ದೇಶ

ಒಬಾಮ ಭೇಟಿ ಹಿನ್ನೆಲೆ: ಎಲ್ಲೆಲ್ಲೂ ಕಟ್ಟೆಚ್ಚರ

ಒಬಾಮ ಅವರ ಭಾರತ ಭೇಟಿಗಾಗಿ ನಡೆದಿರುವ ಭದ್ರತಾ ಸಿದ್ದತೆಗಳು...

ಒಬಾಮ ಭೇಟಿ ಹಿನ್ನೆಲೆ: ಎಲ್ಲೆಲ್ಲೂ ಕಟ್ಟೆಚ್ಚರ
ರಾಷ್ಟ್ರ ರಾಜಧಾನಿಯಲ್ಲಿ ಕಟ್ಟೆಚ್ಚರ
Published On :

ನವದೆಹಲಿ: ಭಾರತದಾದ್ಯಂತ ಎಲ್ಲ ವಿಮಾನ ನಿಲ್ದಾಣಗಳಲ್ಲೂ ಭದ್ರತಾ ಪರಿಶೀಲನೆ, ನಕಲಿ ದಾಖಲೆಯೊಂದಿಗೆ ಪ್ರಯಾಣಿಸುವವರ ಮೇಲೆ ಕಣ್ಣು, ಏರ್ ಪೋರ್ಟ್‌ಗಳಿಗೆ ಆಗಮಿಸುವ ಪ್ರಯಾಣಿಕರೆಲ್ಲರ ತಪಾಸಣೆ!

ಇವೆಲ್ಲವೂ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಭಾರತ ಭೇಟಿಗಾಗಿ ನಡೆದಿರುವ ಭದ್ರತಾ ಸಿದ್ದತೆಗಳು. ಕಳೆದ ಕೆಲವು ವಾರಗಳಿಂದ ಭದ್ರತಾ ಸಂಸ್ಥೆಗಳಿಗೆ ಅನೇಕ ಬೆದರಿಕೆ ಕರೆಗಳು ಬಂದಿದ್ದು, ಒಬಾಮ ಭೇಟಿ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಈ ಸಂಸ್ಥೆಗಳು ಅಗತ್ಯ ಕ್ರಮ ಕೈಗೊಳ್ಳುತ್ತಿವೆ.

ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್) ಎಲ್ಲ ವಿಮಾನ ನಿಲ್ದಾಣಗಳಲ್ಲೂ ಭಾರಿ ತಪಾಸಣೆ ನಡೆಸುತ್ತಿದೆ. ಅಲ್ಲಿಗೆ ಬರುವ ಎಲ್ಲ ಪ್ರಯಾಣಿಕರ ಪರಿಶೀಲನೆ ನಡೆಸಲಾಗುತ್ತಿದೆ.

ದೆಹಲಿ ಭದ್ರತಾ ಲೋಪ: ದೆಹಲಿ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪವಿರುವುದು ಸಿಐಎಸ್‌ಎಫ್ ಪಡೆಯ ಗಮನಕ್ಕೆ ಬಂದಿದೆ. ಗುಪ್ತಚರ ಸಂಸ್ಥೆಗಳ ಎಚ್ಚರಿಕೆ ಹೊರತಾಗಿಯೂ ಅಲ್ಲಿ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ.

ಈ ಬಗ್ಗೆ ನೇರವಾಗಿ ಏರ್‌ಪೋರ್ಟ್ ವಲಯದ ಸಿಐಎಸ್‌ಎಫ್ ಎಡಿಜಿಗೆ ವರದಿ ನೀಡಲು ಭದ್ರತಾ ಪಡೆ ನಿರ್ಧರಿಸಿದೆ. ಇತ್ತೀಚೆಗೆ ಅಧಿಕಾರಿಗಳ ತಂಡವೇ ನಕಲಿ ಇ-ಟಿಕೆಟ್ ಪಡೆದು ವಿಮಾನ ನಿಲ್ದಾಣ ಪ್ರವೇಶಿಸದರೂ ಅವರನ್ನು ಯಾರೂ ತಡೆದಿಲ್ಲ. ನಕಲಿ ಬೋರ್ಡಿಂಗ್ ಪಾಸ್ ಮೂಲಕ ಸಂಚಾರಕ್ಕೂ ಅವಕಾಶ ಕಲ್ಪಿಸಲಾಯಿತು.

ಕೊನೆಗೆ ಇವರನ್ನು ಸಿಐಎಸ್‌ಎಫ್ ಅಧಿಕಾರಿಯೊಬ್ಬರು ಪತ್ತೆಹಚ್ಚಿದ್ದರು. ಈ ತಂಡವು ಎಲ್ಲ ವಿಮಾನ ನಿಲ್ದಾಣಗಳಿಗೂ ತೆರಳಿ ಇಂತಹ ಪರಿಶೀಲನೆ ನಡೆಸಲಿದೆ. ಸಾಮಾನ್ಯ ಪ್ರಯಾಣಿಕರ ಸೋಗಿನಲ್ಲಿ ಆಗಮಿಸುವ ತಂಡ ಏರ್‌ಪೋರ್ಟ್ ಭದ್ರತೆಯ ಬಗ್ಗೆ ಈ ರೀತಿ ಪರಿಶೀಲನೆ ನಡೆಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದೇ ವೇಳೆ, ಒಬಾಮ ಎಲ್ಲೆಲ್ಲಿ ಭೇಟಿ ನೀಡಲಿದ್ದಾರೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆದರೂ ಅವರು ವಾರಣಾಸಿ ಮತ್ತು ಆಗ್ರಾಗೆ ಭೇಟಿ ನೀಡುವ ಸಾಧ್ಯತೆ ಹಿನ್ನೆಲೆಯಲ್ಲಿ ಅಲ್ಲಿಯೂ ಹೆಚ್ಚಿನ ನಿಗಾವಹಿಸಲಾಗಿದೆ.

ಅಮೆರಿಕದ ರಹಸ್ಯ ಸೇವೆಯ ತಂಡವೊಂದು ಭಾರತೀಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದೆ. ರಾಜ್‌ಪಥ್‌ನಲ್ಲಿ ಒಬಾಮ ಅವರು ಭಾಷಣ ಮಾಡಲಿರುವ ಜಾಗದಲ್ಲಿ ಬುಲೆಟ್ ಪ್ರೂಫ್ ಶೀಲ್ಡ್ ಅಳವಡಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ.

ಉಗ್ರರ ಕಣ್ಣು: ದೆಹಲಿ ವಿಮಾನ ನಿಲ್ದಾಣದ ಮೇಲೆ ಉಗ್ರರ ಕಣ್ಣು ಈಗಾಗಲೇ ಬಿದ್ದಿದೆ. ಹಾಗಾಗಿ ಅಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಕಳೆದ ವಾರ ಸಿಐಎಸ್‌ಎಫ್ ತಂಡಕ್ಕೆ ಇನ್ಸ್‌ಪೆಕ್ಟರ್ ಮಟ್ಟದ ಅಧಿಕಾರಿಯೊಬ್ಬರನ್ನು ಸೇರ್ಪಡೆಗೊಳಿಸಲಾಗಿದೆ.

ಒಬಾಮ ಭಾರತಕ್ಕೆ ಬಂದು ವಾಪಾಸಾಗುವವರೆಗೂ ಅಹಿತಕರ ಘಟನೆ ನಡೆಯದಂತೆ ತಡೆಯಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.