5 ವರ್ಷಗಳಿಂದ ತಗಡಿನ ಶೆಡ್‌ನಲ್ಲೇ ಅಂಬೇಡ್ಕರ್ ವಸತಿ ಶಾಲೆ: 172 ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟ ಆಡುತ್ತಿದೆಯೇ ಸಮಾಜ ಕಲ್ಯಾಣ ಇಲಾಖೆ?
6 ರಿಂದ 10ನೇ ತರಗತಿಯ ಒಟ್ಟು 172 ವಿದ್ಯಾರ್ಥಿಗಳು (92 ಹುಡುಗರು ಮತ್ತು 80 ಹುಡುಗಿಯರು) ಈ ಶೆಡ್‌ನಲ್ಲಿ ಓದುತ್ತಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಈ ತಗಡಿನ ಶೆಡ್‌ಗಾಗಿ ಸಮಾಜ ಕಲ್ಯಾಣ ಇಲಾಖೆಯು ಪ್ರತಿ ತಿಂಗಳು ಬರೋಬ್ಬರಿ 1.8 ಲಕ್ಷ ರೂಪಾಯಿ ಬಾಡಿಗೆ ಪಾವತಿಸುತ್ತಿದೆ.

ಹಾಸನ: ರಾಜ್ಯದಲ್ಲಿ ಹಿಂದುಳಿದ ಮತ್ತು ದಲಿತ ಮಕ್ಕಳ ಶಿಕ್ಷಣಕ್ಕಾಗಿ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತದೆ. ಆದರೆ, ಹಾಸನ ಜಿಲ್ಲೆಯ ಶಾಂತಿಗ್ರಾಮದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ದುಃಸ್ಥಿತಿ ನೋಡಿದರೆ ಸರ್ಕಾರಿ ವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದು ಸ್ಪಷ್ಟವಾಗುತ್ತದೆ.
ಕಳೆದ ಐದು ವರ್ಷಗಳಿಂದ ಈ ಶಾಲೆಯ 172 ವಿದ್ಯಾರ್ಥಿಗಳು ಒಂದು ಸಣ್ಣ ತಗಡಿನ ಶೆಡ್‌ನಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ.
6 ರಿಂದ 10ನೇ ತರಗತಿಯ ಒಟ್ಟು 172 ವಿದ್ಯಾರ್ಥಿಗಳು (92 ಹುಡುಗರು ಮತ್ತು 80 ಹುಡುಗಿಯರು) ಈ ಶೆಡ್‌ನಲ್ಲಿ ಓದುತ್ತಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ, ಈ ತಗಡಿನ ಶೆಡ್‌ಗಾಗಿ ಸಮಾಜ ಕಲ್ಯಾಣ ಇಲಾಖೆಯು ಪ್ರತಿ ತಿಂಗಳು ಬರೋಬ್ಬರಿ 1.8 ಲಕ್ಷ ರೂಪಾಯಿ ಬಾಡಿಗೆ ಪಾವತಿಸುತ್ತಿದೆ. ಆದರೂ ಮಕ್ಕಳಿಗೆ ಕನಿಷ್ಠ ಮೂಲಸೌಕರ್ಯಗಳೂ ಸಿಕ್ಕಿಲ್ಲ. ಒಂದೇ ಶೆಡ್‌ನಲ್ಲಿ ತರಗತಿಗಳು, ಊಟದ ವ್ಯವಸ್ಥೆ ಹಾಗೂ ರಾತ್ರಿ ಮಲಗುವ ಕೋಣೆಗಳನ್ನು ಮಾಡಲಾಗಿದೆ.
ಇಲ್ಲಿರುವ 92 ಬಾಲಕರಿಗೆ ಕೇವಲ 5 ಶೌಚಾಲಯಗಳಿದ್ದರೆ, 80 ಬಾಲಕಿಯರಿಗೆ ಸುರಕ್ಷಿತ ಮತ್ತು ಪ್ರತ್ಯೇಕ ಶೌಚಾಲಯದ ವ್ಯವಸ್ಥೆಯೇ ಇಲ್ಲ. ಇದರಿಂದಾಗಿ ವಿದ್ಯಾರ್ಥಿನಿಯರು ಪ್ರತಿದಿನ ತೀವ್ರ ಮುಜುಗರ ಮತ್ತು ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ನಿರ್ವಹಣೆಯಲ್ಲಿರುವ ಹಾಸನದ ಶಾಂತಿಗ್ರಾಮದಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಕಳೆದ ಐದು ವರ್ಷಗಳಿಂದ ಯಾವುದೇ ಮೂಲಸೌಕರ್ಯವಿಲ್ಲದ ಶೆಡ್‌ನಲ್ಲೇ ನಡೆಯುತ್ತಿದೆ.
ಶೆಡ್‌ನಲ್ಲಿ ಬಾಲಕರು ಹಾಗೂ ಬಾಲಕಿಯರಿಗೆ ಸಾಕಷ್ಟು ಶೌಚಾಲಯಗಳ ವ್ಯವಸ್ಥೆಯೂ ಇಲ್ಲ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ವಿದ್ಯಾರ್ಥಿಗಳ ವಸತಿಗೃಹಕ್ಕಾಗಿ ಸುಸಜ್ಜಿತ ಕಟ್ಟಡ ಹುಡುಕುತ್ತಿರುವುದಾಗಿ ತಿಳಿಸಿದ್ದಾರೆ.
ಆದರೆ, ಶೆಡ್‌ನ ಮಾಲೀಕರು ಶಾಲೆಯನ್ನು ಬೇರೆಡೆಗೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಅವಕಾಶ ನೀಡುತ್ತಿಲ್ಲ ಎನ್ನಲಾಗಿದೆ.
ಈ ಶೆಡ್‌ನ ಮಾಲೀಕರು ನಿರ್ದಿಷ್ಟ ರಾಜಕೀಯ ಪಕ್ಷದ ಹಿರಿಯ ನಾಯಕರೊಬ್ಬರ ಆಪ್ತರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಈ ನಡುವೆ ಶೆಡ್ ಮಾಲೀಕರಿಗೆ ಸರ್ಕಾರ ಪ್ರತಿ ತಿಂಗಳು 1.8 ಲಕ್ಷ ರೂ. ಬಾಡಿಗೆ ಪಾವತಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಿದ್ದರೂ ವಿದ್ಯಾರ್ಥಿಗಳಿಗೆ ಕನಿಷ್ಠ ಮೂಲಸೌಕರ್ಯಗಳನ್ನೂ ಒದಗಿಸದಿರುವುದಕ್ಕೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ಪೋಷಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶಾಲೆಯ ಪ್ರಾಂಶುಪಾಲರು ಹಾಗೂ ವಾರ್ಡನ್ ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ. ಈ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರ ಗಮನಕ್ಕೆ ತಂದಾಗ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ದೂದ್‌ಪೀರ್ ಅವರನ್ನು ಕರೆಸಿ, ಕರ್ತವ್ಯಲೋಪದ ಆರೋಪದ ಹಿನ್ನೆಲೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



