ದೇಶ

ತವರು ಮನೆ ಸೇರಿದ ಪತ್ನಿ: ಮಗು ನಿಭಾಯಿಸಲು ಕಷ್ಟಪಡುತ್ತಿದ್ದ ತಂದೆ; ಮಾಡಿದ್ದು ಘನ ಘೋರ ಕೃತ್ಯ!

ಮಗು ಮೃತಪಟ್ಟ ನಂತರ ಸ್ಥಳೀಯ ಸ್ಮಶಾನವೊಂದರಲ್ಲಿ ಮೃತದೇಹವನ್ನು ಯಾರಿಗೂ ಗೊತ್ತಾಗದಂತೆ ಹೂತುಹಾಕುವ ಮೂಲಕ ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಿದ್ದಾನೆ.

ತವರು ಮನೆ ಸೇರಿದ ಪತ್ನಿ: ಮಗು ನಿಭಾಯಿಸಲು ಕಷ್ಟಪಡುತ್ತಿದ್ದ ತಂದೆ; ಮಾಡಿದ್ದು ಘನ ಘೋರ ಕೃತ್ಯ!
ಪಾಪಿ ತಂದೆ
Published On :

ವಾವ್-ಥಾರಾದ್: ಪತ್ನಿ ತವರು ಮನೆ ಸೇರಿದ್ದರಿಂದ ಮಗು ನೋಡಿಕೊಳ್ಳಲು ಕಷ್ಟಪಡುತ್ತಿದ್ದ ತಂದೆಯೊಬ್ಬ ಘನ ಘೋರ ಕೃತ್ಯವೆಸಗಿದ್ದಾರೆ. ತನ್ನ ಎರಡೂವರೆ ವರ್ಷದ ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಗುಜರಾತ್‌ನ ವಾವ್-ಥಾರಾದ್ ಪ್ರದೇಶದ ಸುಯಿಗಮ್‌ನಲ್ಲಿ ಈ ಘಟನೆ ನಡೆದಿದೆ.

ಮಗು ಮೃತಪಟ್ಟ ನಂತರ ಸ್ಥಳೀಯ ಸ್ಮಶಾನವೊಂದರಲ್ಲಿ ಮೃತದೇಹವನ್ನು ಯಾರಿಗೂ ಗೊತ್ತಾಗದಂತೆ ಹೂತುಹಾಕುವ ಮೂಲಕ ಸಾಕ್ಷ್ಯ ನಾಶಪಡಿಸಲು ಪ್ರಯತ್ನಿಸಿದ್ದಾನೆ. ಈಗ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಕೊಲೆ ಮತ್ತು ಸಾಕ್ಷ್ಯ ನಾಶಪಡಿಸಿದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಇದೇ ವೇಳೆ, ಮಗು ಸಾವನ್ನಪ್ಪುವ ಮುನ್ನ ತೀವ್ರವಾಗಿ ಸುಟ್ಟ ಗಾಯಗಳೊಂದಿಗೆ ಮಂಚದ ಮೇಲೆ ಕುಳಿತಿರುವ ಹೃದಯವಿದ್ರಾವಕ ವಿಡಿಯೋವೊಂದು ಬೆಳಕಿಗೆ ಬಂದಿದೆ.

ಅಶೋಕ್ ರಾವಲ್ ಎಂದು ಗುರುತಿಸಲಾದ ಆರೋಪಿಯು, ತನ್ನ ಪತ್ನಿ ತವರು ಮನೆಗೆ ತೆರಳಿದ ನಂತರ ತನ್ನ ಪುಟ್ಟ ಮಗ ನವ್‌ಘನ್‌ನನ್ನು ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ. ಪತ್ನಿ ಇಲ್ಲದೆ ಮಗನನ್ನು ನಿಭಾಯಿಸಲು ಕಷ್ಟಪಟ್ಟ ತಂದೆ, ಅಸಹಾಯಕ ಮಗನನ್ನು ಹೊರೆ ಎಂದು ಪರಿಗಣಿಸಿದ್ದ ಎಂದುಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಅಕ್ಟೋಬರ್ 13 ರ ಮಧ್ಯಾಹ್ನ 1:00 ರಿಂದ 2:00 ಗಂಟೆಯ ನಡುವೆ, ಆರೋಪಿಯು ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬಳಿಕ ಆಸ್ಪತ್ರೆಗೆ ಕರೆದೊಯ್ದರೂ, ಮಗು ತೀವ್ರ ಸುಟ್ಟ ಗಾಯಗಳಿಂದಾಗಿ ಸಾವನ್ನಪ್ಪಿದೆ.

