ಮತ್ತೋರ್ವ ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ..!
ಉತ್ತರ ಪ್ರದೇಶದಲ್ಲಿ ಪತ್ರಕರ್ತರ ಮೇಲಿನ ಹಲ್ಲೆ ಸರಣಿ ಮುಂದುವರೆದಿದ್ದು, ಶಹಜಹಾನ್ ಪುರ ಜಿಲ್ಲೆಯಲ್ಲಿ ಮತ್ತೋರ್ವ ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.

ಲಖನೌ: ಉತ್ತರ ಪ್ರದೇಶದಲ್ಲಿ ಪತ್ರಕರ್ತರ ಮೇಲಿನ ಹಲ್ಲೆ ಸರಣಿ ಮುಂದುವರೆದಿದ್ದು, ಶಹಜಹಾನ್ ಪುರ ಜಿಲ್ಲೆಯಲ್ಲಿ ಮತ್ತೋರ್ವ ಪತ್ರಕರ್ತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.
ಫಿಲಿಬಿಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಸ್ಥಳೀಯ ರಾಜಕಾರಣಿಯೋರ್ವ ಸರ್ಕಾರಿ ಜಮೀನನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರ ಕುರಿತು ಪತ್ರಕರ್ತ ವರದಿ ಬಿತ್ತರಸಿದ್ದ. ಈ ಹಿನ್ನಲೆಯಲ್ಲಿ ನಿನ್ನೆ ಆತನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಪ್ರಸ್ತುತ ತೀವ್ರ ಹಲ್ಲೆಗೆ ಗುರಿಯಾಗಿರುವ ಪತ್ರಕರ್ತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಹೈದರ್ ಖಾನ್ ಎಂಬ ಪತ್ರಕರ್ತನ ಮೇಲೆ ಹಲ್ಲೆ ನಡೆದಿದ್ದು, ಸ್ಥಳೀಯ ಪ್ರಭಾವಿ ರಾಜಕಾರಣಿಯೊಬ್ಬರ ಅಕ್ರಮ ಭೂ ಒತ್ತುವರಿ ಕುರಿತು ಪತ್ರಕರ್ತ ಖಾಸಗಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟ ಮಾಡಿದ್ದನು. ಇದನ್ನು ವಿರೋಧಿಸಿದ್ದ ರಾಜಕಾರಣಿ ಮತ್ತು ಆತನ ಫುಡಾರಿ ಬೆಂಬಲಿಗರು ನಿನ್ನೆ ಸಂಜೆ ಸುಮಾರು 6 ಗಂಟೆಯ ಸುಮಾರಿನಲ್ಲಿ ನಾಲ್ಕೈದು ಮಂದಿ ದುಷ್ಕರ್ಮಿಗಳು ಪತ್ರಕರ್ತನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೆ ಕಾರಿಗೆ ಅವನನ್ನು ಕಟ್ಟಿಹಾಕಿ ಸುಮಾರು 100 ಮೀಟರ್ ದೂರದವರೆಗೂ ಎಳೆದೊಯ್ದಿದ್ದಾರೆ. ಪತ್ರಕರ್ತನ ತಲೆಗೆ ಪಿಸ್ತೂಲ್ ಇಟ್ಟು ಬೆದರಿಸಿದರು ಎಂದು ಪತ್ರಕರ್ತ ಆರೋಪಿಸಿದ್ದಾನೆ.
'ನಿನ್ನೆ ಸಂಜೆ ಸುಮಾರು 6 ಗಂಟೆಯ ಹೊತ್ತಿನಲ್ಲಿ ನನಗೊಂದು ಕರೆ ಬಂತು. ರಾಬರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿ ಕರೆ ಮಾಡಿ ತನಗೆ ಅಪಘಾತವಾಗಿದ್ದು, ಕಾಪಾಡುವಂತೆ ಕೇಳಿಕೊಂಡಿದ್ದ. ಹೀಗಾಗಿ ನಾನು ಕೂಡಲೇ ಘಟನಾ ಸ್ಥಳಕ್ಕೆ ತೆರಳಿದೆ. ಆದರೆ ಅಲ್ಲಿ ಸುಮಾರು ನಾಲ್ಕೈಜು ಜನ ದುಷ್ಕರ್ಮಿಗಳು ನಾನು ಬರುತ್ತಿದ್ದಂತೆಯೇ ನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದರು. ಅವರ ಕಾರಿನ ಹಿಂಬದಿಗೆ ನನ್ನನ್ನು ಕಟ್ಟಿ ಸುಮಾರು 100 ಮೀಟರ್ ವರೆಗೂ ಎಳೆದುಕೊಂಡು ಹೋದರು. ನನ್ನ ತಲೆಗೆ ಪಿಸ್ತೂಲ್ ಇಟ್ಟು ಬೆದರಿಕೆ ಹಾಕಿದರು ಎಂದು ಹೈದರ್ ಖಾನ್ ಹೇಳಿದ್ದಾನೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಫಿಲಿಬಿಟ್ ಎಸ್ ಪಿ ಜೆಕೆ ಜೋಷಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಳೆದ ಜೂನ್ 1 ರಂದು ಫೇಸ್ ಬುಕ್ ನಲ್ಲಿ ಸಚಿವ ರಾಮಮೂರ್ತಿ ಅವರ ಹಗರಣದ ಬಗ್ಗೆ ಬರೆದ ಎಂಬ ಕಾರಣಕ್ಕಾಗಿ ಸಾರ್ವಜನಿಕವಾಗಿಯೇ ಜಗೇಂದರ್ ಸಿಂಗ್ ಎಂಬ ಪತ್ರಕರ್ತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿತ್ತು. ಇಡೀ ದೇಶವನ್ನು ಬೆಚ್ಚಿ ಬೀಳಿಸಿದ್ದ ಈ ಪ್ರಕರಣ ಸಂಬಂಧ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಉತ್ತರ ಪ್ರದೇಶ ಸರ್ಕಾರ ಅಮಾನತುಗೊಳಿಸಿತ್ತು. ಅಲ್ಲದೆ ಉತ್ತರ ಪ್ರದೇಶ ಸಚಿವ ರಾಮಮೂರ್ತಿ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಇದಾದ ಕೆಲವೇ ದಿನಗಳಲ್ಲಿ ಇಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


