ದೇಶ

ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಕಂಪನಿಗಳ ಖಾಸಗೀಕರಣಕ್ಕೆ ಸಿದ್ಧ: ಜೇಟ್ಲಿ

ದೇಶದ ಮೇಲೆ ಜಾಗತಿಕ ಪ್ರಭಾವ ಹೆಚ್ಚುತ್ತಿರುವುದು ಮತ್ತು ಜನಸಂಖ್ಯೆಗೆ ಅನುಗುಣವಾಗಿ ಸಮಾನ ಅಭಿವೃದ್ದಿ ಸಾಧಿಸುವ ಕುರಿತು...

ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಕಂಪನಿಗಳ ಖಾಸಗೀಕರಣಕ್ಕೆ ಸಿದ್ಧ: ಜೇಟ್ಲಿ
Published On :

ನವದೆಹಲಿ: ನಷ್ಟವನ್ನು ಸರಿದೂಗಿಸುವ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದಲ್ಲಿರುವ ಕೆಲ ಖಾಸಗಿ ವಲಯದ ಕಂಪನಿಗಳನ್ನು ಖಾಸಗೀಕರಣ ಮಾಡಲು ಸರ್ಕಾರ ಮುಕ್ತ ಅವಕಾಶ ಹೊಂದಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಕಳೆದ ಕೆಲ ವರ್ಷಗಳಿಂದ ನಿಶ್ಚಲತೆ ಕಂಡಿರುವ ಭಾರತೀಯ ಆರ್ಥಿಕತೆಯನ್ನು ಸುಧಾರಿಸಲು, ಕೆಲ ಅಭಿವೃದ್ದಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಅರುಣ್ ಜೇಟ್ಲಿ ತಿಳಿಸಿದ್ದಾರೆ.

ಕಳೆದ ಸರ್ಕಾರದ ಆರ್ಥಿಕ ಸಾಧನೆಗಳು ಅತೃಪ್ತಿದಾಯಕವಾಗಿದ್ದು, ಈಗ ಆರ್ಥಿಕ ಅಭಿವೃದ್ದಿಗೆ ಹಿಂದಿನ ಸರ್ಕಾರದ ಕೆಲ ಅಂಶಗಳು ಅಡ್ಡಿಯುಂಟು ಮಾಡುತ್ತಿವೆ. ಆದರೂ ಯಾವುದೇ ಆತಂಕ ಪಡುವ ಅವಶ್ಯಕತೆಯಿಲ್ಲ ಎಂದು ಜೇಟ್ಲಿ ತಿಳಿಸಿದ್ದಾರೆ.

ನವದೆಹಲಿಯಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಆರ್ಥಿಕ ವ್ಯವಸ್ಥೆ ಕ್ಷೀಣಿಸಿದೆ. ಆದರೆ ವಿಶ್ವಮಟ್ಟದಲ್ಲಿ ಭಾರತ ಹೂಡಿಕೆ ಸ್ಥಾನದಲ್ಲಿ ಮತ್ತೆ ಮೇಲುಗೈ ಸಾಧಿಸಲಿದೆ ಎಂದು ವಿಶ್ವಾಸ ವ್ಯ.ಕ್ತಪಡಿಸಿದರು.

ಅಲ್ಲದೇ ವಿದೇಶಿಗರು ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವ ಕುರಿತು ಪರಾಮರ್ಶೆ ಮಾಡತೊಡಗಿದ್ದಾರೆ. ತೆರಿಗೆ ನೀತಿಯಲ್ಲಿನ ಕೆಲ ಅಂಶಗಳು ಅಭಿವೃದ್ದಿಗೆ ಮಾರಕವಾಗಿದ್ದು, ಈ ನಿಟ್ಟಿನಲ್ಲಿ ದೇಶದ ತೆರಿಗೆ ನೀತಿಯಲ್ಲಿ ಕೆಲವು ಬದಲಾವಣೆ ತರುವ ಅವಶ್ಯಕತೆಯಿದೆ ಎಂದು ವಿವರಿಸಿದರು.

ದೇಶದ ಮೇಲೆ ಜಾಗತಿಕ ಪ್ರಭಾವ ಹೆಚ್ಚುತ್ತಿರುವುದು ಮತ್ತು ಜನಸಂಖ್ಯೆಗೆ ಅನುಗುಣವಾಗಿ ಸಮಾನ ಅಭಿವೃದ್ದಿ ಸಾಧಿಸುವ ಕುರಿತು ವಿಶ್ವ ಆರ್ಥಿಕ ವೇದಿಕೆಯಲ್ಲಿ ಅರುಣ್ ಜೇಟ್ಲಿ ತಮ್ಮ ಚಿಂತನೆಯನ್ನು ಹಂಚಿಕೊಂಡರು.

