ಬೆಂಗಳೂರಿನ 4 ಫ್ಲೈಓವರ್‌ಗಳಲ್ಲಿ ಬೈಕ್-ಆಟೋ ಸಂಚಾರ ಬಂದ್: ಟ್ರಾಫಿಕ್ ಜಾಮ್'ಗೆ ಸವಾರರು ಹೈರಾಣ; ಪೊಲೀಸರ ವಿರುದ್ಧ ಜನಾಕ್ರೋಶ..!
ಮೈಸೂರು ರಸ್ತೆಯ ಬಿಜಿಎಸ್ ಫ್ಲೈಓವರ್, ಪೀಣ್ಯ ಮೇಲ್ಸೇತುವೆ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮೇಲ್ಸೇತುವೆ (ಸಂಜೀವನಗರ ಕ್ರಾಸ್‌ನಿಂದ ವಿದ್ಯಾವಿಹಾರ ಜಂಕ್ಷನ್‌ವರೆಗೆ) ಹಾಗೂ ಸಿಲ್ಕ್ ಬೋರ್ಡ್‌ನಿಂದ ರಾಗಿಗುಡ್ಡದವರೆಗಿನ ಡಬಲ್ ಡೆಕ್ಕರ್ ಫ್ಲೈಓವರ್‌ಗಳಲ್ಲಿ ನಿರ್ಬಂಧ ಜಾರಿಗೆ ಬಂದಿದೆ.

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಅಪಘಾತಗಳನ್ನು ತಡೆಯುವ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರು ಸಂಚಾರಿ ಪೊಲೀಸರು ನಗರದ ನಾಲ್ಕು ಪ್ರಮುಖ ಫ್ಲೈಓವರ್‌ಗಳಲ್ಲಿ ಹೊಸ ವಾಹನ ನಿರ್ಬಂಧಗಳನ್ನು ಜಾರಿಗೆ ತಂದಿದ್ದಾರೆ. ಶುಕ್ರವಾರದಿಂದಲೇ ಈ ನಿಯಮ ಅನ್ವಯವಾಗುತ್ತಿದ್ದು, ವಾಹನ ಸವಾರರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ನಿರ್ಬಂಧದಿಂದ ಅನಿವಾರ್ಯವಾಗಿ ಸುತ್ತು ಮಾರ್ಗಗಳಲ್ಲಿ ಸಂಚರಿಸಬೇಕಾಗಿದ್ದು, ಇದರಿಂದ ನಗರದ ಇತರ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚುತ್ತಿದೆ ಎಂದು ವಾಹನ ಸವಾರರು ಹೇಳಿದ್ದಾರೆ.
ಅಪಘಾತಗಳನ್ನು ನಿಯಂತ್ರಿಸಿ ರಸ್ತೆ ಸುರಕ್ಷತೆ ಸುಧಾರಿಸುವ ಉದ್ದೇಶದಿಂದ ಬೆಂಗಳೂರು ಸಂಚಾರ ಪೊಲೀಸರು ಶುಕ್ರವಾರ ಬೆಳಗ್ಗೆಯಿಂದ ಈ ನಿರ್ಬಂಧಗಳನ್ನು ಜಾರಿಗೆ ತಂದಿದ್ದಾರೆ.
ವಾಹನ ಸವಾರರಿಗೆ ಮಾಹಿತಿ ನೀಡಲು ಫ್ಲೈಓವರ್‌ಗಳ ಬಳಿ ಬ್ಯಾನರ್‌ಗಳನ್ನು ಅಳವಡಿಸಲಾಗಿದ್ದು, ಪೊಲೀಸರು ಧ್ವನಿವರ್ಧಕಗಳ ಮೂಲಕವೂ ಜಾಗೃತಿ ಮೂಡಿಸಿದರು.
