'ಯುದ್ಧ ಆರಂಭಕ್ಕೆ ವಿಜಯದಶಮಿ ಪ್ರಶಸ್ತ ಕಾಲ, ಮಾಧ್ಯಮದವರಿಗೆ ಒಳ್ಳೆಯ ಆಹಾರ ನೀಡುತ್ತೇನೆ': HD ಕುಮಾರಸ್ವಾಮಿ; Video
ನಾನು ಯಾವುದೇ ದಾಖಲೆ ಇಲ್ಲದೇ ಯಾರ ಬಗ್ಗೆಯೂ ಮಾತನಾಡಲು ಹೋಗುವುದಿಲ್ಲ, ಅಮೆರಿಕಗೆ ಹೋಗುವ ಮುನ್ನ ಏನು ಹೇಳಿಕೆ ನೀಡಿದ್ದೆ, ಅದಕ್ಕೆ ಬದ್ದನಾಗಿದ್ದೇನೆ ಎಂದು ಹೇಳಿದ್ದಾರೆ.

ಹಾಸನ: ಇಡೀ ದೇಶವೇ ಅಲ್ಲೋಲ ಕಲ್ಲೋಲ ಆಗುವ ಸುದ್ದಿ ಕೊಡುತ್ತೇನೆ ಎಂದು ಹೇಳಿ ಅಮೆರಿಕಕ್ಕೆ ಹೋಗಿದ್ದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಪಸ್ ಬಂದಿದ್ದು, ಹಾಸನಕ್ಕೆ ಆಗಮಿಸಿ ತಾಯಿ ಚೆನ್ನಮ್ಮ ಅವರ ಸಮಾಧಿಗೆ ಭೇಟಿ ಕೊಟ್ಟರು. ಅಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ತಾವು ಆಡಿರುವ ಮಾತಿಗೆ ಬದ್ಧವಾಗಿರುವುದಾಗಿ ಪುನರುಚ್ಛರಿಸಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ, ಅವ್ಯವಹಾರದ ಬಗ್ಗೆ ಜನರ ಮುಂದೆ ಇಡುವುದರಲ್ಲಿ ಯಾವುದೇ ರಾಜಿಯಿಲ್ಲ. ರಾಜ್ಯದಲ್ಲಿನ ಘಟನೆ ಬಗ್ಗೆ ಬಾಯಿ ಮುಚ್ಚಿಕೊಂಡಿರಲು ಆಗಲ್ಲ. ಈಗಿರುವ ಸರ್ಕಾರದ ಮಂತ್ರಿಗಳ ಅಡಿಯೇ ಕೆಪಿಎಸ್ಸಿ, ಎಇಇ ಹಗರಣಗಳು ನಡೆದಿವೆ. ಲಕ್ಷಾಂತರ ಯುವಕರ ಭಾವನೆಗಳನ್ನು ಮಾರಾಟಕ್ಕಿಟ್ಟು ವಸೂಲಿ ಮಾಡಲಾಗಿದೆ. ಇದ್ಯಾವುದನ್ನೂ ನಾನು ಹೇಳುತ್ತಿಲ್ಲ. ದಾಖಲೆಗಳು ಹೇಳುತ್ತಿವೆ. ಅಕ್ರಮಗಳನ್ನ ಜನರ ಮುಂದಿಡುವುದು ನನ್ನ ಜವಾಬ್ದಾರಿ. ತೀರ್ಮಾನ ಜನರದ್ದು ಎಂದು ಹೇಳಿದ್ದಾರೆ.
ನಾನು ಯಾವುದೇ ದಾಖಲೆ ಇಲ್ಲದೇ ಯಾರ ಬಗ್ಗೆಯೂ ಮಾತನಾಡಲು ಹೋಗುವುದಿಲ್ಲ, ಅಮೆರಿಕಗೆ ಹೋಗುವ ಮುನ್ನ ಏನು ಹೇಳಿಕೆ ನೀಡಿದ್ದೆ, ಅದಕ್ಕೆ ಬದ್ದನಾಗಿದ್ದೇನೆ ಎಂದು ಹೇಳಿದ್ದಾರೆ. ನಾನು ಅಮೆರಿಕಗೆ ಹೋಗಿದ್ದಂತಹ ಸಂದರ್ಭದಲ್ಲಿ ನೈಸ್ ಸಂಸ್ಥೆಯ ಗುತ್ತಿಗೆದಾರಾರೊಬ್ಬರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ ಫೋಟೋಗಳನ್ನು ನಾನು ಗಮನಿಸಿದ್ದೇನೆ.
