ಭಾರತೀಯ ಸೇನೆಯ ಮಯನ್ಮಾರ್ ಕಾರ್ಯಾಚರಣೆ ಇತರ ನೆರೆ ರಾಷ್ಟ್ರಗಳಿಗೆ ಎಚ್ಚರಿಕೆ ಸಂದೇಶ
ಭಾರತ-ಮಯನ್ಮಾರ್ ಗಡಿಯಲ್ಲಿ ನಡೆದಿರುವ ಸೇನಾ ಕಾರ್ಯಾಚರಣೆ ಭಯೋತ್ಪಾದನೆ ಉದ್ದೇಶ ಹೊಂದಿರುವ ಇತರ ನೆರೆ ರಾಷ್ಟ್ರಗಳಿಗೂ ಎಚ್ಚರಿಕೆ ಎಂದು ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೇಳಿದ್ದಾರೆ.

ನವದೆಹಲಿ: ಭಾರತ-ಮಯನ್ಮಾರ್ ಗಡಿಯಲ್ಲಿ ದಾಳಿ ನಡೆಸುವ ಮೂಲಕ ಭಯೋತ್ಪಾದಕರನ್ನು ಹತ್ಯೆ ಮಾಡಿರುವ ಭಾರತೀಯ ಸೇನೆ ಕಾರ್ಯಾಚರಣೆಗೆ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಇಲಾಖೆ ರಾಜ್ಯ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕ್ಷಿಪ್ರಗತಿಯ ಕಾರ್ಯಾಚರಣೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಆದೇಶದಿಂದ ಭಯೋತ್ಪಾದಕರ ಹತ್ಯೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದ್ದಾರೆ.
ಭಾರತೀಯ ಸೇನೆ ಅಪೂರ್ವ ಕಾರ್ಯಾಚರಣೆ ನಡೆಸಿದ್ದು, ಇದು ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರ ಎಂದು ಮಾಹಿತಿ ಹಾಗೂ ಪ್ರಸಾರ ಇಲಾಖೆ ರಾಜ್ಯ ಸಚಿವ ರಾಜ್ಯವರ್ಧನ್ ಸಿಂಗ್ ಹೇಳಿದ್ದಾರೆ. ಭಾರತದ ಯಾವುದೇ ಪ್ರದೇಶದ ಮೇಲೆ ಭಯೋತ್ಪಾದಕರ ದಾಳಿ ನಡೆದರೂ ಅದನ್ನು ಸಹಿಸುವುದಿಲ್ಲ. ಪರಿಣಾಮಕಾರಿ ಗುಪ್ತಚರ ಇಲಾಖೆ ಮಾಹಿತಿಯನ್ನು ಆಧರಿಸಿ ಭಯೋತ್ಪಾದಕರಿರುವ ಪ್ರದೇಶಗಳ ಮೇಲೆ ಇಂಥದ್ದೇ ದಾಳಿ ನಡೆಸುತ್ತೇವೆ ಎಂದು ಸಚಿವರು ಹೇಳಿದ್ದಾರೆ.
ಭಯೋತ್ಪಾದಕರನ್ನು, ಅವರ ಕ್ಯಾಂಪ್ ಗಳನ್ನು ನಾಶಮಾಡಲು ಭಾರತ-ಮಯನ್ಮಾರ್ ಗಡಿಯಲ್ಲಿ ನಡೆದಿರುವ ಸೇನಾ ಕಾರ್ಯಾಚರಣೆ ಭಯೋತ್ಪಾದನೆ ಉದ್ದೇಶ ಹೊಂದಿರುವ ಇತರ ನೆರೆ ರಾಷ್ಟ್ರಗಳಿಗೂ ಎಚ್ಚರಿಕೆಯಾಗಿದೆ, ನೆರೆ ರಾಷ್ಟ್ರಗಳೊಂದಿಗೆ ಉತ್ತಮ ಸ್ನೇಹ ಹಾಗೂ ಭಯೋತ್ಪಾದನೆ ವಿರುದ್ಧದ ಹೋರಾಟ ಜೊತೆಜೊತೆಗೇ ಸಾಗಲಿದೆ, ಮಯನ್ಮಾರ್ ಗಡಿ ಪ್ರದೇಶದಲ್ಲೀ ಭಾರತೀಯ ಸೇನೆ ನಡೆಸಿರುವ ಕಾರ್ಯಾಚರಣೆ ಪ್ರಾರಂಭವಷ್ಟೇ, ಭಾರತ ಶಕ್ತಿಶಾಲಿಯಾಗಿದ್ದು ಈ ಸಂದೇಶ ಎಲ್ಲರಿಗೂ ಅರ್ಥವಾಗಬೇಕು ಎಂದಿದ್ದಾರೆ.
ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಸೈನಿಕರಿಗೆ ಯಾವುದೇ ಹಾನಿಯಾಗಿಲ್ಲ. ಸೇನೆ ಪ್ರಬಲ ಸಾಮರ್ಥ್ಯ ಹೊಂದಿದೆ. ಅಲ್ಲದೇ ದಿಟ್ಟ ನಿರ್ಧಾರ ಕೈಗೊಳ್ಳುವಂತಹ ನಾಯಕ ಇರುವುದರಿಂದ ಮುಂದಿನ ದಿನಗಳಲ್ಲಿ ಭಯೋತ್ಪಾದನೆ ನಾಶ ಮಾಡಲು ಇಂತಹ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ರಾಜ್ಯವರ್ಧನ್ ಸಿಂಗ್ ತಿಳಿಸಿದ್ದಾರೆ.
ಮಣಿಪುರದಲ್ಲಿ ಕಳೆದ ವಾರ ನಡೆದ ಭಯೋತ್ಪಾದಕರ ದಾಳಿಯಲ್ಲಿ ಸೇನೆಯ 18 ಯೋಧರು ಮೃತಪಟ್ಟಿದ್ದರು. ಮಯನ್ಮಾರ್-ಭಾರತದ ಗಡಿಯಲ್ಲಿರುವ ಭಯೋತ್ಪಾದಕರನ್ನು ಹಾಗೂ ಅವರ ಎರಡು ಕ್ಯಾಂಪ್ ಗಳನ್ನು ನಾಶ ಮಾಡುವ ಮೂಲಕ ಭಾರತ ಪ್ರತೀಕಾರ ತೀರಿಸಿಕೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


