ರಾಜ್ಯ

1918ರ ನಂತರ ಅತಿ ಹೆಚ್ಚು ಮಳೆ ಕೊರತೆ: 100 ವರ್ಷಗಳ ಇತಿಹಾಸದಲ್ಲೇ ಕಾಣದ ಭೀಕರ ಜಲಕ್ಷಾಮಕ್ಕೆ ಕರ್ನಾಟಕ ಸಾಕ್ಷಿ..!

2002ರಲ್ಲಿ ರಾಜ್ಯದಲ್ಲಿ ಶೇ.31ರಷ್ಟು ಮಳೆ ಕೊರತೆ ದಾಖಲಾಗಿತ್ತು. 2023ರಲ್ಲಿ ಈ ಪ್ರಮಾಣ ಶೇ.18ರಷ್ಟಿತ್ತು. ದೇಶದ ಈ ಪ್ರದೇಶದಲ್ಲಿ ಇದುವರೆಗೆ ದಾಖಲಾದ ಅತಿ ಹೆಚ್ಚಿನ ಮಳೆ ಕೊರತೆ 1918ರಲ್ಲಿ ಶೇ.47ರಷ್ಟಿತ್ತು.

1918ರ ನಂತರ ಅತಿ ಹೆಚ್ಚು ಮಳೆ ಕೊರತೆ: 100 ವರ್ಷಗಳ ಇತಿಹಾಸದಲ್ಲೇ ಕಾಣದ ಭೀಕರ ಜಲಕ್ಷಾಮಕ್ಕೆ ಕರ್ನಾಟಕ ಸಾಕ್ಷಿ..!
ಸಂಗ್ರಹ ಚಿತ್ರ
Published On :

ಬೆಂಗಳೂರು: ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ಇತಿಹಾಸದಲ್ಲೇ ಅತ್ಯಂತ ಕಠಿಣ ಪರಿಸ್ಥಿತಿ ಎದುರಾಗಿದೆ.

2026ರ ನೈಋತ್ಯ ಮುಂಗಾರು ಹಂಗಾಮಿನಲ್ಲಿ (ಜೂನ್ 1 ರಿಂದ ಸೆಪ್ಟೆಂಬರ್ 30) ರಾಜ್ಯಾದ್ಯಂತ ಶೇಕಡಾ 32 ರಷ್ಟು ಭೀಕರ ಮಳೆ ಕೊರತೆ ದಾಖಲಾಗಿದೆ. ಇದು 1918ರ ನಂತರ (ಅಂದು ಶೇ. 47 ರಷ್ಟು ಕೊರತೆಯಾಗಿತ್ತು) ರಾಜ್ಯ ಕಂಡ ಅತಿ ದೊಡ್ಡ ಮಳೆ ಕೊರತೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಅಧಿಕೃತವಾಗಿ ತಿಳಿಸಿದೆ.

2002ರಲ್ಲಿ ರಾಜ್ಯದಲ್ಲಿ ಶೇ.31ರಷ್ಟು ಮಳೆ ಕೊರತೆ ದಾಖಲಾಗಿತ್ತು. 2023ರಲ್ಲಿ ಈ ಪ್ರಮಾಣ ಶೇ.18ರಷ್ಟಿತ್ತು. ದೇಶದ ಈ ಪ್ರದೇಶದಲ್ಲಿ ಇದುವರೆಗೆ ದಾಖಲಾದ ಅತಿ ಹೆಚ್ಚಿನ ಮಳೆ ಕೊರತೆ 1918ರಲ್ಲಿ ಶೇ.47ರಷ್ಟಿತ್ತು.

ಜೂನ್ 1ರಿಂದ ಸೆಪ್ಟೆಂಬರ್ 30ರವರೆಗೆ ರಾಜ್ಯದಲ್ಲಿ ವಾಡಿಕೆಯಂತೆ 831.8 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಈ ಬಾರಿ ಕೇವಲ 563.7 ಮಿ.ಮೀ. ಮಳೆಯಾಗಿದೆ.