ನನ್ನ ಹೇಳಿಕೆ ಬಗ್ಗೆ ಎಲ್ಲರೂ ತಲೆಕೆಡಿಸಿಕೊಂಡಿದ್ದಾರೆ, ಯಾವಾಗ ಬರ್ತಾನೆ? ನನ್ನದು ಏನಿರಬಹುದು ಎಂದು ರಾತ್ರಿ ನಿದ್ರೆ ಎಲ್ಲೂ ಕೂಡ ಕನವರಿಸಿದ್ದಾರೆ. ನಾನು ಮಾಧ್ಯಮ ಸ್ನೇಹಿತರಿಗೆ ನಿರಾಸೆ ಮಾಡೋದಿಲ್ಲ. ನಿಮಗೆ ಒಳ್ಳೆಯ ರೀತಿ ಆಹಾರವನ್ನ ಕೊಡುತ್ತೇನೆ. ವಿಜಯದಶಮಿ, ಅದು ಯುದ್ಧಕ್ಕೆ ಒಳ್ಳೆ ಕಾಲ ಆದ್ದರಿಂದ ಪ್ರಾರಂಭ ಮಾಡುತ್ತೇನೆ ಎಂದಿದ್ದಾರೆ.
ನನ್ನ ಬಳಿ ಇರುವ ಪೆನ್’ಡ್ರೈವ್ ಬೇರೆ
ಡಿ ಕೆ ಶಿವಕುಮಾರ್ ತೋರಿಸಿರುವ ಪೆನ್"ಡ್ರೈವ್ ಬೇರೆ, ನನ್ನ ಬಳಿ ಇರುವ ದಾಖಲೆ ಬೇರೆ. ನಾನು ಖಾಲಿ ಪೆನ್’ಡ್ರೈವ್ ತೋರಿಸಿಕೊಂಡು ಸುತ್ತಾಡುತ್ತಿಲ್ಲ. ಹಾಗೆಯೇ ಚುನಾವಣೆಯ ವೇಳೆ ಒಂದು ಲಕ್ಷ ಪೆನ್’ಡ್ರೈವ್ ಹಂಚಿದ್ದಾರಲ್ವಾ, ನಾನು ಆ ರೀತಿ ಮಾಡಲು ಹೋಗುವುದಿಲ್ಲ. ಸಮಯ ಸಂದರ್ಭ ನೋಡಿ, ಕಾಂಗ್ರೆಸ್ಸಿನ ಅಕ್ರಮ ಕೆಲಸವನ್ನು ಬಹಿರಂಗಪಡಿಸಿ ಎಂದು ನನ್ನ ಕೆಲವು ಸ್ನೇಹಿತರು ನನಗೆ ಕೊಟ್ಟಿರುತ್ತಾರೆ ಎಂದರು.
ಅಲ್ಲೋಕ ಕಲ್ಲೋಲ ಆಗುವ ವಿಷಯ ಸದ್ಯದಲ್ಲೇ ಬರಲಿದೆ
ಅಲ್ಲೋಕ ಕಲ್ಲೋಲ ಆಗುವ ವಿಷಯ ಸದ್ಯದಲ್ಲೇ ಬರಲಿದೆ, ಆ ಪೆನ್’ಡ್ರೈವ್ ನಲ್ಲಿ ಇರುವುದೇ ಡಿಕೆ ಶಿವಕುಮಾರ್ ಅವರ ಹೆಸರು. ದೇವೇಗೌಡರ ಕುಟುಂಬವನ್ನು ಮುಗಿಸುತ್ತೇನೆ ಎಂದು ಹೇಳಿಕೊಂಡು ಬರುತ್ತಿರುವವರು ಯಾರು? ಈಗಿನ ಮುಖ್ಯಮಂತ್ರಿ ತಾನೇ, ನಮ್ಮ ಕುಟುಂಬದ ಬಗ್ಗೆ ಮಾತನಾಡಿದ್ದು. ಬಿಡದಿ, ನೈಸ್, KPSC ವಿಚಾರದ ಬಗ್ಗೆ ಮಾತನಾಡಿದ ಕೂಡಲೇ, ಪರಪ್ಪನ ಅಗ್ರಹಾರ, ಪೆನ್’ಡ್ರೈವ್ ವಿಚಾರ ಮುನ್ನಲೆಗೆ ಬಂದಿದೆ. ಎರಡು ವರ್ಷದಿಂದ ಪ್ರಜ್ವಲ್ ರೇವಣ್ಣ ಜೈಲಿನಲ್ಲಿ ಇದ್ದಾನೆ, ಇಷ್ಟು ದಿನ ಇಲ್ಲದೇ ಇದ್ದದ್ದು ಈಗ ಯಾಕೆ ಮುನ್ನಲೆಗೆ ಬರುತ್ತಿದೆ ಪ್ರಜ್ವಲ್ ಕೈಯಲ್ಲಿ ಫೋನ್ ಇದೆ, ಅದರಲ್ಲಿ ಅಶ್ಲೀಲ ದೃಶ್ಯ ಇದೆ ಎನ್ನುವುದನ್ನು ತಿಳಿದುಕೊಳ್ಳಲು ಎರಡು ವರ್ಷ ಬೇಕಾಯಿತಾ, ಈ ಡ್ರಾಮಾ ನಡೆಸುತ್ತಿರುವವರು ಯಾರು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
