ರಾಜ್ಯ

ವರ್ಷಗಳ ಕನಸು ನನಸು: ಭದ್ರಾ ನಾಲೆಗೆ ನಾಳೆಯಿಂದ ಪ್ರಾಯೋಗಿಕ ನೀರು: ರೈತರ ಮೊಗದಲ್ಲಿ ಮಂದಹಾಸ..!

ಭದ್ರಾ ಜಲಾಶಯದಿಂದ ಬಿಡುಗಡೆಯಾಗುವ ನೀರು ಚಿತ್ರದುರ್ಗ ಶಾಖಾ ಕಾಲುವೆಯ ಮೂಲಕ ಹರಿಯಲಿದೆ. ಈ ಕಾಲುವೆ ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ಹಾಗೂ ಚಿತ್ರದುರ್ಗ ತಾಲೂಕುಗಳ ಮೂಲಕ ಸಾಗಿ ಗೂನೂರು ಕೆರೆ ತಲುಪಲಿದೆ.

ವರ್ಷಗಳ ಕನಸು ನನಸು: ಭದ್ರಾ ನಾಲೆಗೆ ನಾಳೆಯಿಂದ ಪ್ರಾಯೋಗಿಕ ನೀರು: ರೈತರ ಮೊಗದಲ್ಲಿ ಮಂದಹಾಸ..!
ಲಕ್ಕವಳ್ಳಿ ಬಳಿಯ ಭದ್ರಾ ಅಣೆಕಟ್ಟು
Published On :

ಚಿತ್ರದುರ್ಗ: ದಶಕಗಳ ಕಾಲದ ಹೋರಾಟ ಹಾಗೂ ಕನಸಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಭದ್ರಾ ಮೇಲ್ದಂಡೆ ಯೋಜನೆಯಡಿ ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ನಾಲೆಗೆ ಭಾನುವಾರದಿಂದ (ಸೆಪ್ಟೆಂಬರ್ ೬) ಪ್ರಾಯೋಗಿಕವಾಗಿ ನೀರು ಹರಿಸಲು ಸರ್ಕಾರ ಮುಂದಾಗಿದ್ದು, ಕೋಟೆ ನಾಡಿನ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.

ಈ ಭಾಗದ ಬರಪೀಡಿತ ಪ್ರದೇಶಗಳಿಗೆ ನೀರು ತಲುಪಿಸುವ ನಿಟ್ಟಿನಲ್ಲಿ ಹೊಸದಾಗಿ ನಿರ್ಮಿಸಲಾದ ನಾಲೆಯ ಮೂಲಸೌಕರ್ಯ ಹಾಗೂ ಸಾಮರ್ಥ್ಯವನ್ನು ಪರೀಕ್ಷಿಸಲು ಈ ಪ್ರಾಯೋಗಿಕ ಚಾಲನೆ ಅತ್ಯಗತ್ಯವಾಗಿತ್ತು.

ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ (ವಿಜೆಎನ್‌ಎಲ್) ಭದ್ರಾ ಜಲಾಶಯದಿಂದ ನೀರು ಹರಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ.

ಭದ್ರಾ ಜಲಾಶಯದಿಂದ ಬಿಡುಗಡೆಯಾಗುವ ನೀರು ಚಿತ್ರದುರ್ಗ ಶಾಖಾ ಕಾಲುವೆಯ ಮೂಲಕ ಹರಿಯಲಿದೆ. ಈ ಕಾಲುವೆ ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು ಹಾಗೂ ಚಿತ್ರದುರ್ಗ ತಾಲೂಕುಗಳ ಮೂಲಕ ಸಾಗಿ ಗೂನೂರು ಕೆರೆ ತಲುಪಲಿದೆ. ಬಳಿಕ ನೈಸರ್ಗಿಕ ಹಳ್ಳದ ಮೂಲಕ ಚಳ್ಳಕೆರೆ ತಾಲೂಕಿನ ರಾಣಿಕೆರೆಗೆ ನೀರು ಹರಿಸಲು ಉದ್ದೇಶಿಸಲಾಗಿದೆ.

ಕಾಲುವೆ ಹಾಗೂ ಹಳ್ಳಗಳಿಗೆ ನೀರು ಹರಿಸಿದ ಬಳಿಕ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಕಾಲುವೆ ಹಾಗೂ ಹಳ್ಳಗಳ ಒಳಗೆ ಪ್ರವೇಶಿಸುವುದು, ಅವುಗಳ ದಡದಲ್ಲಿ ನಡೆದುಕೊಂಡು ಹೋಗುವುದು, ಜನರು ಅಥವಾ ಜಾನುವಾರುಗಳನ್ನು ಕಾಲುವೆಗೆ ಇಳಿಸುವುದು, ಈಜುವುದು ಸೇರಿದಂತೆ ಅಪಾಯಕಾರಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ನಿಗಮಕ್ಕೆ ಸೇರಿದ ನೀರಾವರಿ ಕಾಲುವೆಗಳು ಹಾಗೂ ಸಂಬಂಧಿತ ರಚನೆಗಳಿಗೆ ಹಾನಿ ಮಾಡುವುದು ಅಥವಾ ಅಕ್ರಮವಾಗಿ ಪಂಪ್‌ಸೆಟ್ ಅಳವಡಿಸಿ ನೀರು ಎತ್ತುವುದನ್ನೂ ನಿಷೇಧಿಸಲಾಗಿದೆ ಎಂದು ಅಧೀಕ್ಷಕ ಎಂಜಿನಿಯರ್ ತಿಳಿಸಿದ್ದಾರೆ.

