ರಾಜಕೀಯ "ದೋಣಿ ಸ್ಫೋಟ"
ಪಾಕ್ ಬೋಟ್ ಸ್ಫೋಟ ಪ್ರಕರಣವನ್ನು ರಾಜಕೀಯಕ್ಕೆ ಎಳೆದು ತರುವ ಮೂಲಕ ಕಾಂಗ್ರೆಸ್ ಹೊಸ ವಿವಾದ ಸೃಷ್ಟಸಿದೆ.

ಬೋಟ್ ಉಗ್ರರದ್ದು ಎನ್ನುವುದಕ್ಕೆ ಸಾಕ್ಷಿಯೇ ಇಲ್ಲ: ಕಾಂಗ್ರೆಸ್
ಪಾಕ್ ಭಾಷೆಯಲ್ಲಿ ಮಾತನಾಡುತ್ತಿರುವ ಕಾಂಗ್ರೆಸ್: ಬಿಜೆಪಿ
ನವದೆಹಲಿ: ಪಾಕ್ ಬೋಟ್ ಸ್ಫೋಟ ಪ್ರಕರಣವನ್ನು ರಾಜಕೀಯಕ್ಕೆ ಎಳೆದು ತರುವ ಮೂಲಕ ಕಾಂಗ್ರೆಸ್ ಹೊಸ ವಿವಾದ ಸೃಷ್ಟಸಿದೆ.
ಸರ್ಕಾರ ಏನನ್ನೋ ಮುಚ್ಚಿಡುತ್ತಿದೆ. ಈ ಪ್ರಕರಣವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿನಾಕಾರಣ ವೈಭವೀಕರಿಸುತ್ತಿದೆ. ಈ ಮೂಲಕ ರಾಜಕೀಯ ಲಾಭ ಪಡೆಯಲು ಹೊರಟಿದೆ ಎನ್ನುವ ಅರ್ಥದಲ್ಲಿ ಕಾಂಗ್ರೆಸ್ ಆರೋಪ ಮಾಡಿದೆ.
ಈ ವಿಚಾರಕ್ಕೆ ಸಂಬಂಧಿಸಿ ಖಾಸಗಿ ಸುದ್ದಿವಾಹಿನಿಯೊಂದರ ಜತೆಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಅಜಯ್ ಕುಮಾರ್, ಪ್ರಕರಣದ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಘಟನೆ ಹಿಂದೆ ಯಾವ ಉಗ್ರ ಸಂಘಟನೆಯ ಕೈವಾಡ ಇದೆ ಎನ್ನುವುದನ್ನು ಸರ್ಕಾರ ಬಹಿರಂಗಪಡಿಸಬೇಕು. ಆಗ ಎಲ್ಲವೂ ಬಹಿರಂಗವಾಗಲಿದೆ ಎಂದು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಕಿಡಿಕಾರಿದ್ದು, ಕಾಂಗ್ರೆಸ್ ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತಿದೆ. ಅವರಿಗೆ ರಾಷ್ಟ್ರೀಯ ಭದ್ರತೆಯಂಥ ಸೂಕ್ಷ್ಮ ವಿಚಾರಗಳ ಬಗ್ಗೆ ಅನುಮಾನಗಳಿದ್ದರೆ ಸರ್ಕಾರವನ್ನು ನೇರವಾಗಿ ಪ್ರಶ್ನಿಸಲಿ. ಅದರ ಬದಲು ಈ ರೀತಿ ಮಾಧ್ಯಮದ ಜತೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದೆ.
ದೇಶದ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ವಿಚಾರದಲ್ಲಿ ಕಾಂಗ್ರೆಸ್ ಈ ರೀತಿಯ ಆರೋಪ ಮಾಡುವ ಮೂಲಕ ಕೀಳುಮಟ್ಟದ ರಾಜಕೀಯ ಮಾಡಲು ಹೊರಟಿದೆ. ಈ ರೀತಿಯ ಪ್ರತಿಕ್ರಿಯೆಯನ್ನು ಪಾಕಿಸ್ತಾನದಿಂದಷ್ಟೇ ನಿರೀಕ್ಷಿಸಬಹುದು. ಈಗ ಪ್ರಮುಖ ಪ್ರತಿಪಕ್ಷವಾಗಿರುವ ಕಾಂಗ್ರೆಸ್‌ನ ಅದೇ ಧ್ವನಿಯಲ್ಲಿ ಮಾತನಾಡುತ್ತಿದೆ ಎಂದು ಬಿಜೆಪಿ ಮುಖಂಡ ಸಂಬಿತ್ ಪಾತ್ರಾ ಕಿಡಿಕಾರಿದ್ದಾರೆ.
