ಬಯಲಾಯ್ತು ಶಿಖರದ ಭೀಕರತೆ!
ಸಂಸತ್‍ನ ಎರಡೂ ಸದನಗಳಲ್ಲಿ ಸೋಮವಾರ ನೇಪಾಳದ ಭೂಕಂಪದ ವಿಚಾರವೇ ಪ್ರತಿಧ್ವನಿಸಿತು. ಭೂಕಂಪದ ಸುದ್ದಿ ತಿಳಿದೊಡನೆ ಕಾರ್ಯಾಚರಣೆಯ ನೇತೃತ್ವ ವಹಿಸಿದ ಪ್ರಧಾನಿ ಮೋದಿ...

ಎವರೆಸ್ಟ್ ಹಿಮಪಾತದ ವಿಡಿಯೋ ಬಹಿರಂಗ ದುರಂತದ ನಡುವೆಯೂ ಸೆರೆಹಿಡಿದ ದೃಶ್ಯ
ನವದೆಹಲಿ: ಸಂಸತ್‍ನ ಎರಡೂ ಸದನಗಳಲ್ಲಿ ಸೋಮವಾರ ನೇಪಾಳದ ಭೂಕಂಪದ ವಿಚಾರವೇ ಪ್ರತಿಧ್ವನಿಸಿತು. ಭೂಕಂಪದ ಸುದ್ದಿ ತಿಳಿದೊಡನೆ ಕಾರ್ಯಾಚರಣೆಯ ನೇತೃತ್ವ ವಹಿಸಿದ ಪ್ರಧಾನಿ ಮೋದಿ ಅವರನ್ನು ಎಲ್ಲ ಸದಸ್ಯರೂ ಪಕ್ಷಭೇದ ಮರೆತು ಶ್ಲಾಘಿಸಿದರು.
ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಸದಸ್ಯರು ನೇಪಾಳ ಭೂಕಂಪದಿಂದ ಮೃತರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಲೋಕಸಭೆಯಲ್ಲಿ ಮಾತನಾಡಿದ ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ನೇಪಾಳಕ್ಕೆ ನೆರವು ನೀಡುವಲ್ಲಿ ಪ್ರಧಾನಿ ಮೋದಿ ಹಾಗೂ ಭಾರತ ಸರ್ಕಾರ ವಹಿಸಿದ ಪಾತ್ರವನ್ನು ಕೊಂಡಾಡಿದರು. ಇಂತಹ ಸಂದರ್ಭದಲ್ಲಿ ಎಲ್ಲ ಪಕ್ಷಗಳೂ ಒಂದಾಗಿ ನಿಂತು ನೆರವು ನೀಡಬೇಕು ಎಂದರು.
ಎರಡೂ ಸದನಗಳಲ್ಲಿ ಭೂಕಂಪ, ನೇಪಾಳ ಮತ್ತು ಭಾರತದಲ್ಲಾದ ಹಾನಿ, ಭವಿಷ್ಯದಲ್ಲಿ ಸರ್ಕಾರ ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆಯೇ ಚರ್ಚೆ ನಡೆದವು. ಇದೇ ವೇಳೆ, ಭಾರತದಲ್ಲಿ ಈಗ ಭೂಕಂಪ ಸಂಭವಿಸಲಿದೆ ಎಂಬ ಸುದ್ದಿಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. ಯಾರೂ ಅಂತಹ ಗಾಳಿಸುದ್ದಿಗಳಿಗೆ ಕಿವಿಗೊಡಬೇಡಿ ಎಂದು ಸರ್ಕಾರ ಮನವಿ ಮಾಡಿತು.
ಮೃತರ ಸಂಖ್ಯೆ 72ಕ್ಕೇರಿಕೆ
ಭೂಕಂಪದಿಂದ ಭಾರತದಲ್ಲಿ ಮೃತಪಟ್ಟವರ ಸಂಖ್ಯೆ 72ಕ್ಕೇರಿದ್ದು, ಬಿಹಾರದಲ್ಲಿ 56, ಉತ್ತರಪ್ರದೇಶದಲ್ಲಿ 12, ಪಶ್ಚಿಮ ಬಂಗಾಳದಲ್ಲಿ 3 ಮತ್ತು ರಾಜಸ್ಥಾನದಲ್ಲಿ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ. ಪರಿಹಾರ ಕಾರ್ಯಾಚರಣೆ ಬಗ್ಗೆ ವಿವರಣೆ ನೀಡಿದ ಸಚಿವರು, 10 ಎನ್ ಡಿಆರ್‍ಎಫ್ ತಂಡಗಳು ಈಗಾಗಲೇ ಕಠ್ಮಂಡುವಿನಲ್ಲಿದ್ದು, ಮತ್ತೆ 6 ತಂಡಗಳು ನೇಪಾಳದತ್ತ ತೆರಳುತ್ತಿವೆ. ಒಂದು ಎಂಜಿನಿಯರಿಂಗ್ ಕಾರ್ಯಪಡೆ ಮತ್ತು 18 ವೈದ್ಯಕೀಯ ಘಟಕಗಳೂ ಅಲ್ಲಿಗೆ ತೆರಳಿವೆ ಎಂದೂ ತಿಳಿಸಿದ್ದಾರೆ.
