ಸರ್ಕಾರ ನಿಮ್ಮ ಅಪ್ಪನದ್ದಲ್ಲ
ಭಾನುವಾರ ರಜಾ ದಿನ ಎಂದು ಬಹುತೇಕರು ಮಜಾ ಮಾಡಿ ಕಳೆಯುತ್ತಾರೆ. ಆದರೆ ನಮ್ಮ ಪ್ರಧಾನಿ...

ಸಂಪುಟ ವಿಸ್ತರಣೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟ ಸಂದೇಶ
ಭಾನುವಾರ ರಜಾ ದಿನ ಎಂದು ಬಹುತೇಕರು ಮಜಾ ಮಾಡಿ ಕಳೆಯುತ್ತಾರೆ. ಆದರೆ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು 'ಭಾನುವಾರ'ವನ್ನು ಹಗುರವಾಗಿ ಪರಿಗಣಿಸಲಿಲ್ಲ. ಸಂಪುಟ ವಿಸ್ತರಣೆಗೆ ವಾರಾಂತ್ಯವನ್ನು ಆಯ್ದುಕೊಂಡಿದ್ದೇ ಇದಕ್ಕೆ ಸಾಕ್ಷಿ. ಈ ಮೂಲಕ ಅವರು 'ಸಕಾಂರ 24x7 ಕೆಲಸ ಮಾಡುತ್ತದೆ'. ಎಂಬ ಸಂದೇಶ ನೀಡಿದ್ದಾರೆ. ಇಷ್ಟೇ ಅಲ್ಲದೆ, ಅವರು ಸಂಪುಟ ಪುನಾರಚನೆ ಮೂಲಕ ಇನ್ನೂ 5 ಕಠಿಣ ಸಂದೇಶವನ್ನು ನೀಡಿದ್ದಾರೆ.
ಅವುಗಳು ಇಂತಿವೆ.
1. ಮೋದಿ ಅವರು ಬಹುತೇಕ ಅಧ್ಯಕ್ಷೀಯ ಮಾದರಿಯಲ್ಲೇ ಸರ್ಕಾರವನ್ನು ನಡೆಸುತ್ತಾರೆ. ತನಗೆ ಬೇಕಾದವರನ್ನು, ದೇಶಕ್ಕೆ ಸೇವೆ ಸಲ್ಲಿಸುವವರನ್ನು ತಾವೇ ಆಯ್ಕೆ ಮಾಡಿಕೊಳ್ಳುತ್ತಾರೆ. ವಿ.ಪಿ.ಸಿಂಗ್, ದೇವೇಗೌಡ, ಐಕೆ ಗುಜ್ರಾಲ್ ನೇತೃತ್ವದ ಸಮ್ಮಿಶ್ರ ಸರ್ಕಾರ ದುರ್ಬಲ ಆಡಳಿತ ನೀಡಿರುವುದು, ಡಾ. ಮನಮೋಹನ್ ಸಿಂಗ್‌ರಂಥವರು ಇದ್ದೂ ಇಲ್ಲದಂತೆ ಆಡಳಿತ ನಡೆಸಿರುವುದು ಹೀಗೆ ಕಳೆದ 25 ವರ್ಷಗಳ ದುರ್ಬಲ ನಾಯಕತ್ವವೇ ಮೋದಿ ಅವರು ವಿಭಿನ್ನ ಹಾದಿ ಆಯ್ಕೆ ಮಾಡಿಕೊಳ್ಳಲು ಕಾರಣ.
