ತಾರಕಕ್ಕೇರಿದ ಭೂಸಮರ: ಮೋದಿ ವ್ಯೂಹತಂತ್ರ
ವಿವಾದಾತ್ಮಕ ಭೂಸ್ವಾಧೀನ ಸುಗ್ರೀವಾಜ್ಞೆ ಸಮರ ಸದನದ ಒಳಹೊರಗೆ ಮತ್ತಷ್ಟು ತಾರಕಕ್ಕೇರಿರುವಾಗಲೇ, ಈ ಸಂಬಂಧ ಪಟ್ಟು ಸಡಿಲಿಸದಿರಲು...

ನವದೆಹಲಿ: ವಿವಾದಾತ್ಮಕ ಭೂಸ್ವಾಧೀನ ಸುಗ್ರೀವಾಜ್ಞೆ ಸಮರ ಸದನದ ಒಳಹೊರಗೆ ಮತ್ತಷ್ಟು ತಾರಕಕ್ಕೇರಿರುವಾಗಲೇ, ಈ ಸಂಬಂಧ ಪಟ್ಟು ಸಡಿಲಿಸದಿರಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ.
ಒಂದೆಡೆ ಪ್ರಧಾನಿ ಪಟ್ಟು ಮುಂದುವರಿಸಿದ್ದರೆ ಇನ್ನೊಂದೆಡೆ ಸರ್ಕಾರ ಪ್ರತಿಪಕ್ಷಗಳ ಮನವೊಲಿಸುವ ಪ್ರಕ್ರಿಯೆಗೂ ಕೈಹಾಕಿದೆ. ಒಂದು ರೀತಿಯಲ್ಲಿ ಸುಗ್ರೀವಾಜ್ಞೆ ವಿಚಾರದಲ್ಲಿ ಸರ್ಕಾರ ಎರಡು ರೀತಿಯ ವ್ಯೂಹತಂತ್ರ ಅನುಸರಿಸಲು ಹೊರಟಿದೆ. ಸುಗ್ರೀವಾಜ್ಞೆಗೆ ಸಂಬಂಧಿಸಿ ಸರ್ಕಾರದ ವಿರುದ್ಧ ಸಂಸತ್ತಿನ ಒಳಗೆ ಮತ್ತು ಹೊರಗೆ ಒಂದಾಗಿ ತೊಡೆತಟ್ಟಿರುವ ಪ್ರತಿಪಕ್ಷಗಳು ಬುಧವಾರವೂ ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡವು.
ಇದರ ಹೊರತಾಗಿಯೂ ಸರ್ಕಾರದ ಪ್ರಮುಖ ಆರ್ಥಿಕ ಸುಧಾರಣಾ ವಿಧೇಯಕಗಳ ಅನುಮೋದನೆಗೆ ಪ್ರತಿಪಕ್ಷಗಳ ಸಹಕಾರ ಕೋರುವ ಸರ್ವಪಕ್ಷಗಳ ಸಭೆಯಲ್ಲಿ ಭೂಸ್ವಾಧೀನ ಸುಗ್ರೀವಾಜ್ಞೆ ವಿಚಾರ ಪ್ರಸ್ತಾಪಿಸದಂತೆ ಮೋದಿ ಸೂಚಿಸಿದ್ದಾರೆ. ದಿನದ ಕಲಾಪ ಆರಂಭಕ್ಕೂ ಮುನ್ನ ಪಕ್ಷದ ಹಿರಿಯ ಮುಖಂಡರ ಜತೆಗೆ ಸಭೆ ನಡೆಸಿದ ಮೋದಿ ಸುಗ್ರೀವಾಜ್ಞೆಗೆ ಸಂಬಂಧಿಸಿ ಗಂಭೀರ ಚರ್ಚೆ ನಡೆಸಿದ್ದಾರೆ.
ಸಲಹೆ ಸ್ವೀಕಾರಾರ್ಹ!