ಏತನ್ಮಧ್ಯೆ, ನೇಪಾಳ ಭೂಕಂಪದಲ್ಲಿ ಅಸ್ಸಾಂನಿಂದ ತೆರಳಿದ್ದ 7 ಪ್ರವಾಸಿಗರು ಮೃತಪಟ್ಟಿದ್ದಾರೆ ಎಂದು ಕ್ರೀಡಾ ಖಾತೆ ರಾಜ್ಯ ಸಚಿವ ಸರ್ಬಾನಂದ ಸೋನೋವಾಲ್ ಸಂಸತ್‍ನಲ್ಲಿ ಮಾಹಿತಿ ನೀಡಿದ್ದಾರೆ. ಮಕ್ಕಳ ಮೇಲೆ ಪರಿಣಾಮ ನೇಪಾಳ ಭೂಕಂಪವು 10 ಲಕ್ಷಕ್ಕೂ ಹೆಚ್ಚು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂದು ಯುನಿಸೆಫ್ ಹೇಳಿದೆ.
ಲಕ್ಷಾಂತರ ಮಂದಿ ನಿರ್ವಸಿತರಾಗಿರುವ ಕಾರಣ ಎಲ್ಲರೂ ಬಯಲಲ್ಲೇ ಟೆಂಟ್ ಗಳಲ್ಲಿ ಜೀವಿಸುತ್ತಿದ್ದಾರೆ. ಹೀಗಾಗಿ ಅಲ್ಲಿ ಹಲವು ಸೋಂಕುಗಳು ಹರಡುವ ಸಾಧ್ಯತೆಯಿದೆ. ಹಾಗಾಗಿ ಅವರೆಲ್ಲರಿಗೂ ಶುದ್ಧ ನೀರು ಮತ್ತು ನೈರ್ಮಲ್ಯ ವ್ಯವಸ್ಥೆ ಕಲ್ಪಿಸುವತ್ತ ನಾವು ಹೆಜ್ಜೆಯಿಟ್ಟಿದ್ದೇವೆ ಎಂದೂ ಯುನಿಸೆಫ್ ತಿಳಿಸಿದೆ.
ನನಸಾಗದ ಕನಸು
ಎವರೆಸ್ಟ್ ಶಿಖರವೇರುವುದು ಆಕೆಯ ಜೀವನದ ಅತಿದೊಡ್ಡ ಕನಸಾಗಿತ್ತು. ಅದನ್ನು ಈಡೇರಿಸುವ ನಿರೀಕ್ಷೆಯಿಂದ ಪರ್ವತಾರೋಹಣ ಆರಂಭಿಸಿದ್ದಳು. ಇನ್ನೇನು ತನ್ನ ಜೀವನದ ಗುರಿಯನ್ನು ಸಾಧಿಸಬೇಕು ಎನ್ನುವಷ್ಟರಲ್ಲಿ ಬರಸಿಡಿಲಿನಂತೆ ಎರಗಿದ ಹಿಮಪಾತ ಆಕೆಯನ್ನು ಬಲಿತೆಗೆದುಕೊಂಡಿತು. ಇದು ಎವರೆಸ್ಟ್ ಹಿಮಪಾತದಿಂದ ಸಾವಿಗೀಡಾದ 49 ವರ್ಷದ ರೇಣು ಪೋತೆದಾರ್‍ಳ ಕಥೆ. ಮೂಲತಃ ಶ್ರೀನಗರದವಳಾದ ರೇಣು ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಳು.
ಸಾಹಸಕ್ರೀಡೆಗಳ ಪ್ರೇಮಿಯಾಗಿದ್ದ ಈಕೆ ಸ್ನೇಹಿತರ ಜತೆಗೂಡಿ ಎವರೆಸ್ಟ್ ಶಿಖರ ಹತ್ತಲು ನಿರ್ಧರಿಸಿದ್ದಳು. ಶಿಖರದ ಬುಡದಲ್ಲಿ ಸ್ನೇಹಿತರೊಂದಿಗೆ ನಿಂತು ತೆಗೆಸಿದ ಫೋಟೋವನ್ನು ಫೇಸ್ ಬುಕ್ ಹಾಕಿಕೊಂಡಿದ್ದಳು. ಏ.24 ರಂದು ರೇಣು ಬೇಸ್ ಕ್ಯಾಂಪ್ ತಲುಪಿದ್ದಳು. ಈಗ ಜಪಾನಿನ ಮಹಿಳಾ ಪರ್ವತಾರೋಹಿಯ ಜತೆಗೆ ರೇಣುವಿನ ಮೃತದೇಹವೂ ಸಿಕ್ಕಿದೆ. ರೇಣು ಅವರಿದ್ದ ಇಡೀ ತಂಡವೇ ಹಿಮಪಾತಕ್ಕೆ ಬಲಿಯಾಗಿದೆ.
