ಕೆಎಂಸಿ ಕಾಯಿದೆ ವಿರೋಧಿಸಿ ಪ್ರತಿಭಟನೆ
ಕೆಎಂಸಿ ಕಾಯಿದೆ ಮತ್ತು ವಾರ್ಡ್ ಸಮಿತಿಗಳ ಮೇಲೆ ನೂತನವಾಗಿ...

ಬೆಂಗಳೂರು: ಕೆಎಂಸಿ ಕಾಯಿದೆ ಮತ್ತು ವಾರ್ಡ್ ಸಮಿತಿಗಳ ಮೇಲೆ ನೂತನವಾಗಿ ಜಾರಿಗೆ ತಂದಿರುವ ನಿಯಮಗಳನ್ನು ವಿರೋಧಿಸಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ನೇತೃತ್ವದಲ್ಲಿ 'ನಮ್ಮ ಬೆಂಗಳೂರು ಪ್ರತಿಷ್ಠಾನ'ದ ಕಾರ್ಯಕರ್ತರು ಬುಧವಾರ ನಗರದ ಪುರಭವನದ ಎದುರು ಪ್ರತಿಭಟನೆ ನಡೆಸಿದರು.
ನೂತನ ನಿಯಮಗಳನ್ನು ಜಾರಿಗೊಳಿಸುವಾಗ ಸಾರ್ವಜನಿಕರ ಸಲಹೆಗಳನ್ನು ಪರಿಗಣಿಸಿಲ್ಲ. ಪಾಲಿಕೆ ಸದಸ್ಯರಿಗೆ ವಿಟೋ ಅಧಿಕಾರ ನೀಡಿ, ವಾರ್ಡ್ ಸಮಿತಿಗಳನ್ನು ನಿರರ್ಥಕಗೊಳಿಸಲಾಗಿದೆ. ಆ ಮೂಲಕ ಅರ್ಥಪೂರ್ಣವಲ್ಲದ, ನೈಜ ಪ್ರಾತಿನಿಧ್ಯವಿಲ್ಲದ ಸಮಿತಿಗಳನ್ನೇ ಅದು ನಿರೂಪಿಸಿದೆ. ಇದು ನಗರದ ನಾಗರಿಕರಿಗೆ ಮಾಡಿ ದ್ರೋಹವೆಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆಯ ನೇತೃತ್ವವಹಿಸಿದ್ದ ದೊರೆ ಸ್ವಾಮಿ ಮಾತನಾಡಿ, ಆಡಳಿತದಲ್ಲಿ ಸಾರ್ವಜನಿಕರನ್ನು ಕಡೆಗಣಿಸುತ್ತಿರುವ ಪಾಲಿಕೆ ಮತ್ತು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಗರಾಡಳಿತ ಸುಧಾರಿಸಬೇಕಾದರೆ ಸಮುದಾಯಗಳ ಪಾಲುದಾರಿಕೆ ಅತ್ಯಗತ್ಯ. ಈ ವಿಷಯವೂ ಪಾಲಿಕೆ ಮತ್ತು ಸರ್ಕಾರಗಳ ಅರಿವಿಗೆ ಬಾರದಿರುವುದು ನೋವಿನ ಸಂಗತಿ ಎಂದು ವಿಷಾದಿಸಿದರು. ಈಗಾಗಲೇ ಮಹಾನಗರ ಪಾಲಿಕೆ ಭ್ರಷ್ಟಾಚಾರದ ಕೂಪವಾಗಿದೆ.
ಪುರಭವನವನ್ನೇ ಒತ್ತೆ ಇಡಲು ಪಾಲಿಕೆ ಸದಸ್ಯರು ಬಂದು ನಿಂತಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರ ಸಹಭಾಗಿತ್ವವಿಲ್ಲದೆ, ನಗರದಲ್ಲಿ ಉತ್ತಮ ಆಡಳಿತ ನಿರೀಕ್ಷಿಸಲು ಸಾಧ್ಯವಿಲ್ಲ. ಇದಕ್ಕಾಗಿ ಹೋರಾಟ ನಡೆಸುವುದು ಅನಿವಾರ್ಯ. ಜನರಿಗೆ ತಾವೇ ಕೊಟ್ಟ ಭರವಸೆಯನನ್ನು ಈಡೇರಿಸಲಾಗದಂಥ ದುರ್ವರ್ತನೆಯನ್ನು ಜನ ಪ್ರತಿನಿಧಿಗಳು ಪ್ರದರ್ಶಿಸುತ್ತಿದ್ದಾರೆ. ಮುಂದೆ ಅವರು ಜನರ ಬಳಿಗೆ ಮತ್ತೆ ತೆರಳಬೇಕು ಎಂಬುದನ್ನೇ ಮರೆತಿದ್ದಾರೆ ಎಂದು ಕಿಡಿಕಾರಿದರು.