ಪ್ರತಿಪಕ್ಷಗಳು ಯಾವುದೇ ರಾಜಿಗೆ ಆಸಕ್ತಿ ತೋರದ ಹಿನ್ನೆಲೆಯಲ್ಲಿ ಭೂಸ್ವಾಧೀನ ಸುಗ್ರೀವಾಜ್ಞೆಗೆ ಸಂಬಂಧಿಸಿ ಸರ್ವಪಕ್ಷಗಳ ಸಭೆ ಕರೆದು ಅಭಿಪ್ರಾಯ ಕೇಳುವುದು ಬೇಡ ಎಂದು ಪ್ರಧಾನಿ ಹೇಳಿದ್ದಾರೆ. ಜತೆಗೆ, ಈ ವಿವಾದಾತ್ಮಕ ಸುಗ್ರೀವಾಜ್ಞೆಯಲ್ಲಿ ಯಾವುದೇ ಪ್ರಮುಖ ಬದಲಾವಣೆ ಮಾಡುವುದು ಬೇಡವೆನ್ನುವ ಅಭಿಪ್ರಾಯವನ್ನೂ ಅವರು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ`ಈ ಸುಗ್ರೀವಾಜ್ಞೆಗೆ ಸಂಬಂಧಿಸಿ ಯಾರೇ ಉತ್ತಮ ಸಲಹೆಗಳನ್ನು ನೀಡಿದರೆ ಅದನ್ನು ಸ್ವೀಕರಿಸಲು ನಾವು ಸಿದ್ಧರಿದ್ದೇವೆ`ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಸಂಸತ್ತಿಗೆ ತಿಳಿಸಿದ್ದಾರೆ.
ಜೇಟ್ಲಿ ಉತ್ತರ
ಸುಗ್ರೀವಾಜ್ಞೆಗೆ ಸಂಬಂಧಿಸಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ರಾಜ್ಯಸಭೆಯಲ್ಲಿ ಸರ್ಕಾರದ ನಿಲುವನ್ನು ಸಮರ್ಥಿಸಿಕೊಳ್ಳಲಿದ್ದಾರೆ. ಸರ್ಕಾರದ ಪರ ಮಾತನಾಡಲಿರುವ ಅವರು ಈ ಸುಗ್ರೀವಾಜ್ಞೆಯ ಅಗತ್ಯವನ್ನು ಪ್ರತಿಪಕ್ಷಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಲಿದ್ದಾರೆ.
ಕಾಂಗ್ರೆಸ್ ದ್ವಿಮುಖ ನೀತಿ ಅನುಸರಿಸುತ್ತಿದೆ. ಯುಪಿಎ ಅವಧಿಯಲ್ಲಿ ಜಾರಿಗೆ ತರಲಾಗಿರುವ ಭೂಸ್ವಾಧೀನ ವಿಧೇಯಕಕ್ಕೆ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳೂ ಸೇರಿದಂತೆ ಎಲ್ಲ ಸರ್ಕಾರಗಳು ವಿರೋಧ ವ್ಯಕ್ತಪಡಿಸಿ ಪತ್ರಬರೆದಿದ್ದವು.
-ನಿತಿನ್ ಗಡ್ಕರಿ, ಕೇಂದ್ರ ಸಚಿವ
ಸುಗ್ರೀವಾಜ್ಞೆಗೆ ನಮ್ಮದೂ ಆಕ್ಷೇಪವಿದೆ. ರೈತರ ಒಪ್ಪಿಗೆ ಇಲ್ಲದೆ ಜಮೀನನ್ನು ವಶಪಡಿಸಿಕೊಳ್ಳುವ ಪ್ರಸ್ತಾಪ ಸರಿಯಲ್ಲ. ಹೀಗಾಗಿ, ಅದರಲ್ಲಿ ಕೆಲವೊಂದು ಮಾರ್ಪಾಡು ಮಾಡಬೇಕಾಗಿದೆ.
-ಚಿರಾಗ್ ಪಾಸ್ವಾನ್, ಎಲ್‍ಜೆಪಿ ಸಂಸದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