ನಿಯಮ ಉಲ್ಲಂಘಿಸುವವರ ವಿರುದ್ಧ ನೀರಾವರಿ ಕಾಯ್ದೆ ಹಾಗೂ ಅನ್ವಯವಾಗುವ ಇತರ ಕಾನೂನುಗಳ ಅಡಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಭದ್ರಾ ನೀರು ಹರಿಸುವುದರಿಂದ ಬರಪೀಡಿತ ಚಿತ್ರದುರ್ಗ ಜಿಲ್ಲೆಗೆ ಮಹತ್ವದ ಪರಿಹಾರ ದೊರೆಯುವ ನಿರೀಕ್ಷೆಯಿದೆ. ವಿಶೇಷವಾಗಿ ಕೃಷಿ ಹಾಗೂ ಕುಡಿಯುವ ನೀರಿನ ಕೊರತೆ ನೀಗಿಸಲು ಇದು ನೆರವಾಗಲಿದೆ. ನೀರು ಹರಿಸುವ ನಿರ್ಧಾರ ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.

ಈ ಕುರಿತು ಮಾತನಾಡಿದ ಪರಿಶಿಷ್ಟ ಪಂಗಡಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಅವರು ಮಾತನಾಡಿ, “ಮೇಲ್ದಂಡೆ ಭದ್ರಾ ಯೋಜನೆ ಜಾರಿಗಾಗಿ ಹೋರಾಟ ನಡೆಸಿದ ಹೋರಾಟಗಾರರು, ಸಾರ್ವಜನಿಕರು, ಸ್ವಾಮೀಜಿಗಳು ಹಾಗೂ ವಿವಿಧ ಕ್ಷೇತ್ರಗಳ ಜನರನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ಹಲವರು ಹೋರಾಟದ ನಡುವೆ ನಮ್ಮನ್ನು ಅಗಲಿದ್ದಾರೆ. ಇನ್ನು ಕೆಲವರು ನಮ್ಮೊಂದಿಗಿದ್ದಾರೆ. ಯೋಜನೆ ಜಾರಿಯಾಗುತ್ತಿರುವುದನ್ನು ಅವರು ಸಂತೋಷದಿಂದ ನೋಡಲಿದ್ದಾರೆ” ಎಂದು ಹೇಳಿದರು.

ಈ ಯೋಜನೆಗಾಗಿ ಪಕ್ಷಭೇದ ಮರೆತು ಹಲವು ರಾಜಕಾರಣಿಗಳು ಹೋರಾಟದಲ್ಲಿ ಭಾಗವಹಿಸಿದ್ದರು. ಅವರ ಸೇವೆಯನ್ನೂ ಈ ಸಂದರ್ಭದಲ್ಲಿ ಸ್ಮರಿಸುವುದಾಗಿ ಸಚಿವರು ತಿಳಿಸಿದರು.

ಈ ಬಾರಿ ಪ್ರಾಯೋಗಿಕವಾಗಿ ಕೆರೆಗಳನ್ನು ಭಾಗಶಃ ತುಂಬಿಸುವ ಸಾಧ್ಯತೆಯಿದೆ. ಮುಂದಿನ ದಿನಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಕೆರೆಗಳನ್ನು ಸಂಪೂರ್ಣವಾಗಿ ತುಂಬಿಸುವ ವಿಶ್ವಾಸವಿದೆ ಎಂದು ರಘುಮೂರ್ತಿ ಹೇಳಿದರು.

ಮಾಜಿ ಜಲಸಂಪನ್ಮೂಲ ಸಚಿವ ಹಾಗೂ ಚಿತ್ರದುರ್ಗ ಸಂಸದ ಗೋವಿಂದ ಎಂ. ಕಾರಜೋಳ ಮಾತನಾಡಿ, “ನೀರು ಹರಿಸುವುದು ವಿಳಂಬವಾಗಿದೆ, ಆದರೆ ನಿರಾಕರಿಸಲಾಗಿಲ್ಲ. ಪ್ರಾಯೋಗಿಕವಾಗಿ ನೀರು ಹರಿಸಲು ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ಚಿತ್ರದುರ್ಗದ ರೈತರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಪ್ರಾಯೋಗಿಕವಾಗಿ ಹರಿಸಲಾಗುತ್ತಿರುವ ನೀರನ್ನು ಕೆರೆಗಳಿಗೆ ತಲುಪಿಸಿ ಅವುಗಳನ್ನು ತುಂಬಿಸುವುದು ಅಗತ್ಯ. ಈ ಕಾರ್ಯ ಯಶಸ್ವಿಯಾದರೆ ಜಿಲ್ಲೆಯ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.