ದೇಶ

ಮೋದಿ ವಿರುದ್ಧ ಸೋನಿಯಾ ವಾಗ್ದಾಳಿ

ಕೇಂದ್ರದ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ವಿವಾದಾತ್ಮಕ ಮುಖಂಡರು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡುವವರೆಗೂ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ...

ಮೋದಿ ವಿರುದ್ಧ ಸೋನಿಯಾ ವಾಗ್ದಾಳಿ
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (ಸಂಗ್ರಹ ಚಿತ್ರ)
Published On :

ನವದೆಹಲಿ: ಕೇಂದ್ರದ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ವಿವಾದಾತ್ಮಕ ಮುಖಂಡರು ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡುವವರೆಗೂ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ತನ್ನ ಪ್ರತಿಭಟನೆಯಿಂದೆ ಹಿಂದೆ ಸರಿಯುವುದಿಲ್ಲ ಎಂದು ಹೇಳಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೋಮವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡಿರುವ ಅವರು, ವಿವಾದಿತ ಮುಖಂಡರ ಕುರಿತಂತೆ ಎನ್ ಡಿಎ ಸರ್ಕಾರ ಮೊದಲು ತನ್ನ ನಿಲುವಳಿಯನ್ನು ವ್ಯಕ್ತಪಡಿಸಿ ನಂತರ ತನ್ನ ಮಾತುಕತೆ ನಡೆಸಲಿ. ನಿಲುವಳಿ ಸ್ಪಷ್ಟಪಡಿಸದೆ ನೇರವಾಗಿ ಮಾತುಕತೆ ನಡೆಸಿದರೆ ಅದನ್ನು ಕಾಂಗ್ರೆಸ್ ಪಕ್ಷ ಎಂದಿಗೂ ಒಪ್ಪುವುದಿಲ್ಲ. ಸಂಸತ್ ಅಧಿವೇಶನದಲ್ಲಿ ನಾವು ದಾಖಲೆಗಳ ಸಹಿತ ಪ್ರಮುಖ ವಿಷಯಗಳನ್ನು ಚರ್ಚೆ ಮಾಡುವುದಕ್ಕೆ ಅನುಮತಿ ನೀಡುವಂತೆ ಕೇಳಿಕೊಳ್ಳುತ್ತಿದ್ದೇವೆ. ಆದರೆ, ಸರ್ಕಾರ ಇದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಸರ್ಕಾರ ಜವಾಬ್ದಾರಿಯುತ ಕೆಲಸ ಮಾಡುವತ್ತ ಗಮನ ಹರಿಸಬೇಕೇ ಹೊರತು ಸಂಖ್ಯಾ ಬಲದ ಕುರಿತಂತೆ ಅಲ್ಲ. ವಿವಾದಿತ ಮುಖಂಡರು ರಾಜಿನಾಮೆ ನೀಡುವವರೆಗೂ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಕುರಿತ ತನ್ನ ನಿಲುವಳಿಯನ್ನು ಹಿಂತೆಗೆದುಕೊಳ್ಳುವುದಿಲ್ಲ. ಪ್ರತಿಭಟನೆಯನ್ನು ಮುಂದುವರೆಸಲಾಗುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿರುವ ಅವರು, ತಮ್ಮ ಪಕ್ಷದ ಮುಖಂಡರೇ ಹಗರಣಗಳಲ್ಲಿ ಭಾಗಿಯಾಗಿರುವ ಸಂದರ್ಭದಲ್ಲಿ ಹಲವು ವಿವಾದಗಳು ಸೃಷ್ಟಿಯಾಗಿದ್ದರೂ ಮನ್ ಕಿ ಬಾತ್ ಪ್ರಸಿದ್ಧ ವ್ಯಕ್ತಿ ಮೌನವಾಗಿರುವುದೇಕೆ. ಹಗರಣಗಳು ಕೇಳಿಬಂದಾಗ ಮೋದಿ ಮೌನ ವ್ರತ ಮಾಡುವುದೇಕೆ ಎಂದು ಪ್ರಶ್ನಿಸಿದ್ದಾರೆ.

ಕಳೆದ ವಾರ ಪ್ರಧಾನಿ ಮೋದಿ ಕರೆದಿದ್ದ ಸರ್ವಪಕ್ಷ ಸಭೆಗೆ ಕಾಂಗ್ರೆಸ್ ಪಕ್ಷದ ಸಂಸದರು ಗೈರು ಹಾಜರಾಗಿದ್ದರು. ಹಗರಣಗಳ ಕುರಿತಂತೆ ಪ್ರತಿಭಟನೆಗಿಳಿದಿರುವ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸುವ ಸಲುವಾಗಿ ಬಿಜೆಪಿ ಮತ್ತೆ ಇಂದು ಸರ್ವಪಕ್ಷ ಸಭೆ ಕರೆದಿದ್ದು, ಲೋಕಸಭೆ ಕಲಾಪ ಸುಗಮವಾಗಿ ನಡೆಯುವಂತೆ ಮಾಡಿದರೆ ವಿವಾದಗಳ ಕುರಿತಂತೆ ಪ್ರಧಾನಿ ಮೋದಿ ಅವರು ಸ್ಪಷ್ಟನೆ ನೀಡುತ್ತಾರೆ ಎಂದು ಹೇಳಿದೆ.

ಆದರೆ, ಬಿಜೆಪಿ ನೀಡಿರುವ ಈ ಕರೆಯನ್ನು ನಿರಾಕರಿಸಿರುವ ಸೋನಿಯಾಗಾಂಧಿ ಅವರು, ವಿವಾದಿತ ಮುಖಂಡರು ರಾಜಿನಾಮೆ ನೀಡುವವರೆಗೂ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಜಗ್ಗುವುದಿಲ್ಲ ಎಂದು ಪಟ್ಟುಹಿಡಿದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.