ದೇಶ

ವಿಮಾನ ಹಾರಾಟ ನಿಷೇಧ: ಅಮೆರಿಕ ಬೇಡಿಕೆಗೆ ಒಪ್ಪಿಗೆ

ವಿಮಾನ ಹಾರಾಟ ನಿಷೇಧ: ಅಮೆರಿಕ ಬೇಡಿಕೆಗೆ ಒಪ್ಪಿಗೆ
ರಾಜಪಥ
Published On :

ನವದೆಹಲಿ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜ.26ರಂದು ರಾಜಪಥದ ಮೇಲೆ ವಿಮಾನ ಹಾರಾಟ ನಿಷೇಧಿಸಲು ಭಾರತ ಕೊನೆಗೂ ಒಪ್ಪಿದೆ.

ಒಬಾಮ ಸುರಕ್ಷತೆಗಾಗಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯುವ ರಾಜಪಥದ ಮೇಲೆ ವಿಮಾನ ಹಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಅಮೆರಿಕದ ಭದ್ರತಾ ಸಂಸ್ಥೆಗಳು ಒತ್ತಾಯಿಸಿದ್ದವು. ಆದರೆ, ಭಾರತ ಈ ಒತ್ತಾಯವನ್ನು ನಯವಾಗಿ ತಿರಸ್ಕರಿಸಿತ್ತು. ಆದರೆ, ಈಗ ಅಮೆರಿಕದ ಈ ಪ್ರಸ್ತಾಪವನ್ನು ಒಪ್ಪಿಕೊಂಡಿದೆ. ಆದರೆ, ಅಂದು ವೈಮಾನಿಕ ಪ್ರದರ್ಶನ ನೀಡಲಿರುವ ವಾಯುಸೇನೆಯ ವಿಮಾನಗಳ ಹಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಆಕಾಶದ ಮೇಲೂ ಕಣ್ಣು: ಅಮೆರಿಕ ಅಧ್ಯಕ್ಷರ ಮೇಲೆ ಆಗಸದಲ್ಲೂ ದಾಳಿ ನಡೆಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ರಾಜಪಥದ ಸುತ್ತ ವೈಮಾನಿಕ ಎಚ್ಚರಿಕೆ ಹಾಗೂ ನಿಯಂತ್ರಣ ವ್ಯವಸ್ಥೆ ಅಳವಡಿಸಲಾಗಿದೆ. ಅಮೆರಿಕದ ಬೇಡಿಕೆಯಂತೆ ಈ ವ್ಯವಸ್ಥೆಯನ್ನು ಅಳವಡಿಸಲಾಗುತ್ತಿದೆ. ಅದು 400 ಕಿ.ಮೀ. ದೂರದಿಂದಲೂ ಹಾರಿ ಬರುವ ಕ್ಷಿಪಣಿಗಳು ಹಾಗೂ ವಿಮಾನಗಳನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ಹೊಂದಿವೆ. ಇದೇ ವೇಳೆ, ದೆಹಲಿಯಲ್ಲಿ ಪ್ರಯಾಣಿಕರ ವಿಮಾನಗಳ ಹಾರಾಟದ ಕನಿಷ್ಠ ಎತ್ತರವನ್ನು 32 ಸಾವಿರ ಅಡಿಯಿಂದ 35 ಸಾವಿರ ಅಡಿಗೆ ಏರಿಸಲಾಗಿದೆ.

ಏರ್‍ಪೋರ್ಟ್ ಬಂದ್: ರಾಜಪಥದ ಮೇಲೆ ವಿಮಾನ ಹಾರಾಟದ ಮೇಲಿನಿ ನಿಷೇಧದ ಪರಿಣಾಮ ದೆಹಲಿ ಸೇರಿದಂತೆ ಅಕ್ಕಪಕ್ಕದ ಎಲ್ಲ ವಿಮಾನ ನಿಲ್ದಾಣಗಳ ಮೇಲೂ ಬೀಳಲಿದೆ. ರಾಜಪಥದಲ್ಲಿ ಕಾರ್ಯಕ್ರಮ ನಡೆಯುವವರೆಗೆ ದೆಹಲಿ, ಜೈಪುರ, ಅಮೃತಸರ, ಲಖನೌ, ಆಗ್ರಾ ವಿಮಾನ ನಿಲ್ದಾಣಗಳಲ್ಲಿ ವಿಮಾನ ಹಾರಾಟ ಸ್ಥಗಿತಗೊಳ್ಳಲಿದೆ.

ಕಟ್ಟಡಗಳಿಗೂ ಬಾಗಿಲು: ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯುವ ವರೆಗೆ ರಾಜಪಥದ ಅಕ್ಕಪಕ್ಕ ಇರುವ ಬಹುಮಹಡಿ ಕಟ್ಟಡಗಳಿಗೂ ಬೀಗ ಬೀಳಲಿದೆ. ಒಬಾಮ ಭದ್ರತೆ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಕಣ್ಗಾವಲು ಕಾರ್ಯಾಚರಣೆ ಪರಿಶೀಲನೆಗಾಗಿಯೇ ಬಹುಸಂಸ್ಥೆಯ ಪರಿಶೀಲನಾ ಕೊಠಡಿ ಸ್ಥಾಪಿಸಲೂ ನಿರ್ಧರಿಸಲಾಗಿದೆ. ಭದ್ರತೆಯ ದೃಷ್ಟಿಯಿಂದ ರಾಜಪಥವನ್ನು ಬುಧವಾರದಿಂದಲೇ ಬಂದ್ ಮಾಡಲಾಗಿದೆ.

60ಕ್ಕೂ ಹೆಚ್ಚು ಕಾಪ್ಟರ್, ವಿಮಾನಗಳ ಪ್ರದರ್ಶನ
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಬಾರಿ ವಾಯುಸೇನೆಯ 60ಕ್ಕೂ ಹೆಚ್ಚು ಕಾಪ್ಟರ್, ವಿಮಾನಗಳು ಸಾಹಸ ಪ್ರದರ್ಶಿಸಲಿರುವುದು ಈ ಬಾರಿಯ ವಿಶೇಷ. ಈ ಮೂಲಕ ಅಮೆರಿಕ ಅಧ್ಯಕ್ಷರ ಮುಂದೆ ಭಾರತವು ತನ್ನ ವೈಮಾನಿಕ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ.

ಡ್ರೋಣ್ ಹಾರಾಟಕ್ಕೂ ನಿಷೇಧ
ಒಬಾಮ ಭೇಟಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ರಾಜಧಾನಿಯಲ್ಲಿ ಡ್ರೋಣ್‍ಗಳ ಹಾರಾಟಕ್ಕೂ ನಿಷೇಧ ಹೇರಲಾಗಿದೆ. ಈ ಸಂಬಂಧ ಎಲ್ಲ ಠಾಣೆಗಳಿಗೂ ಸೂಚನೆ ರವಾನಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.