2. ಸಂಪುಟ ವಿಸ್ತರಣೆ ಮೂಲಕ ಅವರು ಮಿತ್ರಪಕ್ಷಗಳಿಗೆ ಕಠಿಣ ಸಂದೇಶ ರವಾನಿಸಿದ್ದಾರೆ. ಬಾಳಾಠಾಕ್ರೆ ಅವರು ಸುರೇಶ್ ಪ್ರಭು ಅವರನ್ನು ಹೊರದಬ್ಬಿ, ಅನಂತ್‌ಗೀತೆ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಾಗ ಅದನ್ನು ವಿರೋಧಿಸುವ ಧೈರ್ಯ ವಾಜಪೇಯಿ ಅವರಿಗಿರಲಿಲ್ಲ, ಆದರೆ ಮೋದಿ ಅವರು ಶಿವಸೇನೆಯ ವಿರೋಧದ ನಡುವೆಯೂ ಪ್ರಭು ಅವರನ್ನು ಸಂಪುಟ ಸಚಿವರನ್ನಾಗಿ ನೇಮಕ ಮಾಡಿದ್ದಾರೆ. ಈ ಮೂಲಕ ಅವರು, 'ಸರ್ಕಾರ ನಿಮ್ಮ ಅಪ್ಪನದ್ದಲ್ಲ' ಎಂದು ಉದ್ಧವ್ ಠಾಕ್ರೆಗೆ ಪರೋಕ್ಷ ಸಂದೇಶ ರವಾನಿಸಿದ್ದಾರೆ. ಜತೆಗೆ, 'ನೀವು ಕೆಲಸ ಮಾಡುವ ಸಲುವಾಗಿ ಸರ್ಕಾರವನ್ನು ಸೇರಲು ಬಯಸುತ್ತೀರಾ, ಹಾಗಿದ್ದರೆ ಸ್ವಾಗತ.
ಎಟಿಎಂ ಸಚಿವಾಲಯಕ್ಕಾಗಿ ಮೋದಿ ಮೇಲೆ ಒತ್ತಡ ತರಬಹುದೆಂದು ಯೋಚಿಸಿದ್ದರೆ ಅದನ್ನು ಮರೆತು ಬಿಡಿ' ಎಂಬ ಸಂದೇಶವನ್ನು ಇತರೆ ಮಿತ್ರ ಪಕ್ಷಗಳಿಗೂ ರವಾನಿಸಿದ್ದಾರೆ ಮೋದಿ.
ಇಲ್ಲಿ ನೆನಪಿಸಬೇಕಾದ ಮತ್ತೊಂದು ಸಂಗಿತಿಯೆಂದರೆ, 2009ರ ಯುಪಿಎ ಸರ್ಕಾರದಲ್ಲಿ ಎ.ರಾಜಾ ಅವರನ್ನು ಸೇರಿಸಲು ಮನಮೋಹನ್ ಸಿಂಗ್‌ಗೆ ಇಷ್ಟವಿರಲಿಲ್ಲ. ಆದರೆ ಡಿಎಂಕೆ ಒತ್ತಡಕ್ಕೆ ಸೋನಿಯಾ ಗಾಂಧಿ ಮಣಿಯಬೇಕಾಗಿತ್ತು. ಇದರ ಪ್ರತಿಫಲವಾಗಿ ಎ.ರಾಜಾ ಹಾಗೂ 2ಜಿ ಹಗರಣ ಎರಡೂ ಮನಮೋಹನ್‌ಸಿಂಗ್‌ರನ್ನು ತಲೆತಗ್ಗಿಸುವಂತೆ ಮಾಡಿತು. ಆದರೆ ಅಂದು ಸಿಂಗ್ ಇಟ್ಟ ತಪ್ಪುಹೆಜ್ಜೆಯನ್ನು ಈಗ ಪ್ರಧಾನಿ ಮೋದಿ ಇಡಲಿಲ್ಲ. ಶಿವಸೇನೆಯ ವಿಚಾರದಲ್ಲಿ ಅವರು ದಿಟ್ಟ ನಿರ್ಧಾರವನ್ನೇ ಕೈ ಗೊಂಡಿದ್ದಾರೆ.
3. ಈ ಸಂಪುಟ ವಿಸ್ತರಣೆಗೆ ಶಹಬ್ಬಾಸ್‌ಗಿರಿ ಕೊಡಲು ಮತ್ತೊಂದು ಕಾರಣವೆಂದರೆ, ಮನೋಹರ್ ಪರಿಕ್ಕರ್, ಸುರೇಶ್ ಪ್ರಭು, ರಾಜೀವ್ ಪ್ರತಾಪ್ ರೂಡಿ ಮತ್ತು ಜಯಂತ್ ಸಿನ್ಹಾ.