ಸರ್ಕಾರ ಮತ್ತು ಉಗ್ರರ ದಾಳಿಯಿಂದ ದೇಶವನ್ನು ರಕ್ಷಿಸಿದ ಕೋಸ್ಟ್‌ಗಾರ್ಡ್ ಜೊತೆಗೆ ನಿಲ್ಲುವ ಬದಲು ಕಾಂಗ್ರೆಸ್, ಈ ದಾಳಿಯ ಸೂತ್ರದಾರರಿಗೆ ಬೆಂಬಲ ಸೂಚಿಸಿದೆ. ಪಾಕಿಸ್ತಾನಕ್ಕೆ ಭಾರತದ ವಿರುದ್ಧ ಆರೋಪ ಮಾಡಲು ಮತ್ತೊಂದು ಅವಕಾಶ ಮಾಡಿಕೊಟ್ಟಿದೆ. 26/1ರ ದಾಳಿಯನ್ನು ಕಾಂಗ್ರೆಸ್ ಮುಖಂಡರು ಆರೆಸ್ಸೆಸ್ ಕಡೆ ಬೆರಳು ತೋರಿಸಿದ್ದರು.
ಬಾಟ್ಲಾ ಹೌಸ್ ಎನ್‌ಕೌಂಟರ್ ವೇಳೆಯೂ ಇದೇ ರೀತಿಯ ಆರೋಪ ಮಾಡಲಾಯಿತು. ಇದು ರಾಷ್ಟ್ರೀಯ ಭದ್ರತೆ ವಿಚಾರಕ್ಕೆ ಸಂಬಂಧಿಸಿ ಪ್ರಶ್ನಿಸುವ ವಿಧಾನವೇ? ಅವರಿಗೆ ಭಾರತದ ಗುಪ್ತಚರ ಸಂಸ್ಥೆ, ಸರ್ಕಾರ ಹಾಗೂ ಕೋಸ್ಟ್ ಗಾರ್ಡ್ ಮೇಲೆ ನಂಬಿಕೆ ಇಲ್ಲವೇ? ಈ ರೀತಿಯ ಹೇಳಿಕೆ ನೀಡುವುದರಿಂದ ನಮ್ಮ ಸೈನಿಕರ ಮನೋಬಲ ಕುಗ್ಗಿಸಿದಂತಾಗುವುದಿಲ್ಲವೇ ಎಂದು ಪಾತ್ರಾ ಪ್ರಶ್ನಿಸಿದ್ದಾರೆ.
ಉಗ್ರರ ದಾಳಿಯನ್ನು ವಿಫಲಗೊಳಿಸಲಾಯಿತು ಎಂದು ಹೇಗೆ ಹೇಳಲು ಸಾಧ್ಯ? ಅದು ಉಗ್ರರದ್ದೇ ಬೋಟ್ ಎನ್ನುವ ನಿರ್ಧಾರಕ್ಕೆ ಸರ್ಕಾರ ಹೇಗೆ ಬಂತು? ಸರ್ಕಾರ ಬಳಿ ಯಾವುದೇ ಸಾಕ್ಷ್ಯಗಳಿಲ್ಲ.
-ಅಜಯ್ ಕುಮಾರ್
ಕಾಂಗ್ರೆಸ್ ಮುಖಂಡ
ಕಾಂಗ್ರೆಸ್ ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತಿದೆ ರಾಷ್ಟ್ರೀಯ ಭದ್ರತೆಯಂಥ ಸೂಕ್ಷ್ಮ ವಿಚಾರದಲ್ಲಿ ಕೀಳುಮಟ್ಟದ ರಾಜಕೀಯ ಮಾಡಲು ಹೊರಟಿದೆ.
-ಸಂಬಿತ್ ಪಾತ್ರಾ
ಬಿಜೆಪಿ ಮುಖಂಡ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