ರಕ್ಷಣಾ ಕಾರ್ಯ
ಎವರೆಸ್ಟ್ ಶಿಖರದ ಎತ್ತರದ ಪ್ರದೇಶದಲ್ಲಿ ಸಿಲುಕಿಕೊಂಡ ಪರ್ವತಾರೋಹಿಗಳನ್ನು ಸೋಮವಾರ ಸೇನಾ ಹೆಲಿಕಾಪ್ಟರ್‍ಗಳು ರಕ್ಷಿಸಿವೆ. ಕ್ಯಾಂಪ್ ಒಂದು ಮತ್ತು ಎರಡರಲ್ಲಿ 150 ಮಂದಿ ಸಿಲುಕಿಕೊಂಡಿದ್ದು, ಅವರನ್ನು ರಕ್ಷಿಸಲೆಂದು 3 ಕಾಪ್ಟರ್ ಗಳು ತೆರಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹಿಮಪಾತದ ವೇಳೆ ಶಿಖರದ ಬೇರೆ ಬೇರೆ ಪ್ರದೇಶಗಳಲ್ಲಿ
800ಕ್ಕೂ ಹೆಚ್ಚು ಪರ್ವತಾರೋಹಿಗಳಿದ್ದರು. ಹಿಮಪಾತದಿಂದ 18 ಪರ್ವತಾರೋಹಿಗಳು ಮತ್ತು ಶೆರ್ಪಾಗಳು ಮೃತಪಟ್ಟಿ ರುವುದು ದೃಢಪಟ್ಟಿದೆ.
ಬಸ್ ಸೇವೆ ಇಂದಿನಿಂದ
ಉತ್ತರ ಪ್ರದೇಶದ ಗೋರಖ್‍ಪುರ ಮೂಲಕ ನೇಪಾಳಕ್ಕೆ ಬಸ್ ಸೇವೆಯನ್ನು ಮಂಗಳವಾರದಿಂದ ಆರಂಭಿಸಲಾಗುತ್ತದೆ. ಈ ಮೂಲಕ ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳ ಪ್ರಜೆಗಳನ್ನು ದೆಹಲಿಗೆ ಕರೆ ತರಲು ಪ್ರಯತ್ನ ನಡೆಸಲಾಗುತ್ತಿದೆ. ಸುಮಾರು 100 ಬಸ್‍ಗಳನ್ನು ಈ ನಿಟ್ಟಿನಲ್ಲಿ ಬಳಸಲಾಗುತ್ತದೆ ಎಂದು ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
ದುರಂತದ ನಡುವೆ ಲೂಸ್‍ಟಾಕ್
ಭೀಕರ ದುರಂತ ಸಂಭವಿಸಿ ಸಾವಿರಾರು ಮಂದಿ ಪ್ರಾಣ ತೆತ್ತಿದ್ದರೆ, ನಮ್ಮ ಸಂಸದರು ಎಲುಬಿಲ್ಲದ ನಾಲಗೆಗೆ ಕಡಿವಾಣ ಹಾಕಿಲ್ಲ. ನೇಪಾಳ ಭೂಕಂಪಕ್ಕೆ ರಾಹುಲ್ ಗಾಂ„ ಅವರೇ ಕಾರಣ ಎನ್ನುವ ಮೂಲಕ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಮತ್ತೊಮ್ಮೆ ಮೂರ್ಖತನ ಪ್ರದರ್ಶಿಸಿದ್ದಾರೆ. ರಾಹುಲ್ ಅವರು ದನದ ಮಾಂಸ ತಿಂದು, ಶುದ್ಧರಾಗದೆ ಪವಿತ್ರ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಹೀಗಾಗಿಯೇ ಭೂಕಂಪ ಸಂಭವಿಸಿದೆ ಎಂದಿದ್ದಾರೆ ಮಹಾರಾಜ್.
ಇದೇ ವೇಳೆ, ಎಸ್ಪಿ ಸಂಸದ ರಾಮ್ ಗೋಪಾಲ್ ಯಾದವ್, ದುರಂತ ಸ್ಥಳದಲ್ಲಿರುವ ರಾಜಕಾರಣಿಯ ಕುಟುಂಬ ಸದಸ್ಯರಿಗೆ ವಿಶೇಷ ವ್ಯವಸ್ಥೆ ಕಲ್ಪಿಸಬೇಕು ಎಂದು ಕೋರಿದ್ದಾರೆ. ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿಲ್ಲ. ಎಸ್ಪಿ ನಾಯಕ ನರೇಶ್ ಅಗರ್ವಾಲ್ ಸಂಬಂಧಿಕರು ಭೂಕಂಪಪೀಡಿತ ಪ್ರದೇಶದಲ್ಲಿ ಸಿಲುಕಿದ್ದಾರೆ. ಅವರ ರಕ್ಷಣೆ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


