ರಾಜ್ಯ

ಭಟ್ಕಳ: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಆರೋಪ; ಇಬ್ಬರಿಗೆ ಜಾಮೀನು

ಕಲ್ಲು ತೂರಾಟ ನಡೆಸಿರುವುದಕ್ಕೆ ಇಬ್ಬರ ವಿರುದ್ಧವೂ ಯಾವುದೇ ಸಾಕ್ಷ್ಯವಿಲ್ಲ. ಪ್ರತಿಭಟಿಸುತ್ತಿದ್ದ ಜನರನ್ನು ಸಮಾಧಾನಪಡಿಸುವ ಉದ್ದೇಶದಿಂದ ಪೊಲೀಸರು ಅವರನ್ನು ಬಂಧಿಸಿದ್ದಾರೆಂದು ಹೇಳಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.

ಭಟ್ಕಳ: ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಆರೋಪ; ಇಬ್ಬರಿಗೆ ಜಾಮೀನು
ಕೋರ್ಟ್ — online desk
Published On :

ಭಟ್ಕಳ: ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ಪಡೆದಿದ್ದ ಇಬ್ಬರಿಗೆ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ.

ಜೀವನ್‌ ನಾಗರಾಜ್‌ ನಾಯಕ್‌ ಮತ್ತು ದೇವರಾಜ್‌ ಅಶೋಕ್‌ ನಾಯಕ್‌ ಬಂಧಿತರಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳದ ಜೆಎಂಎಫ್‌ಸಿ ನ್ಯಾಯಾಲಯ ಇಬ್ಬರಿಗೂ ಜಾಮೀನು ಮಂಜೂರು ಮಾಡಿದೆ.

ಆರೋಪಿಗಳ ಪರ ವಕೀಲರಾದ ಸುರೇಶ್‌ ಕೋಣೆಮನೆ ಮತ್ತು ಮಂಗಳಾ ಗೊಂಡ ಅವರು ವಾದ ಮಂಡಿಸಿ, ಕಲ್ಲು ತೂರಾಟ ನಡೆಸಿರುವುದಕ್ಕೆ ಇಬ್ಬರ ವಿರುದ್ಧವೂ ಯಾವುದೇ ಸಾಕ್ಷ್ಯವಿಲ್ಲ. ಪ್ರತಿಭಟಿಸುತ್ತಿದ್ದ ಜನರನ್ನು ಸಮಾಧಾನಪಡಿಸುವ ಉದ್ದೇಶದಿಂದ ಪೊಲೀಸರು ಅವರನ್ನು ಬಂಧಿಸಿದ್ದಾರೆಂದು ಹೇಳಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.

ವಾದ ಆಲಿಸಿದ ನ್ಯಾಯಾಧೀಶೆ ದೀಪಾ ಅರಳಗುಂದಿ ಅವರು, ತನಿಖೆಗೆ ಸಹಕರಿಸುವಂತೆ ಸೂಚಿಸಿ ಇಬ್ಬರನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು.

ಬುಧವಾರ ರಾತ್ರಿ ಪ್ರಾರ್ಥನಾ ಸ್ಥಳದ ಮುಂದೆ ಧಾರ್ಮಿಕ ಮೆರವಣಿಗೆ ಸಾಗುತ್ತಿದ್ದ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದೆ ಎಂದು ಒಂದು ಸಮುದಾಯದ ಸದಸ್ಯರು ಭಟ್ಕಳ ಪೊಲೀಸರಿಗೆ ದೂರು ನೀಡಿದ ಬಳಿಕ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಇದಕ್ಕೆ ಪ್ರತಿಯಾಗಿ ಧಾರ್ಮಿಕ ವೇದಿಕೆಯ ಪದಾಧಿಕಾರಿ ರಾಜು ನಾಯಕ್‌ ನೀಡಿದ ದೂರಿನಲ್ಲಿ, ಮೆರವಣಿಗೆ ಪ್ರಾರ್ಥನಾ ಸ್ಥಳದ ಮುಂದೆ ಸಾಗುತ್ತಿದ್ದ ವೇಳೆ ಕಟ್ಟಡವೊಂದರ ಮೇಲಿನಿಂದ ಕೆಲ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ ಎಂದು ಆರೋಪಿಸಲಾಗಿದೆ.

ಬುಧವಾರ ರಾತ್ರಿ ಸುಮಾರು 9 ಗಂಟೆಗೆ ಸೇತುವೆ ದಾಟಿ ಪ್ರಾರ್ಥನಾ ಸ್ಥಳದ ಸಮೀಪ ಬರುತ್ತಿದ್ದಾಗ ಕೆಲ ಕಿಡಿಗೇಡಿಗಳು ಮೆರವಣಿಗೆ ಮೇಲೆ ಕಲ್ಲು ತೂರಿದರು. ಘಟನೆ ನಡೆದ ಸಂದರ್ಭದಲ್ಲಿ ಕೆಲಕಾಲ ಉದ್ವಿಗ್ನತೆ ಉಂಟಾಯಿತು. ತಾಲೂಕಿನಲ್ಲಿ ಶಾಂತಿ ಕದಡಲು ಬಯಸುವ ಕೆಲ ಕಿಡಿಗೇಡಿಗಳ ಕೃತ್ಯ ಇದಾಗಿದೆ” ಎಂದು ರಾಜು ನಾಯಕ್‌ ನೀಡಿದ ಪ್ರತಿದೂರಿನಲ್ಲಿ ಉಲ್ಲೇಖಿಸಲಾಗಿದೆ.

ಘಟನೆ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಾಜು ನಾಯಕ್‌ ಮನವಿ ಮಾಡಿದ್ದಾರೆ. ಈ ನಡುವೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ಎಂ.ಎನ್‌. ದೀಪನ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.