'ಸತೀಶ್ ಜಾರಕಿಹೊಳಿ ನನ್ನನ್ನ ಭೇಟಿ ಮಾಡಿಲ್ಲ'
ಸಚಿವ ಸತೀಶ್ ಜಾರಕಿಹೊಳಿ ಭೇಟಿ ಬಗ್ಗೆ ಮಾತಾಡಿದ ಕುಮಾರಸ್ವಾಮಿ ಅವರು, ನನ್ನನ್ನು ಅವರು ಭೇಟಿ ಮಾಡಿಲ್ಲ. ಅವರ ಪಕ್ಷದೊಳಗೆ ಏನೇನು ನಡೆಯುತ್ತಿದೆ ಅಂತ ಅವರೇ ಹೇಳಿದ್ದು, ನನ್ನ ವಿರುದ್ಧ ಯಾರೋ ಕಂಪ್ಲೇಂಟ್ ಕೊಟ್ಟಿದ್ದಾರೆ ಎಂದಿದ್ದಾರೆ. ದೂರು ಕೊಟ್ಟವರ ಬಗ್ಗೆಯೂ ಮುಖ್ಯಮಂತ್ರಿಗೆ ತಿಳಿಸಿದ್ದಾಗಿ ಹೇಳಿದ್ದಾರೆ ಎಂದ್ರು.
'ಇವರೇ ಯಾಕೆ ಇದನ್ನೆಲ್ಲಾ ಮಾಡಿಸಿರಬಾರದು'
ಮುಖ್ಯಮಂತ್ರಿಗಳೇ ಇನ್ನೂ ಮೂರು-ನಾಲ್ಕು ಐದು ಜನರ ಮನೆಗಳ ಮೇಲೇ ರೇಡ್ ಆಗುತ್ತೆ ಎಂದು ಹೇಳಿದ್ದಾರೆ. ಅಂದರೆ ಮುಖ್ಯಮಂತ್ರಿಗಳಿಗೆ ಈ ಮಾಹಿತಿಯನ್ನು ಕೊಟ್ಟವರು ಯಾರು ಅದನ್ನು ಕಾಂಗ್ರೆಸ್ ಅವರು ಕೊಟ್ಟರಾ? ಯಾರು ಕೊಟ್ರು ಎಂದು ಮುಖ್ಯಮಂತ್ರಿಗಳೇ ಹೇಳಬೇಕು. ಕಾಂಗ್ರೆಸ್ನವರೇ ದೂರು ಕೊಟ್ಟಿದ್ದಾರೆ ಎಂದ್ಮೇಲೆ ಅವರೇ ಹೇಳಬೇಕಲ್ವಾ? ಇದನ್ನೆಲ್ಲಾ ಇವರೇ ಯಾಕೆ ಇದನ್ನೆಲ್ಲಾ ಮಾಡಿಸಿರಬಾರದು ಎಂದು ಸಿಎಂ ವಿರುದ್ಧ ಪರೋಕ್ಷವಾಗಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ರಾಜಣ್ಣ, ರಮೇಶ್ ಆಯ್ತು ಈಗ ಸತೀಶ್ ಜಾರಕಿಹೊಳಿ ಸರದಿ
ರಾಜಣ್ಣ, ರಮೇಶ್ ಜಾರಕಿಹೊಳಿ ಅವರನ್ನ ಮುಗಿಸಿದ್ರು. ಈಗ ಸತೀಶ್ ಜಾರಕಿಹೊಳಿ ಸರದಿ ಬಂದಿದೆ. ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಹೇಳ್ತಿದ್ದಾರೆ ಅಲ್ವಾ? ಹೀಗಾಗಿ ಸತೀಶ್ ಜಾರಕಿಹೊಳಿ ಅವರನ್ನ ಯಾವಾಗ ಮುಗಿಸಬೇಕು ಎಂದು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಪಾಪ ಆ ನಾಗೇಂದ್ರ ಅವರದ್ದು ಯಾವ ರೀತಿ ನಡೆಯಿತು ನೋಡಿ, ಡಿಕೆ ಶಿವಕುಮಾರ್ ಜೀವನ ಮಾಡಿರುವುದೇ ದ್ವೇಷದ ರಾಜಕಾರಣದಲ್ಲಿ. ಅವರ ಪುಸ್ತಕವನ್ನು ತೆಗೆದು ನೋಡಿ, ಅವರು ಮಾಡಿರೋದು ಕೇವಲ ದ್ವೇಷಕ್ಕೆ ಅಲ್ಲ ಲೂಟಿ ಮಾಡೋದಕ್ಕೆ ಎಂದು ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




