ರಜನಿಯ ಲಿಂಗಾ ಚಿತ್ರ ನೋಡಿ ಸತ್ತ ಅಭಿಮಾನಿ
ಸೂಪರ್ ಸ್ಟಾರ್ ರಜನಿಕಾಂತ್ ಅವರ ಲಿಂಗಾ ಚಿತ್ರ ವೀಕ್ಷಣೆ ಸಂದರ್ಭದಲ್ಲೇ...

ಕೊಯಿಮತ್ತೂರು: ಸೂಪರ್ ಸ್ಟಾರ್ ರಜನಿಕಾಂತ್ ಅವರ ಲಿಂಗಾ ಚಿತ್ರ ವೀಕ್ಷಣೆ ಸಂದರ್ಭದಲ್ಲೇ ಕ್ಯಾನ್ಸರ್ ಪೀಡಿತ ರಜನಿಕಾಂತ್ ಅಭಿಮಾನಿಯೊಬ್ಬ ಮೃತಪಟ್ಟಿರುವ ಘಟನೆ ಚೆಟ್ಟಿಪಾಳ್ಯಂನ ಪೆರೂರಿನಲ್ಲಿ ನಡೆದಿದೆ.
ಸಿ.ರಾಜೇಂದ್ರನ್ (58) ಅವರಿಗೆ ಮೂರು ತಿಂಗಳ ಹಿಂದಷ್ಟೇ ಕಿಡ್ನಿಯಲ್ಲಿ ಕ್ಯಾನ್ಸರ್ ಇರುವುದಾಗಿ ವೈದ್ಯರು ಖಚಿತ ಪಡಿಸಿದ್ದರು. ಅಲ್ಲದೆ, ರೋಗವು ಕೊನೆಯ ಹಂತದಲ್ಲಿದ್ದು ಎಲ್ಲಿಯೂ ಹೋಗದೆ ಮನೆಯಲ್ಲೇ ಇರುವಂತೆ ಸಲಹೆ ನೀಡಿದ್ದರು. ಆದರೆ ರಜನಿಕಾಂತ್ ಅವರ ಅಪ್ಪಟ ಅಭಿಮಾನಿಯಾಗಿರುವ ರಾಜೇಂದ್ರನ್ ಲಿಂಗಾ ಚಿತ್ರವನ್ನು ನೋಡಲೇಬೇಕು ಎಂದು ಮನೆಯಲ್ಲಿ ಬೇಡಿಕೆ ಇಟ್ಟಿದ್ದರು. ಆದರೆ ರಾಜೇಂದ್ರನ್ ಅವರ ಆರೋಗ್ಯದ ದೃಷ್ಟಿಯಿಂದ ಮನೆಯವರು ಈ ಬೇಡಿಕೆಯನ್ನು ಖಡಾಖಂಡಿತವಾಗಿ ತಿರಸ್ಕರಿಸಿದ್ದರು.
ಮನೆಯವರ ತಿರಸ್ಕಾರದ ನಡುವೆಯೂ ಗುರುವಾರ ರಾತ್ರಿ ಮನೆಯವರಿಗೆ ಕಾಣದಂತೆ ಹೊರಬಂದ ರಾಜೇಂದ್ರನ್ ಕೊಯಿಮತ್ತೂರಿನ ಶಾಂತಿ ಚಿತ್ರಮಂದಿರಕ್ಕೆ ಹೋಗಿದ್ದಾರೆ. ರಾತ್ರಿ 9.45ಕ್ಕೆ ಲಿಂಗಾ ಚಿತ್ರದ ಶೋ ಇದ್ದುದರಿಂದ ಟಿಕೆಟ್ ತೆಗೆದುಕೊಂಡು ಚಿತ್ರ ನೋಡಲು ಕುಳಿತಿದ್ದಾರೆ. ರಾತ್ರಿ 12.55 ಚಿತ್ರ ಮುಗಿದಿದೆ. ಬೆಳಿಗ್ಗೆ 1.25 ಸುಮಾರಿಗೆ ಚಿತ್ರಮಂದಿರ ಸ್ವಚ್ಛಗೊಳಿಸಲೆಂದು ಬಂದವರು ಕುರ್ಚಿಯಲ್ಲಿ ಕುಳಿತಿದ್ದ ರಾಜೇಂದ್ರನ್ ಅವರನ್ನು ನೋಡಿ ನಿದ್ರೆ ಹೋಗುತ್ತಿರಬಹುದು ಎಂದು ತಿಳಿದು ಎದ್ದೇಳಿಸಲು ಪ್ರಯತ್ನಿಸಿದ್ದಾರೆ. ಎಷ್ಟು ಹೇಳಿದರೂ ರಾಜೇಂದ್ರನ್ ಏಳಲೇ ಇಲ್ಲ. ನಂತರ ಚಿತ್ರಮಂದಿರದ ನಿರ್ವಾಹಕರನ್ನು ಕರೆತಂದಿದ್ದಾರೆ.
ರಾಜೇಂದ್ರನ್ ಅವರನ್ನು ಕಂಡ ಚಿತ್ರಮಂದಿರದ ನಿರ್ವಾಹಕ ಸ್ಥಳೀಯ ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ರಾಜೇಂದ್ರನ್ ಅವರನ್ನು ಪರೀಕ್ಷಿಸಿದ ನಂತರ ಅವರ ಮೃತ ದೇಹವನ್ನು ಶವ ಪರೀಕ್ಷೆಗೆಂದು ಕೊಯಿಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ವೇಳೆ ರಾಜೇಂದ್ರನ್ ಅವರ ಜೇಬಲ್ಲಿದ್ದ ಫೋಟೋ ಹಾಗೂ ಮಗನ ಮೊಬೈಲ್ ನಂಬರ್ ನೋಡಿದ ಪೊಲೀಸರು ರಾಜೇಂದ್ರನ್ ಅವರ ಮನೆಗೆ ಕರೆ ಮಾಡಿ ಸುದ್ದಿ ತಿಳಿಸಿದ್ದಾರೆ.
ರಾಜೇಂದ್ರನ್ ಅವರು ರಜನಿ ಅವರ ಹುಟ್ಟು ಅಭಿಮಾನಿಯಾಗಿದ್ದು, ಈವರೆಗೂ ರಜನಿಕಾಂತ್ ಅವರು ತಮ್ಮ ಜೀವಮಾನದಲ್ಲಿ ಅಭಿನಯಿಸಿರುವ ಎಲ್ಲಾ ಚಿತ್ರವನ್ನು ಬಿಡದೇ ನೋಡಿದ್ದು, ಈಗ ಲಿಂಗಾ ಚಿತ್ರವನ್ನು ನೋಡಲು ಹೋಗಿ ಈ ಅನಾಹುತ ಸಂಭವಿಸಿದೆ ಎಂದು ರಾಜೇಂದ್ರನ್ ಅವರ ಕುಟುಂಬಸ್ಥರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