ಅಕ್ಟೋಬರ್ 14ರಂದು ಮುಂಗಾರು ದೇಶದಿಂದ ಅಧಿಕೃತವಾಗಿ ನಿರ್ಗಮಿಸಿದ್ದು, ಪ್ರಸ್ತುತ ಹವಾಮಾನದ ಮುನ್ಸೂಚನೆಗಳ ಪ್ರಕಾರ ಮುಂಬರುವ ಹಿಂಗಾರು ಮಳೆಯೂ ಕುಂಠಿತಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಇದರಿಂದಾಗಿ ಮುಂದಿನ ಬೇಸಿಗೆಯ ವೇಳೆಗೆ ರಾಜ್ಯದಲ್ಲಿ ನೀರಿನ ಬಿಕ್ಕಟ್ಟು ಇನ್ನಷ್ಟು ತೀವ್ರಗೊಳ್ಳುವ ಮುನ್ನೆಚ್ಚರಿಕೆಯನ್ನು ಹವಾಮಾನ ತಜ್ಞರು ನೀಡಿದ್ದಾರೆ.

ಕಳೆದ ಒಂದೆರಡು ದಿನಗಳಲ್ಲಿ ನೈಋತ್ಯ ಮುಂಗಾರು ಕರ್ನಾಟಕದಿಂದ ಸಂಪೂರ್ಣವಾಗಿ ನಿರ್ಗಮಿಸಿದ್ದು, ಈ ಅವಧಿಯಲ್ಲಿ ರಾಜ್ಯದಲ್ಲಿ ಮಳೆಯಾಗಿಲ್ಲ. ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಶೇ.32ರಷ್ಟು ಮಳೆ ಕೊರತೆ ದಾಖಲಾಗಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಬೆಂಗಳೂರಿನ ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಎನ್. ಪುವಿಯರಸನ್ ತಿಳಿಸಿದ್ದಾರೆ.

ಸಾಮಾನ್ಯವಾಗಿ ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯನ್ನು ನೈಋತ್ಯ ಮುಂಗಾರು ಕಾಲವೆಂದು ಪರಿಗಣಿಸಲಾಗುತ್ತದೆ. ಇದೇ ಅವಧಿಯ ಮಳೆಯ ಅಂಕಿಅಂಶಗಳನ್ನು ದಾಖಲಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ಆದರೆ, ಈ ವರ್ಷ ನೈಋತ್ಯ ಮುಂಗಾರು ರಾಜ್ಯಕ್ಕೆ ತಡವಾಗಿ ಪ್ರವೇಶಿಸಿದ್ದು, ಹಿಂತೆಗೆತವೂ ವಿಳಂಬವಾಗಿದೆ.

ಅಕ್ಟೋಬರ್‌ನಲ್ಲಿ ಕರ್ನಾಟಕದಲ್ಲಿ ಸುರಿದ ಮಳೆ ನೈಋತ್ಯ ಮುಂಗಾರು ಹಿಂತೆಗೆತದ ಅವಧಿಗೆ ಸಂಬಂಧಿಸಿದ್ದಾಗಿದ್ದರೂ, ಹವಾಮಾನ ವೈಜ್ಞಾನಿಕವಾಗಿ ಅಕ್ಟೋಬರ್ 2026ರಿಂದ ಆರಂಭವಾಗುವ ಈಶಾನ್ಯ ಮುಂಗಾರು ಅವಧಿಯ ಮಳೆಯೆಂದು ದಾಖಲಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ದಕ್ಷಿಣ ಒಳನಾಡಿನಲ್ಲಿ ಅತಿ ಹೆಚ್ಚು ಮಳೆ ಕೊರತೆ

17 ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಒಳನಾಡಿನ ಕರ್ನಾಟಕ ಉಪವಿಭಾಗದಲ್ಲಿ ಅತಿ ಹೆಚ್ಚು ಶೇ.36ರಷ್ಟು ಮಳೆ ಕೊರತೆ ದಾಖಲಾಗಿದೆ. ಈ ಪ್ರದೇಶದಲ್ಲಿ ವಾಡಿಕೆಯ 678.4 ಮಿ.ಮೀ. ಮಳೆಯ ಬದಲಿಗೆ ಕೇವಲ 432.9 ಮಿ.ಮೀ. ಮಳೆಯಾಗಿದೆ.