ಇವರು ಸಾಮಾನ್ಯ ರಾಜಕಾರಣಿಗಳಲ್ಲ. ಬದಲಾಗಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಇರುವವರು. ಪಕ್ಷಕ್ಕೆ ಹಾಗೂ ದೇಶಕ್ಕೆ ಗಣನೀಯ ಕೊಡುಗೆ ನೀಡಬಲ್ಲವರು. ಸಚಿವಾಕಾಂಕ್ಷಿಗಳಿಗೆ ಮೋದಿ ನೀಡಿರುವ ಸಂದೇಶವಿಷ್ಟೆ: ನಿಮ್ಮ ಸಾಮರ್ಥ್ಯ ಏನು ಎಂಬುದನ್ನು ನನಗೆ ತೋರಿಸಿ, ನಾನೂ ನಿಮಗೆ ಕೊಡಬೇಕಾದ್ದನ್ನು ಕೊಡುತ್ತೇನೆ. ಯಾರಿಗೆಲ್ಲ ಹುದ್ದೆ ಸಿಕ್ಕಿಲ್ಲವೋ, ಅವರೆಲ್ಲರೂ ಪಕ್ಷಕ್ಕೆ ಹೇಗೆ ಕೊಡುಗೆ ನೀಡಬಹುದು, ಕ್ಷೇತ್ರವನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದಕ್ಕೆ ಮಾರ್ಗ ಕಂಡುಕೊಳ್ಳಿ.
4. ಈ ವಿಸ್ತರಣೆಯಲ್ಲಿ ರಾಜಕೀಯ ಮಾತ್ರವಲ್ಲ, ಸಾಧನೆಯೂ ಸೇರಿದೆ. ಮೋದಿ ಅವರು ಬಿಹಾರ, ಪಶ್ಚಿಮ ಬಂಗಾಳ, ಉತ್ತರಪ್ರದೇಶದವರನ್ನೂ, ಎರಡು ಕಡೆಗಳಿಂದ ದಲಿತ ಮುಖಗಳನ್ನೂ ಸಂಪುಟಕ್ಕೆ ಸೇರಿಸಿಕೊಂಡಿದ್ದಾರೆ. 2015, 16 ಮತ್ತು 17ರಲ್ಲಿ ಬಿಹಾರ, ಬಂಗಾಳ, ಉ.ಪ್ರದೇಶದಲ್ಲಿ ನಡೆಯಲಿರುವ ಚುನಾವಣೆಯನ್ನೂ ಇಲ್ಲಿ ಗಮನದಲ್ಲಿಡಲಾಗಿದೆ.
ಪಂಜಾಬ್‌ನಿಂದ ದಲಿತ ಮುಖವನ್ನು ಆಯ್ದುಕೊಳ್ಳುವ ಮೂಲಕ 'ನೀವು ದಾರಿಗೆ ಬರದಿದ್ದರೆ ಏಕಾಂಗಿಯಾಗಿ ಹೋಗಲು ನಾವು ಸಿದ್ಧ' ಎಂಬ ಸಂದೇಶವನ್ನು ಅಕಾಲಿಗಳಿಗೆ ರವಾನಿಸಿದ್ದಾರೆ ಮೋದಿ. ಒಟ್ಟಾರೆ ಮೋದಿ ಅವರು ಮೇಲ್ವರ್ಗ, ಮಧ್ಯಮ ವರ್ಗದಾಚೆಗೂ ಬಿಜೆಪಿಯ ನೆಲೆಯನ್ನು ಭದ್ರಪಡಿಸಿಕೊಳ್ಳುತ್ತಿದ್ದಾರೆ. ದೀರ್ಘ ಕಾಲದ ಅಧಿಕಾರವನ್ನು ಎದುರು ನೋಡುತ್ತಿದ್ದಾರೆ.
5. ಸಂಪುಟದಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ಸರ್ಕಾರ ಮತ್ತು ಪಕ್ಷದ ನಿಯಂತ್ರಣ ನನ್ನ ಕೈಯಲ್ಲಿದೆ ಎಂಬುದನ್ನು ಮೋದಿ ತೋರಿಸಿಕೊಟ್ಟಿದ್ದಾರೆ. ಜತೆಗೆ, 'ನನ್ನ ಉದ್ದೇಶಗಳೊಂದಿಗೆ ನೀವೂ ಕೈಜೋಡಿಸಿ, ಇಲ್ಲವೇ ನನ್ನ ಮುಂದೆ ಒಂದು ಕ್ಷಣವೂ ನಿಲ್ಲಬೇಡಿ' ಎಂದು ಮಿತ್ರ ಪಕ್ಷಗಳಿಗೂ ಎಚ್ಚರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


