ದೊಡ್ಡಗುಬ್ಬಿ ಕೆರೆಯಲ್ಲಿ ಮೀನುಗಳ ಮಾರಣಹೋಮ: ಒಳಚರಂಡಿ ನೀರು ಹರಿಸಿದ್ದೇ ಕಾರಣ..?
ಕೆರೆಗಳಲ್ಲಿ ಹಠಾತ್ ಮೀನುಗಳ ಸಾವಿಗೆ ಸಾಮಾನ್ಯವಾಗಿ ಕಂಡುಬರುವ ಪ್ರಮುಖ ಕಾರಣವೆಂದರೆ ನೀರಿನಲ್ಲಿ ಕರಗಿರುವ ಆಮ್ಲಜನಕದ ಪ್ರಮಾಣ ಕುಸಿಯುವುದು.

ಬೆಂಗಳೂರು: ಬೆಂಗಳೂರು ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡಗುಬ್ಬಿ ಕೆರೆಯಲ್ಲಿ ಮೀನುಗಳ ಮಾರಣಹೋಮವಾಗಿದೆ. 125 ಎಕರೆ ವಿಸ್ತೀರ್ಣದ ಕೆರೆಯಾದ್ಯಂತ ಸಾವಿರಾರು ಮೀನುಗಳು ಸತ್ತು ಬಿದ್ದಿರುವುದು ಕಂಡುಬಂದಿದೆ.
ಮೀನುಗಳ ಸಾವಿಗೆ ಈವರೆಗೆ ಯಾವುದೇ ಅಧಿಕೃತ ಕಾರಣ ನೀಡಲಾಗಿಲ್ಲ. ಒಳಚರಂಡಿ ನೀರನ್ನು ಕೆರೆಗೆ ಹರಿಸಲಾಗಿದೆ ಎಂಬ ಪರಿಸರ ಕಾರ್ಯಕರ್ತರ ಅನುಮಾನವೂ ಇನ್ನೂ ದೃಢಪಟ್ಟಿಲ್ಲ.
ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಪ್ರತಿಕ್ರಿಯೆ ನೀಡಿ, ಅಧಿಕಾರಿಗಳಿಗೆ ಪರಿಶೀಲಿಸಿ, ಅಗತ್ಯ ಸರಿಪಡಿಸುವ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಆನೇಕಲ್ ಶಾಸಕ ಬಿ. ಶಿವಣ್ಣ ಅವರು ಮಾತನಾಡಿ, ಸೋಮವಾರ ಕೆರೆಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು.
ಕೆಎಸ್‌ಪಿಸಿಬಿ ಮಾಜಿ ಅಧ್ಯಕ್ಷ ಡಾ. ಶರತ್ ಚಂದ್ರ ಅವರು ಮಾತನಾಡಿ, “ಕೆರೆಗಳಲ್ಲಿ ಹಠಾತ್ ಮೀನುಗಳ ಸಾವಿಗೆ ಸಾಮಾನ್ಯವಾಗಿ ಕಂಡುಬರುವ ಪ್ರಮುಖ ಕಾರಣವೆಂದರೆ ನೀರಿನಲ್ಲಿ ಕರಗಿರುವ ಆಮ್ಲಜನಕದ ಪ್ರಮಾಣ ಕುಸಿಯುವುದು. ವಿಶೇಷವಾಗಿ ಸಂಸ್ಕರಿಸದ ಅಥವಾ ಸಮರ್ಪಕವಾಗಿ ಸಂಸ್ಕರಿಸದ ಒಳಚರಂಡಿ ನೀರು ಕೆರೆಗೆ ಸೇರಿದಾಗ ಈ ಸಮಸ್ಯೆ ಉಂಟಾಗಬಹುದು ಎಂದು ಹೇಳಿದರು.
ಒಳಚರಂಡಿ ನೀರಿನಲ್ಲಿರುವ ಸಾವಯವ ವಸ್ತುಗಳು ಮತ್ತು ಪಾಚಿಗಳು ಕೊಳೆಯುವಾಗ ಸೂಕ್ಷ್ಮಜೀವಿಗಳು ಹೆಚ್ಚಿನ ಪ್ರಮಾಣದಲ್ಲಿ ನೀರಿನಲ್ಲಿ ಕರಗಿರುವ ಆಮ್ಲಜನಕವನ್ನು ಬಳಸಿಕೊಳ್ಳುತ್ತವೆ. ಇದರಿಂದ ನೀರಿನಲ್ಲಿ ಆಮ್ಲಜನಕದ ಕೊರತೆ ಉಂಟಾಗಿ, ಕೆಲವೊಮ್ಮೆ ಆಮ್ಲಜನಕವಿಲ್ಲದ ಸ್ಥಿತಿಯೂ ನಿರ್ಮಾಣವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ ಮೀನುಗಳು ಉಸಿರುಗಟ್ಟಿ ಸಾಯುವ ಸಾಧ್ಯತೆಯಿದೆ ಎಂದು ವಿವರಿಸಿದರು.
