ದೇಶ

ಸಂಸತ್‌ನಲ್ಲಿ ಉಗ್ರರ ಜೊತೆ ಕುಳಿತಿದ್ದೀರಾ?

ಸಂಸತ್‌ನಲ್ಲಿ ಉಗ್ರರ ಜೊತೆ ಕುಳಿತಿದ್ದೀರಾ?
Published On :

ನವದೆಹಲಿ: ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ 'ಉಗ್ರ' ಹೇಳಿಕೆ ವಿರುದ್ಧ ದೇಶಾದ್ಯಂತ ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರತಿಭಟನೆ ನಡೆಸಿವೆ.
ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಮತ್ತು ಆರ್‌ಎಸ್‌ಎಸ್ ಉಗ್ರ ತರಬೇತಿ ಶಾಲೆ ನಡೆಸುತ್ತಿವೆ ಎಂಬುದಾದರೆ, ನೀವು ಉಗ್ರರ ಜೊತೆ ವ್ಯವಹರಿಸುತ್ತಿದ್ದೀರಾ? ಸಂಸತ್‌ನಲ್ಲಿ ಉಗ್ರರ ಜೊತೆ ಕುಳಿತಿದ್ದೀರಾ ಎಂದು ಲೋಕಸಭಾ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಪ್ರಶ್ನಿಸಿದ್ದಾರೆ.
ಶಿಂಧೆ ಅವರ ಹೇಳಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಹೇಳಿಕೆ ಕೊಡುವ ಮುನ್ನ ಯೋಚಿಸಬೇಕು ಎಂದಿದ್ದಾರೆ. ಪಾಕಿಸ್ತಾನ ಪ್ರಾಯೋಜಿತ ಉಗ್ರವಾದದ ಬಗ್ಗೆ ಚಿಂತಿಸುವುದನ್ನು ಬಿಟ್ಟು ಪ್ರತಿಪಕ್ಷ ಬಿಜೆಪಿ ಭಯೋತ್ಪಾದನೆ ನಡೆಸುತ್ತಿದೆ ಎಂದು ಹೇಳುತ್ತೀರಾ, ಇದು ಸರಿಯೇ ಎಂದಿದ್ದಾರೆ. ಅಲ್ಲದೆ ಶಿಂಧೆ ಅವರ ಹೇಳಿಕೆಯಿಂದಾಗಿ ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಹಿನ್ನಡೆಯಾದಂತಾಗುತ್ತದೆ ಎಂದು ಬಿಜೆಪಿ ನಾಯಕ ಶಹನವಾಜ್ ಹುಸೇನ್ ಹೇಳಿದ್ದಾರೆ.
ಕಾಂಗ್ರೆಸ್ ವಾಗ್ದಾಳಿ, ಶಿಂಧೆ ಸಮರ್ಥನೆ: ಇದೇ ವೇಳೆ ಕಾಂಗ್ರೆಸ್ ಬಿಜೆಪಿ ಪ್ರತಿಭಟನೆ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಕ್ಷದೊಳಗಿನ ಆಂತರಿಕ ತಿಕ್ಕಾಟವನ್ನು ಬೇರೆಡೆಗೆ ಸೆಳೆಯಲು ಈ ಪ್ರತಿಭಟನೆ ನಡೆಸಿದ್ದಾರೆ ಎಂದು ಹೇಳಿದೆ.
ಶಿಂಧೆ ಹೇಳಿಕೆಗೆ ಮಾಯಾ ಆಕ್ಷೇಪ: ಸಚಿವ ಶಿಂಧೆ ಹೇಳಿಕೆಯಿಂದಾಗಿ ದೇಶದಲ್ಲಿನ ಭಾರಿ ಪ್ರಮಾಣದ ಹಿಂದೂಗಳಿಗೆ ಕೋಪ ತರಬಹುದು, ಹೋರಾಟಗಳು ಹೆಚ್ಚಬಹುದು. ಹೀಗಾಗಿ ಹೇಳಿಕೆ ಕೊಡುವ ಮುನ್ನ ಜಾಗರೂಕರಾಗಿರಬೇಕು ಎಂದಿದ್ದಾರೆ.
ಬಿಜೆಪಿ ಉಗ್ರ ತರಬೇತಿ ಮೇಲೆ ದಾಳಿ: ಪಾಕಿಸ್ತಾನದಲ್ಲಿರುವ ತಾಲಿಬಾನ್ ಉಗ್ರರು ಶಿಂಧೆ ಹೇಳಿಕೆಯನ್ನು ಬೆಂಬಲಿಸಿದ್ದು, ಬಿಜೆಪಿ ಪ್ರಾಯೋಜಿತ ಉಗ್ರ ನೆಲೆಗಳ ಮೇಲೆ ಡ್ರೋನ್ ದಾಳಿ ನಡೆಸುವಂತೆ ವಿಶ್ವಸಂಸ್ಥೆ ಮತ್ತು ಅಮೆರಿಕಕ್ಕೆ ಒತ್ತಾಯಿಸಿದ್ದಾರೆ. ನಿಮಗೆ ಮಾಡಲಾಗದಿದ್ದರೆ ಹೇಳಿ, ನಾವೇ ದಾಳಿ ಮಾಡುತ್ತೇವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.