ಅಪರಾಧವನ್ನು ಮುಚ್ಚಿಹಾಕುವ ಪ್ರಯತ್ನದಲ್ಲಿ, ಮಗು ಮೃತಪಟ್ಟ ಕೆಲವೇ ಹೊತ್ತಿನಲ್ಲಿ ಆರೋಪಿಯು ತನ್ನ ಕುಟುಂಬದ ಕೆಲ ಸದಸ್ಯರೊಂದಿಗೆ ಸೇರಿ ಮೃತದೇಹವನ್ನು ಸಾರ್ವಜನಿಕ ಸ್ಮಶಾನದಲ್ಲಿ ಹೂತುಹಾಕಿದ್ದಾನೆ. ಆರೋಪಿಯ ಚಿಕ್ಕಪ್ಪನಾದ ಬಾಬುಭಾಯಿ ರಾವಲ್ ಅವರಿಗೆ ಈ ದುರಂತ ಘಟನೆಗಳ ಬಗ್ಗೆ ತಿಳಿದುಬಂದಾಗ ಈ ಭೀಕರ ಕೊಲೆ ಬೆಳಕಿಗೆ ಬಂದಿತು.

ತನ್ನ ಸೋದರಳಿಯನ ಕೃತ್ಯವನ್ನು ಕಂಡು ಆಘಾತಗೊಂಡ ಬಾಬುಭಾಯಿ, ಸುಯಿಗಾಂ ಪೊಲೀಸ್ ಠಾಣೆಗೆ ತೆರಳಿ ಆತನ ವಿರುದ್ಧ ಅಧಿಕೃತ ದೂರು ದಾಖಲಿಸಿದರು. ಈ ದೂರಿನ ಆಧಾರದ ಮೇಲೆ, ಪೊಲೀಸರು ಸ್ಮಶಾನಕ್ಕೆ ತಂಡವೊಂದನ್ನು ಕಳುಹಿಸಿ, ಮಗುವಿನ ಮೃತದೇಹವನ್ನು ಹೊರತೆಗೆದು, ಕೂಲಂಕಷ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಿಕೊಟ್ಟರು.

ಸಾಕ್ಷ್ಯಗಳನ್ನು ನಾಶಪಡಿಸಿದ ಅಥವಾ ಮರೆಮಾಚಿದ ಆರೋಪದಡಿ, ಭಾರತೀಯ ನ್ಯಾಯ ಸಂಹಿತೆಯ (BNS) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪೊಲೀಸರು ಅಶೋಕ್ ರಾವಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಘೋರ ಅಪರಾಧಕ್ಕೆ ಸಂಬಂಧಿಸಿದ ಸನ್ನಿವೇಶಗಳ ಬಗ್ಗೆ ತನಿಖೆ ನಡೆಯುತ್ತಿದ್ದು, ಆರೋಪಿ ಸದ್ಯ ಪೊಲೀಸ್ ವಶದಲ್ಲಿದ್ದಾನೆ.

ಅತ್ಯಂತ ಹೆಚ್ಚಿನ ಕಾಳಜಿ ಮತ್ತು ರಕ್ಷಣೆಯ ಅಗತ್ಯವಿರುವ ವಯಸ್ಸಿನಲ್ಲಿರುವ ಮಗುವಿನ ಮೇಲೆ, ತಂದೆಯೇ ಹೇಗೆ ಇಂತಹ ಕ್ರೂರ ಕೃತ್ಯ ಮಾಡಲು ಸಾಧ್ಯವಾಯಿತು ಎಂಬುದನ್ನು ತಿಳಿಯದೆ ಸುಯಿಗಾಂ ನಿವಾಸಿಗಳು ಕಂಗಾಲಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.