ಸಚಿವೆ ಸಾಧ್ವಿ ಹೇಳಿಕೆ ಅಸಂಬದ್ಧ, ಇನ್ನು ಮುಂದೆ ಈ ರೀತಿ ನಡೆಯಲ್ಲ: ಮೋದಿ
ಕೇಂದ್ರ ಆಹಾರ ಸಂಸ್ಕರಣೆ ಖಾತೆ ಸಹಾಯಕ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಅವರ ಹೇಳಿಕೆ ಅಸಂಬದ್ಧ...

ನವದೆಹಲಿ: ಕೇಂದ್ರ ಆಹಾರ ಸಂಸ್ಕರಣೆ ಖಾತೆ ಸಹಾಯಕ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಅವರ ಹೇಳಿಕೆ ಅಸಂಬದ್ಧವಾದದ್ದು, ಸಾಧ್ವಿ ಅವರು ಇದೇ ಮೊದಲ ಬಾರಿಗೆ ಸಂಸದರಾಗಿರುವುದರಿಂದ ಇಂತಹ ಹೇಳಿಕೆಗಳನ್ನು ನೀಡಿದ್ದಾರೆ ಇನ್ನು ಮುಂದೆ ಈ ರೀತಿ ನಡೆಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಾಧ್ವಿ ನಿರಂಜನ್ ಜ್ಯೋತಿ ಅವರ ವಿವಾದಾತ್ಮಕ ಹೇಳಿಕೆ ಇಂದು ರಾಜ್ಯಸಭೆಯಲ್ಲಿ ಮಾರ್ದನಿಸಿತು. ವಿರೋಧ ಪಕ್ಷದ ಸಂಸದರು ವಿವಾದಾತ್ಮಕ ಹೇಳಿಕೆ ಕುರಿತಂತೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ ಅವರು, ಸಚಿವೆ ಸಾಧ್ವಿ ಅವರ ಹೇಳಿಕೆ ಅಸಂಬದ್ಧವಾದದ್ದು, ಈ ಹೇಳಿಕೆ ಹೊರಬರುತ್ತಿದ್ದಂತೆ ನಾನು ಅಸಮಧಾನ ವ್ಯಕ್ತಪಡಿಸಿದ್ದೆ. ಸಚಿವೆ ಮೊದಲ ಬಾರಿಗೆ ಸಂಸದರಾಗಿರವುದರಿಂದ ಆವೇಶದಲ್ಲಿ ಈ ರೀತಿ ಮಾತನಾಡಿದ್ದಾರೆ ಇನ್ನು ಮುಂದೆ ಈ ರೀತಿಯ ಆಗದಂತೆ ನೋಡಿಕೊಳ್ಳುತ್ತೇನೆ ಎಂದರು.
ಇನ್ನು ಸಾಧ್ವಿ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ವಿರೋಧ ಪಕ್ಷದ ಸಂಸದರು ಒಕ್ಕೋರಳಿನಿಂದ ಒತ್ತಾಯಿಸಿದ್ದರಿಂದ ಮೋದಿ ಅವರು, ಯಾರ ಮರ್ಯಾದೆಯನ್ನು ಕಳೆಯಲು ನಾವು ಇಚ್ಛಿಸುವುದಿಲ್ಲ. ತಮ್ಮ ತಪ್ಪಿಗಾಗಿ ಸಾಧ್ವಿ ಅವರು ಈಗಾಗಲೇ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಕ್ಷಮೆಯಾಚಿಸಿದ್ದಾರೆ. ಹೀಗಾಗಿ ಸಂಸತ್ ಕಲಾಪಗಳನ್ನು ಸುಗಮವಾಗಿ ನಡೆಯಲು ಸಹಕರಿಸುವಂತೆ ವಿರೋಧ ಪಕ್ಷದ ಸಂಸದರಲ್ಲಿ ಮನವಿ ಮಾಡಿದರು.
ಸಾಧ್ವಿ ಅವರ ವಿವಾದಾತ್ಮಕ ಹೇಳಿಕೆ ಪರಿಣಾಮ ಎಲ್ಲರಿಗೂ ಒಂದು ಸಂದೇಶ ಸಿಕ್ಕಿಂತಾಗಿದೆ. ಹೀಗಾಗಿ ಸಂಸದರು ಯೋಚಿಸಿ ಮಾತನಾಡುವುದು ಎಲ್ಲರಿಗೂ ಒಳ್ಳೆಯದ್ದು, ಮಾತನಾಡಿ ಯೋಚಿಸುವುದಕ್ಕಿಂತ ಯೋಚಿಸಿ ಮಾತನಾಡುವುದು ಸೂಕ್ತ ಎಂದು ಬಿಜೆಪಿ ನೇತೃತ್ವದ ಎನ್‌ಡಿಎ ಸಂಸದರಿಗೆ ಮೋದಿ ಎಚ್ಚರಿಕೆ ನೀಡಿದರು.
ಸಂಪುಟದಿಂದ ಸಾಧ್ವಿರನ್ನು ಕೈಬಿಡದಿದ್ದರೆ ಉಗ್ರ ಹೋರಾಟ
ಕೇಂದ್ರ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ಸಂಸದರು ರಾಜ್ಯಸಭೆಯಲ್ಲಿ ಕೋಲಾಹಲ ಎಬ್ಬಿಸಿದರು. ಸಂಪುಟದಿಂದ ಸಾಧ್ವಿ ಅವರನ್ನು ಕೈಬಿಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಸಚಿವೆ ಬಾಯಿ ತಪ್ಪಿ ಹೇಳಿಕೆ ನೀಡಿಲ್ಲ: ಆನಂದ್ ಶರ್ಮಾ
ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು ಬಾಯಿ ತಪ್ಪಿ ಹೇಳಿಕೆ ನೀಡಿಲ್ಲ, ಸಾಮಾನ್ಯ ಪರಿಜ್ಞಾನದಿಂದಲೇ ಮಾತನಾಡಿದ್ದಾರೆ ಎಂದು ರಾಜ್ಯಸಭೆ ಕಾಂಗ್ರೆಸ್ ಸಂಸದ ಆನಂದ್ ಶರ್ಮಾ ಅವರು ಆರೋಪಿಸಿದ್ದಾರೆ.
ಸಂವಿಧಾನದ ವಿರುದ್ಧ ಮಾತನಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಭಾರತದ ಸಂವಿಧಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗೌರವ ನೀಡಲಿ ಎಂದು ಆಗ್ರಹಿಸಿದರು.
ಸೋಮವಾರ ದೆಹಲಿಯಲ್ಲಿ ಪ್ರಚಾರ ಮಾಡುತ್ತಿದ್ದ ವೇಳೆ ಸಾಧ್ವಿ ನಿರಂಜನ್ ಜ್ಯೋತಿ ಅವರು ಕಾರ್ಯಕರ್ತರ ಸಮ್ಮುಖದಲ್ಲಿ ಆವೇಶದ ಭರದಲ್ಲಿ ರಾಮನ ಮಕ್ಕಳ್ಯಾರು ಜಾರಿಣಿಯ ಮಕ್ಕಳು ಯಾರು ಎಂದು ಯೋಚಿಸಿ ಮತ ನೀಡಿ ಎಂದು ಹೇಳಿದ್ದರು. ಈ ಹೇಳಿಕೆ ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


