ದೇಶ

ಕಾಂಗ್ರೆಸ್ ನ ಯಾವುದೇ ಸವಾಲಿಗೆ ಉತ್ತರಿಸಲು ಸಿದ್ಧ: ಸುಷ್ಮಾ ಸ್ವರಾಜ್

ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದಲೂ ಗದ್ದಲದಲ್ಲೇ ಕಾಲಕಳೆಯುವಂತೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ಸಂಸದರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಸುಷ್ಮಾ ಸ್ವರಾಜ್ ಅವರು ಕಾಂಗ್ರೆಸ್ ಪಕ್ಷದ ಯಾವುದೇ ಸವಾಲಿಗಾದರೂ ಉತ್ತರಿಸಲು ಸಿದ್ಧಳಿದ್ದೇನೆ ಎಂದು ಮಂಗಳವಾರ ಹೇಳಿದ್ದಾರೆ...

ಕಾಂಗ್ರೆಸ್ ನ ಯಾವುದೇ ಸವಾಲಿಗೆ ಉತ್ತರಿಸಲು ಸಿದ್ಧ: ಸುಷ್ಮಾ ಸ್ವರಾಜ್
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ (ಸಂಗ್ರಹ ಚಿತ್ರ)
Published On :

ನವದೆಹಲಿ: ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದಲೂ ಗದ್ದಲದಲ್ಲೇ ಕಾಲಕಳೆಯುವಂತೆ ಮಾಡುತ್ತಿರುವ ಕಾಂಗ್ರೆಸ್ ಪಕ್ಷದ ಸಂಸದರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಸುಷ್ಮಾ ಸ್ವರಾಜ್ ಅವರು ಕಾಂಗ್ರೆಸ್ ಪಕ್ಷದ ಯಾವುದೇ ಸವಾಲಿಗಾದರೂ ಉತ್ತರಿಸಲು ಸಿದ್ಧಳಿದ್ದೇನೆ ಎಂದು ಮಂಗಳವಾರ ಹೇಳಿದ್ದಾರೆ.

ಮುಂಗಾರು ಅಧಿವೇಶನ ಆರಂಭವಾದಾಗಿನಿಂದಲೂ ಲಲಿತ್ ಮೋದಿ ಪ್ರಕರಣದ ಕುರಿತಂತೆ ಸುಷ್ಮಾ ವಿರುದ್ಧ ಕಾಂಗ್ರೆಸ್ ಪಕ್ಷದ ಸಂಸದರು ವಿರೋಧ ವ್ಯಕ್ತಪಡಿಸಿಕೊಂಡೇ ಬಂದಿದ್ದು, ಇದೀಗ ಅಧಿವೇಶನ ಪೂರ್ಣಗೊಳ್ಳಲು ಇನ್ನು ಕೇವಲ ಮೂರು ದಿನಗಳಷ್ಟೇ ಬಾಕಿಯಿದೆ. ಹೀಗಾಗಿ ಬಿಜೆಪಿ ಹಾಗೂ ಇತರೆ ಪಕ್ಷದ ಸಂಸದರು ಕಾಂಗ್ರೆಸ್ ಪಕ್ಷದ ಪ್ರತಿಭಟನೆಗೆ ಸಾಥ್ ನೀಡುವುದಿಲ್ಲ ಎಂದು ನಿನ್ನೆಯಷ್ಟೇ ಹೇಳಿತ್ತು. ಆದರೆ, ಯಾರು ಬೆಂಬಲ ಸೂಚಿಸಲಿ ಬಿಡಲಿ ನಮ್ಮ ಪ್ರತಿಭಟನೆ, ವಿರೋಧವನ್ನು ಮುಂದುವರೆಸಿಯೇ ತೀರುತ್ತೇವೆಂದು ಪಟ್ಟು ಹಿಡಿದಿರುವ ಕಾಂಗ್ರೆಸ್ ಪಕ್ಷ ಇಂದೂ ಸಹ ತನ್ನ ಪಟ್ಟನ್ನು ಮುಂದುವರೆಸಿದ್ದು ಸಂಸತ್ತಿನಲ್ಲಿ ಮತ್ತೆ ಗದ್ದಲ ಉಂಟಾಗುವಂತೆ ಮಾಡಿದೆ.

ಹೀಗಾಗಿ ಕಾಂಗ್ರೆಸ್ ಪಕ್ಷದ ಈ ನಿಲುವಿಗೆ ಇಂದು ಪ್ರತಿಕ್ರಿಯೆ ನೀಡಿರುವ ಸುಷ್ಮಾ ಸ್ವರಾಜ್ ಅವರು, ಕಾಂಗ್ರೆಸ್ ಪಕ್ಷ ಯಾವುದೇ ವಿಷಯ ಅಥವಾ ಸವಾಲು ಹಾಕಿದರೂ ಅದಕ್ಕೆ ಉತ್ತರಿಸಲು ಹಾಗೂ ಚರ್ಚೆ ನಡೆಸಲು ತಯಾರಿದ್ದೇನೆ ಎಂದು ಹೇಳಿದ್ದಾರೆ.

ಸುಷ್ಮಾ ಸ್ವರಾಜ್ ಅವರ ಪ್ರತಿಕ್ರಿಯೆಗೆ ಮರು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷ ಇದೀಗ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗುತ್ತಿದ್ದು, ಸುಷ್ಮಾ ಸ್ವರಾಜ್ ಪ್ರತಿಕ್ರಿಯೆ ನೀಡುವಾಗ ಪ್ರಧಾನಮಂತ್ರಿ ಸಂಸತ್ತಿನಲ್ಲಿ ಹಾಜರಿರಬೇಕು ಎಂದು ಹೇಳಿದೆ.

ಮೋದಿ ಹಾಜರು ಕುರಿತಂತೆ ಸಂಸತ್ತಿನಲ್ಲಿ ಮಾತನಾಡಿರುವ ಮಲ್ಲಿಕಾರ್ಜುನ ಖರ್ಗೆ ಅವರು, ಲಲಿತ್ ಮೋದಿ ವಿವಾದ ಕುರಿತಂತೆ ಸುಷ್ಮಾ ಸ್ವರಾಜ್ ಅವರು ಪ್ರತಿಕ್ರಿಯೆ ನೀಡುವಾಗ ಪ್ರಧಾನಿ ಅವರು ಸಹ ಸಂಸತ್ತಿನಲ್ಲಿ ಹಾಜರಿರಬೇಕು. ಸುಷ್ಮಾ ಸ್ವರಾಜ್ ನೀಡುವ ಹೇಳಿಕೆ ಕುರಿತಂತೆ ಮೋದಿ ಅವರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆಂಬುದನ್ನು ನೋಡಬೇಕಿದೆ. ಸ್ಪೀಕರ್ ಅವರು ಕೂಡಲೇ ವ್ಯವಹಾರ ಕುರಿತ ಎಲ್ಲಾ ಚರ್ಚೆಗಳನ್ನು ಅಮಾನತು ಮಾಡಿ ಪ್ರಧಾನಮಂತ್ರಿ ಅವರು ಸಂಸತ್ತಿಗೆ ಬರುವಂತೆ ಮಾಡಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.