ಅಲ್ಪಸಂಖ್ಯಾತರ ಅಭಿವೃದ್ಧಿಗೆ ಯುಪಿಎಗಿಂತ ಮೋದಿ ಸರ್ಕಾರದಿಂದಲೇ ಹೆಚ್ಚಿನ ನೆರವು !
ಮೋದಿ ಸರ್ಕಾರ ಅಲ್ಪಸಂಖ್ಯಾತ ವಿರೋಧಿ ಎಂಬ ಆರೋಪ ಪೂರ್ವಾಗ್ರಹವಾದದ್ದು ಎಂಬುದನ್ನು ಇಲ್ಲೊಂದು ವರದಿ ಸಾಬೀತುಪಡಿಸಿದೆ.

ನವದೆಹಲಿ: ಮಹಾರಾಷ್ಟ್ರ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರಲ್ಲಿ ಭಯ ಉಂಟು ಮಾಡುತ್ತಿದೆ ಎಂದು ಕಾಂಗ್ರೆಸ್ ದೂರುತ್ತಿರಬಹುದು, ಅಷ್ಟೇ ಏಕೆ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಅಲ್ಪಸಂಖ್ಯಾತರಿಗೆ ಉಳಿಗಾಲವೇ ಇಲ್ಲ ಎಂದು ಚುನಾವಣಾ ಪ್ರಚಾರಗಳಲ್ಲಿ ಕಾಂಗ್ರೆಸ್ ಆರೋಪ ಮಾಡಿತ್ತು.
ಮೋದಿ ಸರ್ಕಾರ ಅಲ್ಪಸಂಖ್ಯಾತ ವಿರೋಧಿ ಎಂಬ ಆರೋಪ ಪೂರ್ವಾಗ್ರಹವಾದದ್ದು ಎಂಬುದನ್ನು ಇಲ್ಲೊಂದು ವರದಿ ಸಾಬೀತುಪಡಿಸಿದೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಪ್ರಕಟವಾದ ವರದಿ ಪ್ರಕಾರ ಅಲ್ಪಸಂಖ್ಯಾತರರ ಕಾಳಜಿ ಹಾಗೂ ಅವರಿಗೆ ಬಿಡುಗಡೆ ಮಾಡುವ ಅನುದಾನದ ವಿಷಯದಲ್ಲಿ ಯುಪಿಎ ಸರ್ಕಾರಕ್ಕಿಂತಲೂ ಬಿಜೆಪಿ ನೇತೃತ್ವದ ಎನ್.ಡಿ.ಎ ಸರ್ಕಾರವೇ ಉತ್ತಮವಾಗಿದೆ.
ನಿರೀಕ್ಷೆಯಂತೆ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ರದ್ದುಪಡಿಸುವ ಬದಲು ನರೇಂದ್ರ ಮೋದಿ ಸರ್ಕಾರ, ಯುವ ಮುಸ್ಲಿಮ್ ಮಹಿಳೆಯರಲ್ಲಿ ನಾಯಕತ್ವ ಉತ್ತೇಜಿಸುವ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿದೆ. ಈ ಯೋಜನೆ ಯುಪಿಎ-2 ಅವಧಿಯಲ್ಲೇ ರೂಪುಗೊಂಡಿತ್ತಾದರೂ ಈ ವರೆಗೂ ಅದು ಜಾರಿಯಾಗಿರಲಿಲ್ಲ.
ನಯೀ ರೋಷನೀ( ಹೊಸ ಬೆಳಕು) ಎಂಬ ಈ ಯೋಜನೆ 2010 ರಲ್ಲೇ ರೂಪುಗೊಂಡು ಕೆಲ ಹಂತಗಳಲ್ಲಿ ಜಾರಿಯೂ ಆಗಿತ್ತು. ಆದರೆ ಅಕ್ಟೋಬರ್ 2012 ರಿಂದ ಅಲ್ಪಸಂಖ್ಯಾತ ಸಚಿವರಾಗಿದ್ದ ಕೆ. ರೆಹಮಾನ್ ಖಾನ್ ಅವರು ಈ ಯೋಜನೆಗಾಗಿ ಒಂದೇ ಒಂದು ರೂಪಾಯಿಯಷ್ಟು ಹಣ ಬಿಡುಗಡೆ ಮಾಡಿರಲಿಲ್ಲ. 2012 -13 ನೇ ಸಾಲಿನಲ್ಲಿ ಈ ಯೋಜಯಡಿ 36,950 ಫಲಾನುಭವಿಗಳಿದ್ದು 10 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ(2014 -15 ನೇ ಸಾಲಿನಲ್ಲಿ) ಮೋದಿ ಸರ್ಕಾರದ ಅಲ್ಪಸಂಖ್ಯಾತ ಸಚಿವಾಲಯದಿಂದ ಒಟ್ಟು 13.48 ಕೋಟಿ ರೂಪಾಯಿ ವೆಚ್ಚದಲ್ಲಿ 68,675 ಫಲಾನುಭವಿಗಳು ಯೋಜನೆಯ ಲಾಭ ಪಡೆದಿದ್ದಾರೆ.
ವಕ್ಫ್ ಮಂಗಳಿಗಳನ್ನು ಡಿಜಿಟಲೀಕರಣಗೊಳಿಸಲು 2012 -13 ರಲ್ಲಿ ಯುಪಿಎ ಸರ್ಕಾರ 89 ಲಕ್ಷ ಖರ್ಚು ಮಾಡಿತ್ತು, ಆದರೆ ಈಗ ಎನ್.ಡಿ.ಎ ಸರ್ಕಾರ ವಕ್ಫ್ ಮಂಗಳಿಗಳನ್ನು ಡಿಜಿಟಲೀಕರಣಗೊಳಿಸಲು 3 ಕೋಟಿ ರೂಪಾಯಿ ಖರ್ಚು ಮಾಡಿದೆ. ವಕ್ಫ್ ಮಂಡಳಿ ಅಭಿವೃದ್ಧಿಗಾಗಿ ಯುಪಿಎ ಸರ್ಕಾರ ಘೋಷಿಸಿದ್ದ 7 ಪೈಕಿ 1 .91 ಕೋಟಿ ರೂಪಾಯಿ ಮಾತ್ರ ಖರ್ಚು ಮಾಡಿದ್ದರೆ, ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ 4 ಕೋಟಿ ರೂಪಾಯಿಯಷ್ಟು ಹಣವನ್ನು ಖರ್ಚು ಮಾಡಿದೆ.
ಇನ್ನು ಮದರಸಾಗಳ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದಕ್ಕಾಗಿ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ನಯಿ ಮಂಜಿಲ್ ನನ್ನು ಪ್ರಾಂಭಿಸಿದ್ದು, ಉದ್ಯೋಗಾವಕಾಶಗಳನ್ನು ಒದಗಿಸಲು ನೆರವಾಗುತ್ತಿದೆ. ವರ್ಷದ ಬಜೆಟ್ ನಲ್ಲಿ ಎನ್.ಡಿ.ಎ ಸರ್ಕಾರ ಅಲ್ಪಸಂಖ್ಯಾತ ಸಚಿವಾಲಯಕ್ಕೆ 3 ,712 .78 ಕೋಟಿ ರೂಪಾಯಿ ಅನುದಾನ ನೀಡಿದ್ದು, ಅಲ್ಪಸಂಖ್ಯಾತ ಸಚಿವಾಲಯಕ್ಕೆ ಪ್ರತಿ ಬಾರಿಗಿಂತ ಈ ಬಾರಿ ಹೆಚ್ಚಿನ ಅನುದಾನ ದೊರೆತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


