ಹುಲಿ ಸಾವು, ಆನೆ ದಂತ ನಾಪತ್ತೆ ಪ್ರಕರಣ: ಸಮಗ್ರ ತನಿಖೆಗೆ ಸಚಿವ ರಾಮಲಿಂಗಾ ರೆಡ್ಡಿ ಆದೇಶ
ಘಟನೆಗಳ ಹಿಂದಿನ ಕಾರಣಗಳು, ಬೇಟೆಗಾರರ ಕೈವಾಡ ಇರುವ ಸಾಧ್ಯತೆ, ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ಕರ್ತವ್ಯಲೋಪಗಳು ಮತ್ತು ಕೈಗೊಂಡಿರುವ ಅಥವಾ ಕೈಗೊಳ್ಳಲಿರುವ ಸರಿಪಡಿಸುವ ಕ್ರಮಗಳ ಕುರಿತು ವರದಿಯಲ್ಲಿ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಉರುಳಿಗೆ ಸಿಲುಕಿ ಹುಲಿ ಸಾವನ್ನಪ್ಪಿರುವುದು ಹಾಗೂ ಕರಡಿಕಲ್ಲು ಗುಡ್ಡ ಪ್ರದೇಶದಲ್ಲಿ ಮೃತಪಟ್ಟ ಕಾಡಾನೆಯ ದಂತಗಳು ನಾಪತ್ತೆಯಾಗಿರುವ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು, ಅರಣ್ಯಾಧಿಕಾರಿಗಳಿಗೆ ಗುರುವಾರ ಸೂಚನೆ ನೀಡಿದ್ದಾರೆ.
ಈ ಎರಡೂ ಘಟನೆಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸಿ ಒಂದು ವಾರದೊಳಗೆ ವಿವರವಾದ ವರದಿ ಸಲ್ಲಿಸುವಂತೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಅವರಿಗೆ ಸಚಿವರು ಪತ್ರ ಬರೆದಿದ್ದಾರೆ.
ಘಟನೆಗಳ ಹಿಂದಿನ ಕಾರಣಗಳು, ಬೇಟೆಗಾರರ ಕೈವಾಡ ಇರುವ ಸಾಧ್ಯತೆ, ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಯ ಕರ್ತವ್ಯಲೋಪಗಳು ಮತ್ತು ಕೈಗೊಂಡಿರುವ ಅಥವಾ ಕೈಗೊಳ್ಳಲಿರುವ ಸರಿಪಡಿಸುವ ಕ್ರಮಗಳ ಕುರಿತು ವರದಿಯಲ್ಲಿ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.
ಈ ಘಟನೆಗಳು ಗಂಭೀರ ಕಳವಳಕ್ಕೆ ಕಾರಣವಾಗಿವೆ ಎಂದು ಹೇಳಿರುವ ರಾಮಲಿಂಗಾ ರೆಡ್ಡಿ ಅವರು, ಅರಣ್ಯ ಪ್ರದೇಶಗಳಲ್ಲೇ ಇಂತಹ ಪ್ರಕರಣಗಳು ನಡೆದಿರುವುದು ಗಸ್ತು, ಮೇಲ್ವಿಚಾರಣೆ ಹಾಗೂ ವನ್ಯಜೀವಿಗಳ ಸಂರಕ್ಷಣಾ ವ್ಯವಸ್ಥೆಯ ಕಾರ್ಯಕ್ಷಮತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ತಿಳಿಸಿದ್ದಾರೆ.
ವೈಜ್ಞಾನಿಕ ವಿಧಾನ ಮತ್ತು ಸಾಕ್ಷ್ಯಾಧಾರಗಳ ಆಧಾರದ ಮೇಲೆ ತನಿಖೆ ನಡೆಸಿ, ಘಟನೆಗಳ ಹಿಂದಿನ ಸತ್ಯಾಂಶಗಳನ್ನು ಪತ್ತೆಹಚ್ಚುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಅಲ್ಲದೆ, ಎರಡೂ ಘಟನೆಗಳ ನಡುವೆ ಯಾವುದಾದರೂ ಸಂಬಂಧವಿದೆಯೇ ಎಂಬುದನ್ನೂ ಪರಿಶೀಲಿಸುವಂತೆ ಸೂಚಿಸಿದ್ದಾರೆ.
ಹುಲಿಯ ಸಾವಿಗೆ ಕಾರಣವಾದ ಉರುಳನ್ನು ಇಟ್ಟವರು ಯಾರು, ಕಾಡಾನೆಯ ದಂತಗಳು ಹೇಗೆ ನಾಪತ್ತೆಯಾದವು ಹಾಗೂ ಈ ಪ್ರಕರಣಗಳಲ್ಲಿ ಬೇಟೆಗಾರರ ಕೈವಾಡವಿದೆಯೇ ಎಂಬುದನ್ನು ತನಿಖೆಯ ಮೂಲಕ ಪತ್ತೆಹಚ್ಚಬೇಕಿದೆ.
ಘಟನೆ ನಡೆದ ಸ್ಥಳಗಳನ್ನು ಪರಿಶೀಲಿಸುವುದರ ಜೊತೆಗೆ ಲಭ್ಯವಿರುವ ಭೌತಿಕ ಸಾಕ್ಷ್ಯಗಳು, ಛಾಯಾಚಿತ್ರಗಳು, ಸಿಬ್ಬಂದಿಯ ಹೇಳಿಕೆಗಳು, ಗಸ್ತು ನಿರ್ವಹಣಾ ದಾಖಲೆಗಳು ಹಾಗೂ ಇತರ ಸಂಬಂಧಿತ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸುವಂತೆಯೂ ಸಚಿವರು ಸೂಚಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



