ಸಹಕಾರಿಗಳಾಗಲು ಸರ್ಕಾರದ ಷೇರು ಸಿಎಂ ಸಿದ್ದರಾಮಯ್ಯ ಘೋಷಣೆ
ಬಿಪಿಎಲ್ ವರ್ಗದ ಪ್ರತಿ ಕುಟುಂಬಗಳಲ್ಲಿ ಒಬ್ಬರನ್ನು ಸಹಕಾರ ಸಂಘದ ಸದಸ್ಯರನ್ನಾಗಿ ಮಾಡಲು ಸರ್ಕಾರವೇ ಷೇರಿನ ಹಣ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ...

ಬೆಂಗಳೂರು: ಬಿಪಿಎಲ್ ವರ್ಗದ ಪ್ರತಿ ಕುಟುಂಬಗಳಲ್ಲಿ ಒಬ್ಬರನ್ನು ಸಹಕಾರ ಸಂಘದ ಸದಸ್ಯರನ್ನಾಗಿ ಮಾಡಲು ಸರ್ಕಾರವೇ ಷೇರಿನ ಹಣ ನೀಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಲ್ಲೇಶ್ವರದಲ್ಲಿ ಸಹಕಾರ ಸೌಧದ ಶಂಕುಸ್ಥಾಪನಾ ಸಮಾರಂಭದಲ್ಲಿ ಸೋಮ ವಾರ ಮಾತನಾಡಿದ ಅವರು,`1.08ಕೋಟಿ ಬಿಪಿಎಲ್ ಕಾರ್ಡ್‍ದಾರ ಕುಟುಂಬಗಳಿವೆ. ಪ್ರತಿ ಕುಟುಂಬದ ಒಬ್ಬರನ್ನು ಸಹಕಾರಿ ಸಂಘದಸದಸ್ಯರನ್ನಾಗಿ ಮಾಡಲಾಗುವುದು. ಎಲ್ಲ ವರ್ಗದ ಜನರಿಗೂ ಸಹಕಾರಿ ಸಂಘದ ಸೌಲಭ್ಯ ದೊರಕಿಸುವ ನಿಟ್ಟಿನಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿ ಕೆಳವರ್ಗದವರ ಅಭಿವದ್ಧಿಯಾಗುತ್ತದೆ.
ಸಹಕಾರ ಸಂಘಗಳಲ್ಲಿ ಸದಸ್ಯರಾದವರಿಗೆ ಮಾತ್ರ ಯಶಸ್ವಿನಿ ಯೋಜನೆ ಸೌಲಭ್ಯ ದೊರೆಯುತ್ತದೆ. ಯಶಸ್ವಿನಿ ಯೋಜನೆ ಮೊದಲು ಗ್ರಾಮೀಣ ಪ್ರದೇಶದಲ್ಲಿತ್ತು. ಈಗ ಪಟ್ಟಣ ಪ್ರದೇಶಗಳಿಗೂ ವಿಸ್ತರಿಸಲಾಗಿದೆ' ಎಂದು ತಿಳಿಸಿದರು.
ಸಹಕಾರಿ ಕ್ಷೇತ್ರ ಪ್ರವೇಶಿಸದ ಯಾವ ಕ್ಷೇತ್ರವೂ ಉಳಿದಿಲ್ಲ. ಹಿಂದುಳಿದವರು, ಅಲ್ಪಸಂಖ್ಯಾತರು, ಬಡವರು, ದಲಿತರಿಗೆ ಆರ್ಥಿಕವಾಗಿ ನೆರವು ನೀಡುತ್ತಿದೆ. ರಾಜಕಾರಣಿಗಳು ಮೊದಲು ಸಹಕಾರಿ ಕ್ಷೇತ್ರ ಬಂದು ನಂತರ ರಾಜಕಾರಣಕ್ಕೆ ಬರುತ್ತಾರೆ. ಆದರೆ, ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರು ವಿಶ್ವಾಸಾರ್ಹತೆಯಿಂದ ಕೆಲಸ ಮಾಡಬೇಕು. ಸ್ವಾರ್ಥ ರಾಜಕಾರಣ ಮಾಡಿದರೆ ಸಹಕಾರಿ ಕ್ಷೇತ್ರ ಉಳಿಯುವುದಿಲ್ಲ ಎಂದು ಎಚ್ಚರಿಸಿದರು.
ಸಹಕಾರ ಸಚಿವ ಮಹದೇವ ಪ್ರಸಾದ್ ಮಾತನಾಡಿ, `ಬೆಂಗಳೂರಿನಲ್ಲಿ ಇಲಾಖೆ ಸ್ವಂತ ಕಟ್ಟಡವಿರಲಿಲ್ಲ. ಆ ನಿಟ್ಟಿನಲ್ಲಿ ಸಹಕಾರ ಸೌಧ ನಿರ್ಮಾಣಗೊಳ್ಳುತ್ತಿದೆ. ಭವನ ನಿರ್ಮಾಣವನ್ನು ಒಂದೂವರೆಣಿ ವರ್ಷದಲ್ಲಿ ಪೂರೈಸಲಾಗುವುದು. ನಂದಿನಿ ಹಾಲು ಒಕ್ಕೂಟದ ಉತ್ಪನ್ನ, ಜವಳಿ ಸಹಕಾರ ಸಂಘದ ಉತ್ಪನ್ನಗಳ ಮಾರಾಟ ಮತ್ತು ವಸ್ತು ಪ್ರದರ್ಶನಕ್ಕೂ ಸೌಧದಲ್ಲಿ ಅವಕಾಶ ಕಲ್ಪಿಸಲಾಗುವುದು ಎಂದರು. ಸರ್ಕಾರ ಮೈಸೂರಿನಲ್ಲಿ ಸಹಕಾರ ಅಕಾಡೆಮಿ ಸ್ಥಾಪನೆಗೆ ಮುಂದಾಗಿದೆ' ಎಂದು ಇದೇ ವೇಳೆ ತಿಳಿಸಿದರು.
ಶಾಸಕ ಡಾ. ಅಶ್ವತ್ಥನಾರಾಯಣ ಮಾತನಾಡಿ, ಸಹಕಾರ ಸಂಘದ ಸುತ್ತಮುತ್ತ ಪ್ರದೇಶದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ಆದ್ದರಿಂದ ಸೌಧದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಮಲ್ಲೇಶ್ವರ ಸಹಕಾರ ಸಂಘದ ಜಾಗವಾದ್ದರಿಂದ ಅದರ ನೆನಪಿನ ಹೆಸರನ್ನು ಸೌಧಕ್ಕೆ ಇಡಬೇಕು ಎಂದು ಮನವಿ ಮಾಡಿದರು. ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಆಹಾರ ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಮುಖಂಡ ಎಚ್.ಎಂ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಉಪಸ್ಥಿತರಿದ್ದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