ನಿವೃತ್ತ ಅಧಿಕಾರಿ ರಘುನಂದನ್ ಮಾತನಾಡಿ, ವಾರ್ಡ್ ಸಮಿತಿಗಳಿಗಿದ್ದ ಅಧಇಕಾರವನ್ನೇ ಕಿತ್ತು, ಪಾಲಿಕೆ ಸದಸ್ಯರಿಗೆ ವಿಟೋ ಅಧಿಕಾರ ನೀಡಿರುವುದು ಕಾನೂನು ವಿರೋಧಿ ಕ್ರಮವಾಗಿದೆ. ಕಲಂ 14 ರಲ್ಲಿ ಇದರ ವಿರುದ್ಧ ಕೋರ್ಟ್‌ಗೆ ಹೋಗುವ ಅವಕಾಶವಿದೆ ಎಂದರು.
ಸಿವಿಕ್ ಸಂಸ್ಥೆಯ ಪ್ರತಿನಿಧಿ ಕಾತ್ಯಾಯಿನಿ ಚಾಮರಾಜ್ ಹಾಗೂ ಸಿಟಿಜನ್ ಆ್ಯಕ್ಷನ್‌ಫೋರಂ ಮುಖಂಡ ರಾಜಶೇಖರ್ ಮಾತನಾಡಿ, ಬಿಬಿಎಂಪಿ ಭ್ರಷ್ಟಚಾರದಿಂದ ಮುಕ್ತವಾಗಬೇಕಾದರೆ, ಸಾರ್ವಜನಿಕ ಪಾಲುದಾರಿಕೆಗೆ ಹೆಚ್ಚಿನ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಅಧಿಕಾರ ವಿಕೇಂದ್ರಿಕರಣ, ಪಾರದರ್ಶಕತೆ, ಉತ್ತರದಾಯಿತ್ವಕ್ಕೆ ಆದ್ಯತೆ ನೀಡಿ ಸಂವಿಧಾನದ 74ನೇ ತಿದ್ದುಪಡಿ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಸಮಿತಿ ರಚಿಸಬೇಕು.
ಪಾಲಿಕೆ ಸದಸ್ಯರ ವಿಟೋ ಅಧಇಕಾರ ತೆಗೆದು ಹಾಕಬೇಕು. ಪ್ರದೇಶ ಸಭಾ ಪ್ರತಿನಿಧಿಗೆ ಚುನಾವಣೆ ಮೂಲಕ ಆಯ್ಕೆ ಮಾಡಬೇಕು. ವಾರ್ಡ್ ಸಮಿತಿಗಳು ರಾಜಕೀಯ ಮುಕ್ತವಾಗಿರಬೇಕು. ಪಾಲಿಕೆ ಬಜೆಟ್‌ನಲ್ಲಿ ಶೇ.40ರಷ್ಟು ನಿಧಿಯನ್ನು ವಾರ್ಡ್ ಸಮಿತಿಗಳಿಗೆ ನೀಡಬೇಕು ಎಂದು ಒತ್ತಾಯಿಸಿದರು.
ಅಭ್ಯುದಯ ಪ್ರತಿಷ್ಠಾನ, ಎಪಿಡಿ, ಬ್ರೇಸ್, ಸಿಟಿಜನ್ಸ್ ಆ್ಯಕ್ಷನ್ ಫೋರಂ, ಸಿವಿಕ್, ದಲಿತ ಬಹುಜನ ಚಳುವಳಿ, ಎನ್ವಿರಾನ್ಮೆಂಟ್ ಸಪೋರ್ಟ್ ಗ್ರೂಪ್, ಈಶಾನ್ಯ ವೇದಿಕೆ, ಪಾರ್ವರ್ಡ್ ಹೆಬ್ಬಾಳ, ಕೂಗು ಮಹಿಳಾ ಒಕ್ಕೂಟ, ಸೊಸೈಟಿ ಫಾರ್ ಪೀಪಲ್ಸ್ ಆ್ಯಕ್ಷನ್ ಫಾರ್ ಡೆವೆಲಪ್‌ಮೆಂಟ್ ಸೇರಿದಂತೆ ನಾನಾ ಸಂಘ-ಸಂಸ್ಥೆಗಳು ಪಾಲ್ಗೊಂಡಿದ್ದವು.