11 ಜಿಲ್ಲೆಗಳನ್ನು ಒಳಗೊಂಡ ಉತ್ತರ ಕರ್ನಾಟಕ ಉಪವಿಭಾಗದಲ್ಲಿ ಶೇ.32ರಷ್ಟು ಮಳೆ ಕೊರತೆ ದಾಖಲಾಗಿದೆ. ಇಲ್ಲಿ ವಾಡಿಕೆಯ 480.8 ಮಿ.ಮೀ. ಮಳೆಯಾಗಬೇಕಿದ್ದರೂ, ಕೇವಲ 329.1 ಮಿ.ಮೀ. ಮಳೆಯಾಗಿದೆ.

ಮೂರು ಜಿಲ್ಲೆಗಳನ್ನು ಒಳಗೊಂಡ ಕರಾವಳಿ ಕರ್ನಾಟಕ ಉಪವಿಭಾಗದಲ್ಲಿ ಶೇ.28ರಷ್ಟು ಮಳೆ ಕೊರತೆ ದಾಖಲಾಗಿದೆ. ಈ ಪ್ರದೇಶದಲ್ಲಿ ವಾಡಿಕೆಯ 3,093.9 ಮಿ.ಮೀ. ಮಳೆಯ ಬದಲಿಗೆ 2,226.7 ಮಿ.ಮೀ. ಮಳೆಯಾಗಿದೆ.

ರಾಮನಗರದಲ್ಲಿ ಶೇ.87ರಷ್ಟು ಮಳೆ ಅಭಾವ

ರಾಜ್ಯದ ಜಿಲ್ಲಾವಾರು ಅಂಕಿಅಂಶಗಳ ಪ್ರಕಾರ, ರಾಮನಗರದಲ್ಲಿ ಅತಿ ಹೆಚ್ಚು ಶೇ.87ರಷ್ಟು ಮಳೆ ಕೊರತೆ ದಾಖಲಾಗಿದೆ. ಜಿಲ್ಲೆಯಲ್ಲಿ ವಾಡಿಕೆಯ 459.6 ಮಿ.ಮೀ. ಮಳೆಯ ಬದಲಿಗೆ ಕೇವಲ 59.2 ಮಿ.ಮೀ. ಮಳೆಯಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಮಾತ್ರ ವಾಡಿಕೆಯಷ್ಟು ಮಳೆಯಾಗಿದೆ. ಜಿಲ್ಲೆಯಲ್ಲಿ ಸಾಮಾನ್ಯವಾಗಿ 573.3 ಮಿ.ಮೀ. ಮಳೆಯಾಗಬೇಕಿದ್ದು, ಈ ಬಾರಿ 572 ಮಿ.ಮೀ. ಮಳೆಯಾಗಿದೆ.

ಎಲ್‌ನಿನೊ ಮತ್ತು ಸ್ಥಳೀಯ ಹವಾಮಾನ ಪರಿಸ್ಥಿತಿಗಳ ಪರಿಣಾಮವಾಗಿ ಭಾರತದಲ್ಲಿ ಈ ಬಾರಿ ನೈಋತ್ಯ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆಯಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇದೇ ಅಂಶಗಳು ಈಶಾನ್ಯ ಮುಂಗಾರು ಮಳೆಯ ಮೇಲೂ ಪರಿಣಾಮ ಬೀರಬಹುದು. ಇದರಿಂದ ರಾಜ್ಯದಲ್ಲಿ ವರ್ಷಪೂರ್ತಿ ಮಳೆ ಕೊರತೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಇಲಾಖೆ ಎಚ್ಚರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.