ದೇಶ

ಪ್ರತಿಪಕ್ಷಗಳಿಗೆ ಸಡ್ಡು ಹೊಡೆಯಲು ಬಿಜೆಪಿ ಕಾರ್ಯತಂತ್ರ

ಒಂದು ಕಡೆ ಮಂಗಳವಾರ ಆರಂಭವಾಗುವ ಸಂಸತ್‍ನ ಮುಂಗಾರು ಅಧಿವೇಶನದಲ್ಲಿ ಆಡಳಿತಾರೂಢ ಎನ್ ಡಿಎಯನ್ನು ಪೇಚಿಗೆ ಸಿಲುಕಿಸಲು ಪ್ರತಿಪಕ್ಷಗಳು ಸನ್ನದ್ಧವಾಗಿದ್ದರೆ, ಮತ್ತೊಂದೆಡೆ ಪ್ರತಿಪಕ್ಷಗಳ ವಾಗ್ಬಾಣಗಳನ್ನು ಎದುರಿಸಲು ಎನ್‍ಡಿಎ ಕಾರ್ಯತಂತ್ರ ರೂಪಿಸಿದೆ...

ಪ್ರತಿಪಕ್ಷಗಳಿಗೆ ಸಡ್ಡು ಹೊಡೆಯಲು ಬಿಜೆಪಿ ಕಾರ್ಯತಂತ್ರ
ಪ್ರಧಾನಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Published On :

ನವದೆಹಲಿ: ಒಂದು ಕಡೆ ಮಂಗಳವಾರ ಆರಂಭವಾಗುವ ಸಂಸತ್‍ನ ಮುಂಗಾರು ಅಧಿವೇಶನದಲ್ಲಿ ಆಡಳಿತಾರೂಢ ಎನ್ ಡಿಎಯನ್ನು ಪೇಚಿಗೆ ಸಿಲುಕಿಸಲು ಪ್ರತಿಪಕ್ಷಗಳು ಸನ್ನದ್ಧವಾಗಿದ್ದರೆ, ಮತ್ತೊಂದೆಡೆ ಪ್ರತಿಪಕ್ಷಗಳ ವಾಗ್ಬಾಣಗಳನ್ನು ಎದುರಿಸಲು ಎನ್‍ಡಿಎ ಕಾರ್ಯತಂತ್ರ ರೂಪಿಸಿದೆ.

ವಸುಂಧರಾ, ಸುಷ್ಮಾ ಸ್ವರಾಜ್ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಕೇಳಿಬಂದಿರುವ ಆರೋಪವನ್ನೇ ಅಸ್ತ್ರವನ್ನಾಗಿ ಬಳಸಲು ಪ್ರತಿಪಕ್ಷಗಳು ಸಜ್ಜಾಗಿವೆ. ಇದನ್ನರಿತ ಬಿಜೆಪಿಯು, ತಮ್ಮ ನಾಯಕರನ್ನು ಸಮರ್ಥಿಸಿಕೊಳ್ಳದೇ ಪ್ರತಿಪಕ್ಷಗಳ ವಿರುದ್ಧ ಹೇಗೆ ಪ್ರತಿತಂತ್ರ ಹೂಡಬೇಕು ಎಂಬ ಬಗ್ಗೆ ಭಾನುವಾರ ದೆಹಲಿಯಲ್ಲಿ ನಡೆದ ಹೈಪ್ರೊಫೆಲ್ ಸಭೆಯಲ್ಲಿ ಚರ್ಚೆ ನಡೆಸಿದೆ. ಇದೇ ವೇಳೆ, ಕೇಂದ್ರ ಸರ್ಕಾರದ ವಿವಾದಾತ್ಮಕ ಭೂಸ್ವಾಧೀನ ವಿಧೇಯಕವು ಈ ಅಧಿವೇಶ ನದಲ್ಲಿ ಮಂಡನೆಯಾಗುವ ಸಾಧ್ಯತೆಯಿಲ್ಲ. ಹೀಗಾಗಿ, ಅಧಿವೇಶನ ಮುಗಿದೊಡನೆ 4ನೇ ಬಾರಿ ಭೂ ಸುಗ್ರೀವಾಜ್ಞೆ ತರಲು ಮೋದಿ ಸರ್ಕಾರ ಚಿಂತನೆ ನಡೆಸಿದೆ.

ಶಾ ಭೇಟಿಯಾದ ರಾಜೇ, ಚೌಹಾಣ್: ಕೇಂದ್ರ ಸಚಿವರಾದ ಜೇಟ್ಲಿ, ಸುಷ್ಮಾ ಸ್ವರಾಜ್, ಸ್ಮೃತಿ ಇರಾನಿ, ರವಿಶಂಕರ್ ಪ್ರಸಾದ್, ಪಿಯೂಷ್ ಗೋಯಲ್ ಮತ್ತಿತರರ ಜೊತೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಮಾತುಕತೆ ನಡೆಸಿದ್ದಾರೆ. ಜತೆಗೆ, ಲಲಿತ್ ಮೋದಿ ಪ್ರಕರಣದಲ್ಲಿ ಸಿಲುಕಿರುವ ರಾಜಸ್ಥಾನ ಸಿಎಂ ವಸುಂಧರಾ ರಾಜೇ, ವ್ಯಾಪಂ ಹಗರಣದ ಆರೋಪ ಎದುರಿಸುತ್ತಿರುವ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರೂ ಶಾರನ್ನು ಭೇಟಿಯಾಗಿದ್ದಾರೆ.

