ರೈತರ ನ್ಯಾಯಕ್ಕಾಗಿ ಯುದ್ಧ ಮಾಡಲು ಸಿದ್ಧ: ರಾಹುಲ್ ಗಾಂಧಿ
ಭೂ ಮಸೂದೆ ಕಾಯ್ದೆ ತಿದ್ದುಪಡಿ ರೈತರನ್ನು ಕಂಗಾಲಾಗುವಂತೆ ಮಾಡಿದೆ. ಸರ್ಕಾರ ಬಡ ರೈತರನ್ನು ಮರೆತಿದೆ ಎಂದು ರೈತರು ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಮೋದಿ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ...

ನವದೆಹಲಿ: ಭೂ ಮಸೂದೆ ಕಾಯ್ದೆ ತಿದ್ದುಪಡಿ ರೈತರನ್ನು ಕಂಗಾಲಾಗುವಂತೆ ಮಾಡಿದೆ. ಸರ್ಕಾರ ಬಡ ರೈತರನ್ನು ಮರೆತಿದೆ ಎಂದು ರೈತರು ತಮ್ಮ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ. ಮೋದಿ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ.
ಬರೋಬ್ಬರಿ 56 ದಿನಗಳ ರಜೆ ಮುಗಿಸಿ ದೆಹಲಿಗೆ ಆಗಮಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ವಾಪಸಾದ ನಂತರ ಇದೇ ಮೊದಲ ಬಾರಿಗೆ ಕಾಂಗ್ರೆಸ್ ನೇತೃತ್ವದ ಭೂಸ್ವಾಧೀನ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಮಲೀಲಾ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದ್ದು, ಕೇಂದ್ರದ ವಿವಾದಿತ ಭೂಮಸೂದೆ ಕಾಯ್ದೆ ಕುರಿತಂತೆ ಮೋದಿ ವಿರುದ್ಧ ಕಿಡಿ ಕಾರಿದ್ದಾರೆ. ನಮ್ಮ ಸರ್ಕಾರ ರೈತರ ಪರವಾಗಿದ್ದು, ರೈತರಿಗೆ ನ್ಯಾಯ ಒದಗಿಸುವ ಸಲುವಾಗಿ ಯುದ್ಧ ಮಾಡಲೂ ಕೂಡ ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಭೂಮಸೂದೆ ಕಾಯ್ದೆಯಲ್ಲಿ ಆದ ತಿದ್ದುಪಡಿಯಿಂದಾಗಿ ರೈತರು ಕಂಗಾಲಾಗಿದ್ದಾರೆ. ರೈತರು ಇಂದು ರಾತ್ರಿ ಕಣ್ಣು ಮುಚ್ಚಿ ಮಲಗಿದರೆ ನಾಳೆ ಏಳುವ ಹೊತ್ತಿಗೆ ಅವರ ಭೂಮಿ ಏನಾಗುತ್ತದೆ ಎನ್ನುವ ಭಯದಲ್ಲಿದ್ದಾರೆ. ಯಾವಾಗ ಏನಾಗುತ್ತದೆ ಎಂದು ಯಾರೂ ಹೇಳಲು ಸಾಧ್ಯವಾಗುತ್ತಿಲ್ಲ. ರೈತರು ಭಯದಲ್ಲಿ ಜೀವನ ನಡೆಸುವಂತಾಗಿದೆ.
ರೈತರು ಸಂಕಷ್ಟದಲ್ಲಿದ್ದಾಗ ಕಾಂಗ್ರೆಸ್ ರೈತರ ಪರವಾಗಿ ನಿಂತಿತ್ತು. ಸಾಲ ಮನ್ನಾ ಮಾಡುವ ಕುರಿತಂತೆ ಯಾರು ಎಷ್ಟೇ ವಿರೋಧ ವ್ಯಕ್ತಪಡಿಸಿದರೂ ಅದನ್ನು ಕೇಳದ ನಮ್ಮ ಸರ್ಕಾರ ಸಾಲ ಮನ್ನಾ ಮಾಡಿಯೇ ತೀರುತ್ತೇವೆಂದು ನಿರ್ಧಾರ ಕೈಗೊಂಡಿತು. ರೈತರಿಗೆ 70,000 ದಷ್ಟು ಸಾಲ ನೀಡಿತು. ಬಡ ಕಾರ್ಮಿಕರಿಗೆ ಉಪಯೋಗವಾಗುವ ಸಲುವಾಗಿ ಮನ್ ರೇಗಾ ಯೋಜನೆ ಜಾರಿಗೆ ತಂದೆವು.
ರೈತರಿಗಿರುವ ಶಕ್ತಿ ಪ್ರಧಾನಮಂತ್ರಿ ಅವರಿಗೆ ಅರ್ಥವಾಗುತ್ತಿಲ್ಲ. ಸರ್ಕಾರ ಬಡವರ ಪರವಾಗಿದೆ ಎಂದು ಮೋದಿ ಹೇಳುತ್ತಾರೆ. ಅದರೆ ಬಡವರಿಗಾಗಿ ಸರ್ಕಾರ ಏನೂ ಕೊಟ್ಟಿಲ್ಲ. ಸರ್ಕಾರ ಇದೀಗ ಏನೇ ಮಾಡಿದರೂ ಅದು ದೊಡ್ಡ ಉದ್ಯಮಿಗಳಿಗಾಗಿ ಬಡವರಿಗಾಗಿ ಅಲ್ಲ. ದೇಶದಲ್ಲಿ 50 ವರ್ಷದ ಕೊಳೆಯನ್ನು ಸ್ವಚ್ಛಗೊಳಿಸುತ್ತೇನೆ ಎಂದು ವಿದೇಶಕ್ಕೆ ಹೋದ ಸಂದರ್ಭದಲ್ಲಿ ಮೋದಿ ಹೇಳಿದ್ದರು. ಈ ಹೇಳಿಕೆ ಮೋದಿ ಅವರಿಗೆ ಶೋಭೆ ತರುವಂತಹದ್ದಲ್ಲ.
ಬಡವರಿಗಾಗಿ ಯುಪಿಎ ಸರ್ಕಾರ ಉತ್ತಮ ಯೋಜನೆಗಳಲನ್ನ ತಂದಿತ್ತು. ಆದರೆ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಡವರ ಪರವಾಗಿ ಯಾವ ಯೋಜನೆಯನ್ನೂ ಜಾರಿಗೆ ತರಲಿಲ್ಲ. ಬದಲಿಗೆ ಬಡವರ ಭೂಮಿಯನ್ನೇ ಲಪಟಾಯಿಸುವ ಪ್ರಯತ್ನ ಮಾಡುತ್ತಿದೆ ಎಂದು ಮೋದಿ ವಿರುದ್ಧ ರಾಹುಲ್ ವಾಗ್ದಾಳಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


