವಲ್ಲ, ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಾಧೀಶರೊಬ್ಬರೂ ಸೇರಿದ್ದಾರೆ. ಅವರೆಂದರೆ ದಿವಂಗತ
ಉಮೇಶ್ ಸಿ. ಬ್ಯಾನರ್ಜಿ. ಇವರು ಹಿಂದೆ ಆಂಧ್ರಪ್ರದೇಶ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯೂ ಆಗಿದ್ದರು. ಯುಪಿಎ ಸರ್ಕಾರ ಲಲಿತ್‍ಗೆ ಕಿರುಕುಳ ನೀಡುತ್ತಿದ್ದರು ಎಂಬ ಮಾತನ್ನು ಸಮರ್ಥಿಸಿಕೊಂಡಿದ್ದ ನ್ಯಾ.ಬ್ಯಾನರ್ಜಿ ಅವರು, ಲಲಿತ್‍ಗೆ ಬ್ರಿಟನ್‍ನಲ್ಲಿ ನೆಲೆಸಲು ನೆರವಾಗಿದ್ದರು ಎಂದು ಮೇಲ್ ಟುಡೇ ವರದಿ ಮಾಡಿದೆ. ಬ್ಯಾನರ್ಜಿ ಅವರು ಲಲಿತ್ ಮೋದಿ ಪರ ಕಾನೂನಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದಲೇ ಲಂಡನ್‍ನಲ್ಲಿ ಮೋದಿಗೆ ಹೆಚ್ಚು ಕಾಲ ಉಳಿಯಲು ಅವಕಾಶ ಸಿಕ್ಕಿತು. ``ಲಲಿತ್‍ರ ವಲಸೆ ಪ್ರಕರಣವನ್ನು ನಿಭಾಯಿಸಿದ್ದ ತಂಡದಲ್ಲಿ ಮೂವರು ಗಣ್ಯರು ಲೀಗಲ್ ಒಪೀನಿಯನ್ ನೀಡಿದ್ದರು. ಆ ಪೈಕಿ ಇಬ್ಬರು ಭಾರತೀಯರಾದರೆ, ಮತ್ತೊಬ್ಬರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ನ್ಯಾಯವಾದಿಯಾಗಿದ್ದರು. ಭಾರತೀಯರಲ್ಲಿ ನ್ಯಾ. ಬ್ಯಾನರ್ಜಿ ಅವರೂ ಸೇರಿದ್ದರು'' ಎಂದು ಅಂತಾರಾಷ್ಟ್ರೀಯ ವಕೀಲ ಹೇಮಂತ್ ಬಾತ್ರಾ ತಿಳಿಸಿದ್ದಾರೆ.
``ರಾಜಕೀಯ ನಾಯಕರ ಒತ್ತಡದ ಫಲವಾಗಿ ಜಾರಿ ನಿರ್ದೇಶನಾಲಯದಿಂದ ಹಿಡಿದು ಮುಂಬೈ ಪಾಸ್ ಪೋರ್ಟ್ ಕಚೇರಿಯವರೆಗೆ ಎಲ್ಲರೂ ಲಲಿತ್‍ಗೆ ಕಿರುಕುಳ ನೀಡುತ್ತಿದ್ದಾರೆ ಎಂದೇ ಎಲ್ಲ ಕಾನೂನು ಪರಿಣತರೂ ತಿಳಿದುಕೊಂಡಿದ್ದರು. ಹಾಗಾಗಿ ಅವರ ಅಭಿಪ್ರಾಯವು ಲಂಡನ್‍ನ ಕ್ವಾಸಿ ಜುಡೀಷಿಯಲ್ ಅಧಿಕಾರಿಗಳು ಲಲಿತ್‍ರತ್ತ ಕರುಣೆ ತೋರಲು ನೆರವಾಯಿತು'' ಎಂದಿದ್ದಾರೆ ಬಾತ್ರಾ.
ರಾಜೇ ಮುಂದೆ ಟೇಬಲ್ ಮೇಲೆ ಕಾಲಿಟ್ಟು ಕುಳಿತುಕೊಳ್ಳುತ್ತಿದ್ದ ಲಲಿತ್!
`ಲಲಿತ್ ಮೋದಿ ಅವರು ರಾಜಸ್ಥಾನ ಸಿಎಂ ರಾಜೇ ಮುಂದೆ ಟೇಬಲ್ ಮೇಲೆ ಕಾಲಿಟ್ಟು ಕುಳಿತುಕೊಳ್ಳುತ್ತಿದ್ದರು''. ಹೀಗೆಂದು ಹೇಳಿದ್ದು ಬಿಜೆಪಿ ಸರ್ಕಾರದ ಹಿರಿಯ ಅಧಿಕಾರಿ. ``ರಾಜಸ್ಥಾನದಲ್ಲಿ ರಾಜೇ ಅವರ ಅವ„ಯಲ್ಲಿ ಲಲಿತ್ ಅವರು ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಿದ್ದರು. ಅವರು ಮುಖ್ಯ ಮಂತ್ರಿಯ ನೆರಳಿನಂತೆ ವರ್ತಿಸುತ್ತಿದ್ದರು. ಇಡೀ ಶಕ್ತಿಕೇಂದ್ರವೇ ತನ್ನದು ಎಂಬಂತೆ ಅವರು ನಡೆದುಕೊಳ್ಳುತ್ತಿದ್ದರೆ ಅಲ್ಲಿರುವ ವರಿಗೆ ಅಸಮಾಧಾನವಾಗುತ್ತಿತ್ತು. ಸಿಎಂ ಎದುರೇ ಕಾಲನ್ನು ಮೇಜಿನ ಮೇಲಿಟ್ಟು ಕುಳಿತುಕೊಳ್ಳುತ್ತಿದ್ದರು. ಆದರೆ, ರಾಜ ಸ್ಥಾನ ಚುನಾವಣೆಗೆ ಟಿಕೆಟ್ ನೀಡುವ ವಿಚಾರದಲ್ಲಿ ರಾಜೇ-ಲಲಿತ್ ನಡುವೆ ಬಿರುಕು ಮೂಡಿತ್ತು'' ಎಂದಿದ್ದಾರೆ ಅಧಿಕಾರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