ಅಧಿವೇಶನದಲ್ಲಿ ಪ್ರತಿಪಕ್ಷಗಳ ವಾಗ್ದಾಳಿಯನ್ನು ಎದುರಿಸುವ ಕುರಿತು ಈ ಸಭೆಯಲ್ಲಿ ಕಾರ್ಯತಂತ್ರ ರೂಪಿಸಲಾಗಿದೆ. ಇದೇ ವೇಳೆ ಸೋಮವಾರ ಎನ್ ಡಿಎ ಸಭೆಯಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ. ಅದಕ್ಕೂ ಮೊದಲು ಎಂ.ವೆಂಕಯ್ಯನಾಯ್ಡು ಹಾಗೂ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಕರೆದಿರುವ ಪ್ರತ್ಯೇಕ ಸರ್ವಪಕ್ಷ ಸಭೆಯಲ್ಲೂ ಅವರು ಭಾಗವಹಿಸಲಿದ್ದಾರೆ. ಭಾನುವಾರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯೂ ನಡೆಯಲಿದೆ.

ಮತ್ತೊಮ್ಮೆ ಭೂ ಸುಗ್ರೀವಾಜ್ಞೆ ಜಾರಿ?:
ಭೂಸ್ವಾಧೀನ ವಿಧೇಯಕದ ಅಂಗೀಕಾರಕ್ಕೆ ಇನ್ನಿಲ್ಲದ ಕಸರತ್ತು ನಡೆಸಿದರೂ ಕೇಂದ್ರದ ಯತ್ನ ಫಲಿಸಿಲ್ಲ. ಪ್ರತಿಪಕ್ಷಗಳ ವಿರೋಧದಿಂದಾಗಿ ಈ ಅಧಿವೇಶನದಲ್ಲೂ ವಿಧೇಯಕ ಅಂಗೀಕಾರ ಸಾಧ್ಯತೆಯಿಲ್ಲ. ಅಲ್ಲದೆ, ವಿಧೇಯಕದ ಬಗ್ಗೆ ಪರಿಶೀಲನೆ ನಡೆಸುತ್ತಿರುವ ಬಿಜೆಪಿ ಸಂಸದ ಎಸ್.ಎಸ್. ಅಹ್ಲುವಾಲಿಯಾ ನೇತೃತ್ವದ ಜಂಟಿ ಸಂಸದೀಯ ಸಮಿತಿಯು, ವರದಿಯನ್ನು ಅಂತಿಮಗೊಳಿಸಲು ಇನ್ನೂ 2 ವಾರ ಕಾಲಾವಕಾಶ ಕೋರಲು ನಿರ್ಧರಿಸಿದೆ. ಹೀಗಾಗಿ ಸಮಿತಿಯ ವರದಿಯೂ ಅಧಿವೇಶನದ ಅವಧಿಯಲ್ಲಿ ಬರುವುದಿಲ್ಲ ಎಂಬುವುದು ಸರ್ಕಾರಕ್ಕೆ ಖಾತ್ರಿಯಾಗಿದೆ. ಈ ಹಿನ್ನೆಲೆಯಲ್ಲಿ ಸತತ 4ನೇ ಬಾರಿಗೆ ಭೂ ಸುಗ್ರೀವಾಜ್ಞೆ ಮಸೂದೆ ಜಾರಿ ಮಾಡಲು ಸರ್ಕಾರ ಚಿಂತನೆ ನಡೆಸುತ್ತಿದೆ.

ಭೂ ವಿಧೇಯಕ: ಎಸ್ಸಿ, ಬಿಎಸ್ಪಿ ಬೆಂಬಲ?:
ಭೂ ವಿಧೇಯಕ ಅಂಗೀಕಾರಕ್ಕಾಗಿ ಪ್ರಧಾನಿ ಮೋದಿ ಅವರು ಮುಲಾಯಂ ಸಿಂಗ್ ಯಾದವ್, ಮಾಯಾವತಿ ಹಾಗೂ ಮಮತಾ ಬ್ಯಾನರ್ಜಿ ಅವರ ನೆರವು ಕೋರಿದ್ದಾರೆ ಎಂಬ ಊಹಾಪೋಹಗಳ ನಡುವೆಯೇ ಎಸ್ಪಿ ಹಾಗೂ ಬಿಎಸ್ಪಿ ವಿಧೇಯಕಕ್ಕೆ ಬೆಂಬಲ ನೀಡಲಿವೆ ಎಂಬ ಸುದ್ದಿ ಕೇಳಿಬರತೊಡಗಿದೆ. ಆದರೆ, ಮಮತಾ ಅವರ ತೃಣಮೂಲ ಕಾಂಗ್ರೆಸ್ ಮಾತ್ರ ಪಟ್ಟುಸಡಿಲಿಸಿಲ್ಲ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.