ಕೆರೆಗೆ ಪ್ರತಿದಿನ ವಾಯುವಿಹಾರಕ್ಕೆ ಬರುವ ಪರಿಸರ ಕಾರ್ಯಕರ್ತ ಕೆ.ಸಿ. ಮಹೇಶ್ ಮಾತನಾಡಿ, “ಇದು ಸುದೀರ್ಘ ವಾರಾಂತ್ಯವಾಗಿರುವುದರಿಂದ ಅಧಿಕಾರಿಗಳು ಸ್ಥಳದಲ್ಲಿ ಇರುವುದಿಲ್ಲ ಎಂಬುದನ್ನು ದುರುಪಯೋಗಪಡಿಸಿಕೊಂಡು ಕೆಲವು ಅಕ್ರಮ ಕಟ್ಟಡ ನಿರ್ಮಾಣಕಾರರು ಕೆರೆಗೆ ಸಂಸ್ಕರಿಸದ ಒಳಚರಂಡಿ ನೀರನ್ನು ಹರಿಸಿರಬಹುದು ಎಂಬ ಅನುಮಾನವಿದೆ ಎಂದು ಹೇಳಿದ್ದಾರೆ.
ನಗರ ತಜ್ಞ ಡಾ. ಅಶ್ವಿನ್ ಮಹೇಶ್ ಅವರು ಈ ಘಟನೆಯನ್ನು ಇನ್ನಷ್ಟು ಆಳವಾದ ಆಡಳಿತ ವೈಫಲ್ಯದ ಪರಿಣಾಮ ಎಂದು ಹೇಳಿದ್ದಾರೆ.
ಈ ಹಿಂದೆ ಸ್ಥಳೀಯ ಸಮುದಾಯಗಳು ಉತ್ತಮವಾಗಿ ನಿರ್ವಹಿಸುತ್ತಿದ್ದ ಹಲವು ಕೆರೆಗಳ ಮೇಲಿನ ನಿಯಂತ್ರಣವನ್ನು ಬೆಂಗಳೂರು ಮಹಾನಗರ ಆಡಳಿತ ಪ್ರಾಧಿಕಾರ (GBA) ವಾಪಸ್ ಪಡೆದುಕೊಂಡಿದೆ ಎಂದು ತಿಳಿಸಿದ್ದಾರೆ.
ಸ್ಥಳೀಯ ಸಮುದಾಯಗಳು ಜಲಮೂಲಗಳನ್ನು ನೋಡಿಕೊಳ್ಳಲು ಆರಂಭಿಸಿದ ಬಳಿಕ ಹಲವು ಕೆರೆಗಳಿಗೆ ಪ್ರಾಣಿಗಳು ಮತ್ತು ಪಕ್ಷಿಗಳು ಮರಳಿದ್ದವು. ಆದರೆ, ಕೆರೆಗಳ ಮೇಲಿನ ನಿಯಂತ್ರಣವನ್ನು ವಾಪಸ್ ಪಡೆದ ಬಳಿಕ ಒಳಚರಂಡಿ ನೀರು ಹರಿಯುವಂತಹ ಸಮಸ್ಯೆಗಳು ಮತ್ತೆ ಕಾಣಿಸಿಕೊಂಡಿವೆ ಎಂದು ಹೇಳಿದ್ದಾರೆ.ಕೆರೆಗಳ ರಕ್ಷಣೆಗೆ ನಿಯೋಜಿಸಲಾಗಿರುವ ಭದ್ರತಾ ಸಿಬ್ಬಂದಿ ಕೂಡ ಹಲವು ಸಂದರ್ಭಗಳಲ್ಲಿ ಸ್ಥಳದಲ್ಲಿ ವಾಸ್ತವವಾಗಿ ಹಾಜರಿರುವುದಿಲ್ಲ ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