ನಿನ್ನೆ ನವದೆಹಲಿಯಲ್ಲಿ ವಿಶ್ವ ಆರ್ಥಿಕ ವೇದಿಕೆಯ ಸಹಯೋಗದಲ್ಲಿ ಆರಂಭಗೊಂಡಿರುವ ಮೂರು ದಿನಗಳ ಭಾರತ ಆರ್ಥಿಕ ವೇದಿಕೆಯಲ್ಲಿ 45ಕ್ಕೂ ಹೆಚ್ಚು ದೇಶಗಳು ಪಾಲ್ಗೊಂಡಿವೆ. ಉದ್ಯಮಿಗಳು, ಹೂಡಿಕೆದಾರರು, ಸರ್ಕಾರಿ ಅಧಿಕಾರಿಗಳು ಸೇರಿದಂತೆ 700ಕ್ಕೂ ಅಧಿಕ ಮಂದಿ ನಾಯಕರು ಸಮಿತಿಯಲ್ಲಿ ಉಪಸ್ಥಿತರಿದ್ದರು.

ಸಾರ್ವಜನಿಕ, ಖಾಸಗಿ ಸಹಕಾರ ಕ್ಷೇತ್ರದಲ್ಲಿ ಹೊಸ ಮುನ್ನುಡಿ ಎಂಬ ಧ್ಯೇಯ ವಾಕ್ಯದೊಂದಿಗೆ ಆರಂಭವಾಗಿರುವ ಈ ಸಮಿತಿಯು ಆರ್ಥಿಕ ಬೆಳವಣಿಗೆ ಪ್ರಗತಿ ಸಾಧಿಸುವುದು ಮತ್ತು ಭಾರತದಲ್ಲಿನ ಬಡತನ ನಿವಾರಿಸುವ, ಅಸಮಾನತೆಯನ್ನು ತೊಲಗಿಸುವ ಉದ್ದೇಶವನ್ನು ಹೊಂದಿದೆ.  

ಪ್ರತಿಷ್ಠಿತ ವಿದೇಶಿ ಕಂಪನಿಗಳ ಉದ್ಯಮಿಗಳು ಮಾತ್ರವಲ್ಲದೆ ಭಾರತದ ಟಾಪ್ ರಾಂಕಿಂಗ್ ಪಟ್ಟಿಯಲ್ಲಿನ ಮಹೀಂದ್ರ ಅಂಡ್ ಮಹೀಂದ್ರ ಕಂಪನಿಯ ಸಿಎಂಡಿ ಆನಂದ್ ಮಹೀಂದ್ರ, ಮೈಕ್ರೋ ಸಾಫ್ಟ್ ಕಾರ್ಪೋರೇಷನ್ ಇಂಡಿಯಾದ ಅಧ್ಯಕ್ಷ ಭಾಸ್ಕರ್ ಪ್ರಮಾಣಿಕ್, ಭಾರ್ತಿ ಎಂಟರ್‌ಪ್ರೈಸಸ್‌ನ ಸ್ಥಾಪಕ ಮತ್ತು ಅಧ್ಯಕ್ಷ ಭಾರ್ತಿ ಮಿಠ್ಠಲ್, ಗೋದ್ರೇಜ್ ಗ್ರೂಪ್‌ನ ಅಧ್ಯಕ್ಷ ಆದಿ ಗೋದ್ರೇಜ್, ಹಿಂದೂಸ್ಥಾನ್ ಯುನಿಲಿವರ್ ನ ವ್ಯವಸ್ಥಾಪಕ ನಿರ್ದೇಶಕ ಸಂಜೀವ್ ಮೆಹ್ತಾ, ಕೋಟಕ್ ಮಹೀಂದ್ರ ಬ್ಯಾಂಕ್‌ನ ಉಪಾಧ್ಯಕ್ಷ ಉದಯ್ ಕೋಟಕ್, ಮೇಕ್ ಮೈ ಟ್ರಿಪ್ ಸಂಸ್ಥೆಯ ಸ್ಥಾಪಕ ದೀಪ್ ಕರ್ಲಾ ಸೇರಿದಂತೆ ಹಲವಾರು ಉದ್ಯಮಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.