ವಾರ್ಡ್ ಕಮಿಟಿಗಳಲ್ಲಿ ನಾಗರಿಕ ಪ್ರಾತಿನಿಧ್ಯವಿರಲಿ
ನಮ್ಮ ಬೆಂಗಳೂರಿನಲ್ಲಿ ಬೇರೂರಿರುವ ಭ್ರಷ್ಟಾಚಾರ ಮತ್ತು ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಹೋರಾಡಿತ್ತಿದ್ದೇವೆ. ಆಡಳಿತದಲ್ಲಿ ಪಾರದರ್ಶಕತೆ ಮತ್ತು ನಗರದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಹೆಚ್ಚನ ನಾಗರಿಕ ಪಾಲುದಾರಿಕೆಗಾಗಿ ನಿರಂತರವಾಗಿ ದನಿ ಎತ್ತುವ ಮೂಲಕ ಒಬ್ಬ ಸಂಸತ್ ಸದಸ್ಯನಾಗಿ ನನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿಕೊಂಡು ಬರುತ್ತಿದ್ದೇನೆ. ಈಗ ವಾರ್ಡ್ ಸಮಿತಿಗಳಿಂದ ನಾಗಿರಕರನ್ನು ಹೊರಗಿಟ್ಟಿರುವ ರಾಜ್ಯ ಸರ್ಕಾರದ ಕ್ರಮವನ್ನೂ ಸಂಪೂರ್ಣವಾಗಿ ವಿರೋಧಿಸುತ್ತೇನೆ ಎಂದು ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದರು.
ದೇಶದೆಲ್ಲೆಡೆ ಅನೇಕ ರಾಜ್ಯ ಸರ್ಕಾರಗಳು ಪಾರದರ್ಶಕತೆ ಮತ್ತು ಆಡಳಿತದಲ್ಲಿ ನಾಗರಿಕ ಪಾಲುದಾರಿಕೆಗಳನ್ನು ಜಾರಿಗೊಳಿಸುತ್ತಿರುವ ಸಮಯದಲ್ಲಿ, ಕರ್ನಾಟಕ ಸರ್ಕಾರದ ಈ ಕ್ರಮ ಪ್ರತಿಕೂಲವಾಗಿದೆ. ವರ್ಷದ ಹಿಂದೆಯಷ್ಟೇ 'ಉತ್ತಮ ಆಡಳಿತದ' ಘೋಷ ವಾಕ್ಯದೊಂದಿಗೆ ಅಧಿಕಾರಕ್ಕೆ ಬಂದ, ಮುಖ್ಯಮಂತ್ರಿ ಮತ್ತುರಾಜ್ಯ ಸರ್ಕಾರದ ಉದ್ದೇಶಗಳು ಗಂಭೀರ ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿವೆ.
ಬೆಂಗಳೂರಿಗೆ ಈಗ ಅಗತ್ಯವಿರುವುದು ಆಡಳಿತ ಸುಧಾರಣಾ ಕ್ರಮಗಳೇ ಹೊರತು. ಇಷ್ಟು ವರ್ಷಗಳಿಂದ ನಾವು ನೋಡುತ್ತಿರುವ ಹಳೆಯ ಮುಚ್ಚು ಮರೆಯ ರಾಜಕಾರಣವಲ್ಲ ಎಂದರು.
ಮಕ್ಕಳ ಸುರಕ್ಷತೆ, ಕಾನೂನು ಸುವ್ಯವಸ್ಥೆ, ನೈರ್ಮಲ್ಯ, ಸಾರ್ವಜನಿಕ ಸೇವೆಗಳು, ಮೂಲ ಸೌಕರ್ಯ ಇತ್ಯಾದಿಗಳ ಗುಣಮಟ್ಟ ಕುಸಿಯುತ್ತಿರುವುದರಿಂದ ಬೆಂಗಳೂರಿನ ನಾಗರಿಕರು ಆಕ್ರೋಷಗೊಂಡಿದ್ದಾರೆ. ಸನ್ಮಾನ್ಯ ಮುಖ್ಯಮಂತ್ರಿ ಇನ್ನಾದರೂ ನಗರದ ಅಭಿವೃದ್ಧಿ ವಿಷಯಗಳಲ್ಲಿ ಸಕ್ರಿಯ ನಾಗರಿಕರನ್ನು, ನಾಗರಿಕ ಸಂಘಟನೆಗಳನ್ನು ತೊಡಗಿಸಿಕೊಂಡು ಕಾರ್ಯ ವೈಖರಿಯಲ್ಲಿ ಪಾರದಶಂಕತೆ ತರಬೇಕೆಂದು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


