ವ್ಯಾಪಂ ಹಗರಣ ಸಿಬಿಐ ತನಿಖೆಗೆ ನೀಡಿದ್ದರಿಂದ ನನ್ನ ಮೇಲಿದ್ದ ಭಾರ ಇಳಿಯಿತು: ಚೌಹಾಣ್
ವ್ಯಾಪಂ ಹಗರಣದ ತನಿಖೆಯನ್ನು ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ಒಪ್ಪಿಸಿದ್ದರಿಂದ ನನ್ನ ಮೇಲಿದ್ದ ಭಾರ ಇಳಿಯಿತು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗುರುವಾರ ಹೇಳಿದ್ದಾರೆ...

ಭೂಪಾಲ್: ವ್ಯಾಪಂ ಹಗರಣದ ತನಿಖೆಯನ್ನು ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ಒಪ್ಪಿಸಿದ್ದರಿಂದ ನನ್ನ ಮೇಲಿದ್ದ ಭಾರ ಇಳಿಯಿತು ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗುರುವಾರ ಹೇಳಿದ್ದಾರೆ.
ವ್ಯಾಪಂ ಹಗರಣದ ತನಿಖೆಯನ್ನು ಮಧ್ಯಪ್ರದೇಶದ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದ್ದರೂ, ಪ್ರಕರಣ ಸಂಬಂಧ ಭಾಗಿಯಾಗಿದ್ದ ಆರೋಪಿಗಳು ಹಾಗೂ ಪ್ರಮುಖ ಸಾಕ್ಷಿದಾರರು ಎನ್ನಲಾಗುತ್ತಿದ್ದ ವ್ಯಕ್ತಿಗಳು ಅನುಮಾನಾಸ್ಪದವಾಗಿ ಸಾವನ್ನಪ್ಪುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸುವಂತೆ ಹಲವು ಪ್ರತಿಭಟನೆಗಳು ನಡೆದವು. ಅಲ್ಲದೆ, ವಿರೋಧ ಪಕ್ಷಗಳು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರ ವಿರುದ್ಧ ವ್ಯಾಪಕ ಟೀಕೆಗಳನ್ನು ವ್ಯಕ್ತಪಡಿಸಿ ರಾಜಿನಾಮೆ ನೀಡುವಂತೆ ಆಗ್ರಹಿಸಿದ್ದವು.
ಹೀಗಾಗಿ ಮಧ್ಯಪ್ರದೇಶದಲ್ಲಿ ಉಂಟಾದ ಬಿಗು ವಾತಾವರಣದಿಂದಾಗಿ ಶಿವರಾಜ್ ಸಿಂಗ್ ಅವರು ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸಲು ಒಪ್ಪಿಕೊಂಡಿದ್ದರು. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಮಧ್ಯಪ್ರದೇಶದ ಹೈಕೋರ್ಟ್ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಲು ಸುಪ್ರೀಂಕೋರ್ಟ್ ನ ಒಪ್ಪಿಗೆ ಅಗತ್ಯವಿದೆ ಎಂದು ಹೇಳಿತ್ತು. ಹೀಗಾಗಿ ನಿನ್ನೆಯಷ್ಟೇ ಶಿವರಾಜ್ ಸಿಂಗ್ ಅವರು ಸುಪ್ರೀಂಕೋರ್ಟ್ ಗೆ ಮನವಿ ಮಾಡಲು ದೆಹಲಿಗೆ ಹೋಗಿದ್ದರು. ಈ ಎಲ್ಲಾ ಬೆಳವಣೆಗಳನ್ನು ಗಮನಿಸಿದ ಸುಪ್ರೀಂಕೋರ್ಟ್ ಇಂದು ವಿಚಾರಣೆ ನಡೆಸಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸಿದೆ.
ಈ ಕುರಿತಂತೆ ಮಾತನಾಡಿರುವ ಶಿವರಾಜ್ ಸಿಂಗ್ ಚೌಹಾಣ್ ಅವರು, ಪ್ರಕರಣ ಸಂಬಂಧ ನನ್ನ ಮೇಲಿದ್ದ ಭಾರ ಇದೀಗ ಇಳಿದಿದೆ. ಪ್ರಕರಣ ಇದೀಗ ಸಿಬಿಐ ಕೈಯಲ್ಲಿದ್ದು, ಸತ್ಯಾಂಶಗಳು ಶೀಘ್ರದಲ್ಲೇ ಬಯಲಿಗೆ ಬರಲಿದೆ. ಕಾಂಗ್ರೆಸ್ ಪಕ್ಷದವರಿಗೆ ಶಿವರಾಜ್ ಫೋಬಿಯಾ ಬಂದಿದೆ. ಹೀಗಾಗಿ ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ನನ್ನ ಮೇಲೆ ದ್ವೇಷವಿದ್ದರೆ, ರಾಜ್ಯದ ವಿಷಯಗಳನ್ನು ತೆಗೆದುಕೊಂಡು ನನ್ನ ವಿರುದ್ಧ ಪ್ರಚಾರ ಮಾಡುವ ಬದಲು ನೇರವಾಗಿ ನನ್ನ ಮುಂದೆ ಬರಲಿ. ಅದನ್ನು ಎದುರಿಸಲು ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ವ್ಯಾಪಂ ಹಗರಣವನ್ನು ಸಿಬಿಐ ತನಿಖೆಗೊಪ್ಪಿಸಲು ಸಾಧ್ಯವಿಲ್ಲ ಎಂದು ಸುಲಭವಾಗಿ ಹೇಳಬಹುದಿತ್ತು. ಆದರೆ, ನಾನು ಅದನ್ನು ಮಾಡಲಿಲ್ಲ. ಈ ರೀತಿ ಮಾಡುವುದರಿಂದ ಒಬ್ಬರಿಗೊಬ್ಬರು ಕೆಸರೆರಚಾಟಕ್ಕೆ ಕಾರಣವಾಗುತ್ತದೆಯೇ ಹೊರತು ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಹಾಗಾಗಿಯೇ ನಾನು ಸಿಬಿಐ ತನಿಖೆಗೆ ನೀಡಲು ಒಪ್ಪಿಗೆ ನೀಡಿದೆ. ರಾಜ್ಯ ಪೊಲೀಸರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿದರು. ನಮ್ಮ ಮೇಲೆ ಕಾಂಗ್ರೆಸ್ ಪಕ್ಷದವರು ಕೆಲವು ಆರೋಪಗಳನ್ನು ಮಾಡಿ, ಮಧ್ಯಪ್ರದೇಶದ ವರ್ಚಸ್ಸು ಹಾಳು ಮಾಡಲು ಪ್ರಯತ್ನ ನಡೆಸಿದರು. ಅದು ನನಗೆ ಬಹಳ ನೋವುಂಟು ಮಾಡಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


