ದೇಶ

ಯೋಧನ ತಲೆಕಡಿದಿದ್ದ ಉಗ್ರನ ಹತ್ಯೆ

ಎರಡು ವರ್ಷದ ಹಿಂದೆ ಭಾರತೀಯರ ಸ್ವಾಭಿಮಾನ, ಆತ್ಮಗೌರವಕ್ಕೇ ಸವಾಲು ಹಾಕಿದ್ದ ಯೋಧ ಲ್ಯಾನ್ಸ್ ನಾಯಕ್ ಹೇಮ್ ರಾಜ್ ಸಿಂಗ್‍ರ ಭೀಕರ ಹತ್ಯೆಗೆ ಸೇನೆ...

ಯೋಧನ ತಲೆಕಡಿದಿದ್ದ ಉಗ್ರನ ಹತ್ಯೆ
ಭಾರತೀಯ ಯೋಧ
Published On :

ನವದೆಹಲಿ: ಎರಡು ವರ್ಷದ ಹಿಂದೆ ಭಾರತೀಯರ ಸ್ವಾಭಿಮಾನ, ಆತ್ಮಗೌರವಕ್ಕೇ ಸವಾಲು ಹಾಕಿದ್ದ ಯೋಧ ಲ್ಯಾನ್ಸ್ ನಾಯಕ್ ಹೇಮ್ ರಾಜ್ ಸಿಂಗ್‍ರ ಭೀಕರ ಹತ್ಯೆಗೆ ಸೇನೆ ಕೊನೆಗೂ ಪ್ರತೀಕಾರ ತೀರಿಸಿಕೊಂಡಿದೆ. ಹೇಮ್ ರಾಜ್ ಸಿಂಗ್‍ರನ್ನು ತಲೆಕಡಿದು ಹತ್ಯೆ ಮಾಡಿದ್ದ ಲಷ್ಕರ್ -ಎ- ತೊಯ್ಬಾ ಉಗ್ರನನ್ನು ಹೊಡೆದುರುಳಿಸಿದೆ. ಲಷ್ಕರ್‍ನ ವಿಭಾಗೀಯ ಕಮಾಂಡರ್ ಆಗಿದ್ದ ಅನ್ವರ್ ಫಯಾಜ್ ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಭಾರತೀಯ ಯೋಧರ ಗುಂಡಿಗೆ ಬಲಿಯಾಗಿದ್ದಾನೆ. ಜ.8, 2013ರಂದು ಲ್ಯಾನ್ಸ್ ನಾಯಕ್ ಹೇಮ್ರಾಜ್ ಸಿಂಗ್‍ರನ್ನು ಭಾರತದ ಗಡಿಯೊಳಗೆ ನುಸುಳಿ ಉಗ್ರ ಅನ್ವರ್ ಫಯಾಜ್ ಹತ್ಯೆ ಮಾಡಿದ್ದ. ಇದು ಭಾರತಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಿಗೂ ಅಪ್‍ಲೋಡ್ ಆಗಿದ್ದು ಭಾರತೀಯರ ಆಕ್ರೋಶವನ್ನು ಹೆಚ್ಚಿಸಿತ್ತು. ಫಯಾಜ್ ಸಂಗ್ರಿಲಾದ ಮೂಲಕ ಇನ್ನಿಬ್ಬರು ಉಗ್ರರ ಜತೆಗೆ ಜು.13ರಂದು ಭಾರತೀಯ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದ್ದಾಗ ರಕ್ಷಣಾ ಪಡೆಗಳ ಕಣ್ಣಿಗೆ ಬಿದ್ದಿದ್ದಾನೆ. ಈ ವೇಳೆ ಬಿಎಸ್‍ಎಫ್  ಹಾಗೂ ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಫಯಾಜ್ ಸೇರಿ ಇನ್ನಿಬ್ಬರನ್ನು ಹೊಡೆದುರುಳಿಸಲಾಗಿದೆ. ಉಗ್ರನಿಂದ ಎ. ಕೆ.-47 ರೈಫಲ್‍ಗಳು, ಭಾರತ ಮತ್ತು ಪಾಕಿಸ್ತಾನದ ಕರೆನ್ಸಿ, ಮೊಬೈಲ್‍ಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಈಗ ವೀಸಾ ವಾರ್: ಮಾತಿನ ಸಮರ, ಗಡಿ ಸಮರದ ನಡುವೆಯೇ ಈಗ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಹೊಸ ವಾರ್ ಶುರುವಾಗಿದೆ.

ಅದು ವೀಸಾ ವಾರ್! ಪಾಕಿಸ್ತಾನ ತನ್ನ 12 ಅಧಿಕಾರಿಗಳಿಗೆ ವೀಸಾ ನೀಡಿಲ್ಲ ಎಂದು ಭಾರತ ಆರೋಪಿಸಿದೆ. ಆದರೆ, ಪಾಕಿಸ್ತಾನ ಮಾತ್ರ ಈ ಆರೋಪವನ್ನು ತಳ್ಳಿಹಾಕಿದೆ. ಬದಲಾಗಿ, ಭಾರತ ವಿನಾ ಕಾರಣ ವೀಸಾ ವಿಚಾರದಲ್ಲಿ ತಕರಾರು ತೆಗೆಯುತ್ತಿದೆ ಎನ್ನುವ ಪ್ರತಿ ಆರೋಪ ಮಾಡಿದೆ. ಭಾರತವು ಪ್ರತಿಯೊಂದು ಆಡಳಿತಾತ್ಮಕ ವಿಚಾರವನ್ನು ಒಂದಕ್ಕೊಂದು ಲಿಂಕ್ ಮಾಡುತ್ತದೆ. ನಾವು ಇತ್ತೀಚೆಗೆ ಭಾರತೀಯ ಅನೇಕ ಅಧಿಕಾರಿಗಳಿಗೆ ವೀಸಾ ನೀಡಿದ್ದೇವೆ. ಆದರೆ, ಭಾರತ ಮಾತ್ರ ನಮ್ಮ ಅಧಿಕಾರಿಗಳಿಗೆ ವೀಸಾ ನೀಡಲು ಹಿಂದೇಟು ಹಾಕುತ್ತಿದೆ. ಹಲವು ತಿಂಗಳಿಂದ ವೀಸಾಕ್ಕಾಗಿ ಕಾಯುತ್ತಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಆದರೆ ಮೂಲಗಳ ಪ್ರಕಾರ, ಐವರು ಹೊರತುಪಡಿಸಿ ಉಳಿದೆಲ್ಲ ಪಾಕಿಸ್ತಾನಿ ಅಧಿಕಾರಿಗಳಿಗೆ ವೀಸಾ ನೀಡಲಾಗಿದೆ. ಐದು ಮಂದಿಗೆ ಮಹತ್ವದ ಕಾರಣಗಳಿಂದಾಗಿ ಈವರೆಗೆ ವೀಸಾ ನೀಡಿಲ್ಲ. ಈ ನಡುವೆ, ಅಂತಾರಾಷ್ಟ್ರೀಯ ಯೋಗದಿನದಂದು ಇಸ್ಲಾಮಾಬಾದ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಯೋಗ ಶಿಕ್ಷಕರೊಬ್ಬರಿಗೆ ಪಾಕ್ ವೀಸಾ ನೀಡಲು ನಿರಾಕರಿಸಿತ್ತು. ಪಾಕಿಸ್ತಾನ ಉದ್ದೇಶಪೂರ್ವಕವಾಗಿ ಈ ನಡೆ ಅನುಸರಿಸಿದೆ ಎಂಬುದು ಭಾರತದ ಆರೋಪ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.