ದೇಶ

ಏರ್ ಶೋಗೆ ಕ್ಷಣಗಣನೆ: ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ

ಸಿಲಿಕಾನ್ ನಗರಿಯ ಯಲಹಂಕ ವಾಯುನೆಲೆಯ ಬಾನಂಗಳದಲ್ಲಿ ಇಂದಿನಿಂದ ಉಕ್ಕಿನ ಹಕ್ಕಿಗಳ ಉತ್ಸವ ಆರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು...

ಏರ್ ಶೋಗೆ ಕ್ಷಣಗಣನೆ: ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ
ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ಸಿಲಿಕಾನ್ ನಗರಿಯ ಯಲಹಂಕ ವಾಯುನೆಲೆಯ ಬಾನಂಗಳದಲ್ಲಿ ಇಂದಿನಿಂದ ಉಕ್ಕಿನ ಹಕ್ಕಿಗಳ ಉತ್ಸವ ಆರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ 9 ಗಂಟೆಗೆ ಏರೋ ಇಂಡಿಯಾ 10ನೇ ಆವೃತ್ತಿಗೆ ಚಾಲನೆ ನೀಡಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಶೇಷ ವಿಮಾನದಲ್ಲಿ ಬೆಳಗ್ಗೆ 8.45ಕ್ಕೆ ಬೆಂಗಳೂರಿನಲ್ಲಿರುವ ಯಲಹಂಕ ವಾಯುನೆಲೆಗೆ ಆಗಮಿಸಿದ್ದಾರೆ. ರಕ್ಷಣಾ ಇಲಾಖೆಯ ವಿವಿಧ ಗಣ್ಯರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದ್ದಾರೆ. ರಕ್ಷಣೆ ಹಾಗೂ ವಿಮಾನಯಾನ ಕ್ಷೇತ್ರದಲ್ಲಿ `ಮೇಕ್ ಇನ್ ಇಂಡಿಯಾ' ಯೋಜನೆಗಳ ಮೂಲಕ ಹೊಸ ಸಂಚಲನ ತರುವ ಇಂದಿನ ಏರ್ ಷೋ ನಿರೀಕ್ಷೆ ಮೂಡಿಸಿದೆ.

ಈ ಬಾರಿಯ `ಏರೋ ಇಂಡಿಯಾ'ವನ್ನು `ಮೇಕ್ ಇನ್ ಇಂಡಿಯಾ' ಯೋಜನೆಗೆ ಪೂರಕವಾಗಿ ಬಳಸಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿರುವುದರಿಂದ ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್ ಹಾಗೂ ಇಸ್ರೇಲ್ ದೇಶಗಳ ರಕ್ಷಣೆ ಹಾಗೂ ವಿಮಾನಯಾನ ಕ್ಷೇತ್ರಗಳ ಉದ್ದಿಮೆಗಳಿಂದ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಹರಿದುಬರುವ ನಿರೀಕ್ಷೆಯಿದೆ.

ಫೆ.18ರಿಂದ 22ರವರೆಗೆ ನಡೆಯಲಿರುವ ಏಷ್ಯಾದ ದೊಡ್ಡ ವಿಮಾನ ಪ್ರದರ್ಶನವು ಬುಧವಾರ ಮಧ್ಯಾಹ್ನದ ಬಳಿಕ ಸಾರ್ವಜನಿಕರಿಗೆ ತೆರೆದಿರುತ್ತದೆ. ಬುಧವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಿ ಗಣ್ಯರಿಗಾಗಿ ಎರಡೂವರೆ ಗಂಟೆಗಳ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಈ ಸಂದರ್ಭದಲ್ಲಿ ಭಾರತದ ವಾಯುಸೇನೆಯ ಶಕ್ತಿ ಪ್ರದರ್ಶನವಾಗಲಿದೆ. ಪ್ರದರ್ಶನ ಮೇಳ ದಲ್ಲಿ ಸುಮಾರು 32 ರಾಷ್ಟ್ರಗಳ ಉದ್ದಿಮೆಗಳು ಭಾಗವಹಿಸುವ ನಿರೀಕ್ಷೆಯಿದ್ದು, ಉದ್ಘಾಟನಾ ಕಾರ್ಯಕ್ರಮದಲ್ಲಿ 70ಕ್ಕೂ ಅಧಿಕ ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ನೆರೆಯ ಚೀನಾದ ಹಿರಿಯ ಸೇನಾ„ಕಾರಿಗಳು ಕೂಡ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಿಂದಿನ ಏರೋ ಇಂಡಿಯಾದಲ್ಲಿಯೂ ಚೀನಾ ಪ್ರತಿನಿಧಿಗಳು ಮೊದಲ ಬಾರಿಗೆ ಭಾಗವಹಿಸಿದ್ದರು. ವಿದೇಶಿ ವಿಮಾನ ಸಂಸ್ಥೆಗಳ ಪ್ರದರ್ಶನವು ಬುಧವಾರ ಮಧ್ಯಾಹ್ನದ ನಂತರ ಪ್ರಾರಂಭವಾಗುತ್ತದೆ. 72 ವಿಮಾನ, ಹೆಲಿಕಾಪ್ಟರ್ ಹಾಗೂ ಯುದ್ಧ ವಿಮಾನಗಳ ಪ್ರದರ್ಶನ ನಡೆಯಲಿದೆ. ಇದರಲ್ಲಿ ಅಮೆರಿಕ, ಫ್ರಾನ್ಸ್ ಹಾಗೂ ಇಂಗ್ಲೆಂಡ್‍ನ ಯುದ್ಧ ವಿಮಾನಗಳ ಪ್ರದರ್ಶನ ದೊಡ್ಡ ಪ್ರಮಾಣದಲ್ಲಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.