ಮೈಸೂರು ರಸ್ತೆಯ ಬಿಜಿಎಸ್ ಫ್ಲೈಓವರ್, ಪೀಣ್ಯ ಮೇಲ್ಸೇತುವೆ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮೇಲ್ಸೇತುವೆ (ಸಂಜೀವನಗರ ಕ್ರಾಸ್‌ನಿಂದ ವಿದ್ಯಾವಿಹಾರ ಜಂಕ್ಷನ್‌ವರೆಗೆ) ಹಾಗೂ ಸಿಲ್ಕ್ ಬೋರ್ಡ್‌ನಿಂದ ರಾಗಿಗುಡ್ಡದವರೆಗಿನ ಡಬಲ್ ಡೆಕ್ಕರ್ ಫ್ಲೈಓವರ್‌ಗಳಲ್ಲಿ ನಿರ್ಬಂಧ ಜಾರಿಗೆ ಬಂದಿದೆ. ಎಲೆಕ್ಟ್ರಾನಿಕ್ಸ್ ಸಿಟಿ ಮೇಲ್ಸೇತುವೆಯಲ್ಲಿ ಸೆಪ್ಟೆಂಬರ್ 11ರಿಂದ ನಿರ್ಬಂಧ ಜಾರಿಗೆ ಬರಲಿದೆ.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮೇಲ್ಸೇತುವೆಯಲ್ಲಿ ಮಾತ್ರ ದ್ವಿಚಕ್ರ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕೆಲವು ಫ್ಲೈಓವರ್‌ಗಳಲ್ಲಿ ಆಟೊರಿಕ್ಷಾಗಳ ಸಂಚಾರಕ್ಕೂ ನಿರ್ಬಂಧ ಹೇರಲಾಗಿದೆ. ಭಾರಿ ಟ್ರಕ್‌ಗಳು ಸೇರಿದಂತೆ ಸರಕು ಸಾಗಣೆ ವಾಹನಗಳಿಗೆ ಪೀಕ್ ಅವಧಿಯಲ್ಲಿ ಸಂಚಾರಕ್ಕೆ ಅವಕಾಶ ಇರುವುದಿಲ್ಲ.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ಮೇಲ್ಸೇತುವೆಯನ್ನು ನಿಯಮಿತವಾಗಿ ಬಳಸುತ್ತಿದ್ದ ರಮೇಶ್ ಎಂಬ ಬೈಕ್ ಸವಾರ ಮಾತನಾಡಿ, “ದ್ವಿಚಕ್ರ ವಾಹನಗಳ ಎಂಜಿನ್ ಸಾಮರ್ಥ್ಯವನ್ನು ಪರಿಗಣಿಸಿ ಪೊಲೀಸರು ನಿರ್ಬಂಧ ವಿಧಿಸಬೇಕಿತ್ತು. ದುಬಾರಿ ಬೈಕ್‌ಗಳ ಸವಾರರು ವೇಗವಾಗಿ ಚಲಿಸಬಹುದು. ಆದರೆ, ವಿದ್ಯುತ್ ಸ್ಕೂಟರ್‌ಗಳು ಮತ್ತು ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನಗಳ ಸವಾರರಿಗೇಕೆ ನಿರ್ಬಂಧ?” ಎಂದು ಪ್ರಶ್ನಿಸಿದ್ದಾರೆ.
ನಗರದ ರಸ್ತೆ ಬಳಕೆದಾರರಲ್ಲಿ ಸುಮಾರು ಶೇ.60ರಷ್ಟು ಮಂದಿ ದ್ವಿಚಕ್ರ ವಾಹನ ಹಾಗೂ ಆಟೊರಿಕ್ಷಾ ಬಳಕೆದಾರರಾಗಿದ್ದಾರೆ. ಇವರಿಗೆ ಫ್ಲೈಓವರ್ ಬಳಸಲು ಅವಕಾಶ ನೀಡದಿದ್ದರೆ ಸಂಚಾರ ಅನಿವಾರ್ಯವಾಗಿ ಇತರ ರಸ್ತೆಗಳಿಗೆ ಸ್ಥಳಾಂತರಗೊಳ್ಳಲಿದೆ ಎಂದು ಹೇಳಿದ್ದಾರೆ.
ಅಪಘಾತ ತಡೆಗೆ ಕ್ರಮಗಳ ಅಗತ್ಯವಿದೆ ಎಂಬುದನ್ನು ಹಲವು ವಾಹನ ಸವಾರರು ಒಪ್ಪಿಕೊಂಡರೂ, ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಹಾಗೂ ಸರ್ವಿಸ್ ರಸ್ತೆಗಳನ್ನು ಸುಧಾರಿಸುವಂತೆ ಸಂಚಾರ ಪೊಲೀಸರನ್ನು ಒತ್ತಾಯಿಸಿದ್ದಾರೆ.
ಆಟೊರಿಕ್ಷಾ ಚಾಲಕರು ಕೂಡ ನಿರ್ಬಂಧದಿಂದ ಪ್ರಯಾಣದ ಅವಧಿ ಹಾಗೂ ಇಂಧನ ವೆಚ್ಚ ಹೆಚ್ಚಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತ, ಹೊಸ ನಿರ್ಬಂಧಗಳನ್ನು ಜಾರಿಗೊಳಿಸಲು ಫ್ಲೈಓವರ್‌ಗಳ ಮೇಲೆ ಹಗಲು-ರಾತ್ರಿ ನಿಗಾ ವಹಿಸಬೇಕಾಗಿರುವುದರಿಂದ ಪೊಲೀಸರಿಗೆ ಕಾರ್ಯದ ಒತ್ತಡ ಹೆಚ್ಚಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ನಿರ್ಬಂಧ ಜಾರಿಗಾಗಿ ಹೆಚ್ಚುವರಿ ಸಿಬ್ಬಂದಿಯ ಅಗತ್ಯವಿದೆ ಎಂದು ಹಿರಿಯ ಸಂಚಾರ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸದ್ಯ ವಾಹನ ಸವಾರರಿಗೆ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ, ನಿರ್ಬಂಧಿತ ವಾಹನಗಳ ಸಂಚಾರವನ್ನು ತಡೆಯಲಾಗುತ್ತಿದೆ” ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



