ರೇಣುಕಾಸ್ವಾಮಿ ಹತ್ಯೆ ಕೇಸ್: ಕೋರ್ಟ್‌ನಲ್ಲಿ ಡಿ-ಗ್ಯಾಂಗ್ ರಹಸ್ಯ ಬಯಲು ಮಾಡಿದ ಮಾಫಿ ಸಾಕ್ಷಿ; ಸರೆಂಡರ್ ಆಗಲು ತಲಾ 10 ಲಕ್ಷ ಆಫರ್ ನೀಡಿದ್ದ ನಟ ದರ್ಶನ್!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಬದಲಾಗಿರುವ ಪ್ರಕರಣದ 14ನೇ ಆರೋಪಿ ಪ್ರದೋಷ್ ರಾವ್ ನ್ಯಾಯಾಲಯದ ಮುಂದೆ ನೀಡುತ್ತಿರುವ ತಪ್ಪೊಪ್ಪಿಗೆ ಹೇಳಿಕೆಗಳು ಡಿಗ್ಯಾಂಗ್ ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆ ಕುರಿತ ವರದಿ ಇಲ್ಲಿದೆ:

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿ ಬದಲಾಗಿರುವ ಪ್ರಕರಣದ 14ನೇ ಆರೋಪಿ ಪ್ರದೋಷ್ ರಾವ್ ನ್ಯಾಯಾಲಯದ ಮುಂದೆ ನೀಡುತ್ತಿರುವ ತಪ್ಪೊಪ್ಪಿಗೆ ಹೇಳಿಕೆಗಳು ಡಿಗ್ಯಾಂಗ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದರಂತೆ, ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ, "ರೇಣುಕಾಸ್ವಾಮಿ ಕೊಲೆ ಮುಚ್ಚಿಹಾಕಿ ಬೇರೆ ವ್ಯಕ್ತಿಗಳು ತಾವೇ ಕೊಲೆ ಮಾಡಿದ್ದೇವೆ ಎಂದು ಪೊಲೀಸರಿಗೆ ಶರಣಾಗುವಂತೆ ಮಾಡಲು ನಟ ದರ್ಶನ್ ಹಣದ ಆಮಿಷ ಒಡ್ಡಿದ್ದರು" ಎಂದು ಪ್ರದೋಷ್ ಹೇಳಿಕೆ ನೀಡಿದ್ದಾನೆ. ಆ ಕುರಿತ ವರದಿ ಇಲ್ಲಿದೆ:
ನಾನು ಶೂಟ್ ಮಾಡಿಕೊಂಡು ಸಾಯುತ್ತೇನೆ
ಪಟ್ಟಣಗೆರೆ ಶೆಡ್‌ನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಮೇಲೆ ತೀವ್ರ ಹಲ್ಲೆ ನಡೆದ ಬಳಿಕ, ಆತ ಸಾವನ್ನಪ್ಪಿದ್ದಾನೆ ಎಂಬ ವಿಚಾರವನ್ನು ಆರ್‌ಆರ್ ನಗರದಲ್ಲಿದ್ದ ದರ್ಶನ್ ನಿವಾಸಕ್ಕೆ ತೆರಳಿ ತಿಳಿಸಿದಾಗ ದರ್ಶನ್ ತೀವ್ರ ಆತಂಕಕ್ಕೆ ಒಳಗಾಗಿದ್ದರು. "ನಾನು ರಿವಾಲ್ವರ್‌ನಿಂದ ಶೂಟ್ ಮಾಡಿಕೊಂಡು ಸಾಯುತ್ತೇನೆ" ಎಂದು ದರ್ಶನ್ ಗಾಬರಿಗೊಂಡಿದ್ದರು ಎಂದು ವಿವರಿಸಿದ ಪ್ರದೋಷ್, ಕೊಲೆ ಆರೋಪವನ್ನು ತಮ್ಮ ತಲೆಗೆ ಹಾಕಿಕೊಂಡು ಪೊಲೀಸರಿಗೆ ಶರಣಾಗಲು ಹುಡುಗರಿಗೆ ಹಣ ನೀಡಲು ನಟ ದರ್ಶನ್ ಒಪ್ಪಿಕೊಂಡಿದ್ದರು ಎಂದು ತಿಳಿಸಿದ್ದಾನೆ. ಅದರಂತೆ, ಪಟ್ಟಣಗೆರೆ ಶೆಡ್‌ನಿಂದ ದರ್ಶನ್ ಮನೆಗೆ ಬಂದ ನಂತರ, ಆರೋಪಿ ವಿನಯ್ ಪೊಲೀಸರಿಗೆ ಶರಣಾಗಲು ಇಬ್ಬರನ್ನು ಒಪ್ಪಿಸಿರುವುದಾಗಿ ತಿಳಿಸಿದ್ದನು. ಅದಕ್ಕಾಗಿ ತಲಾ 5 ಲಕ್ಷ ರೂಪಾಯಿಯಂತೆ ಒಟ್ಟು 10 ಲಕ್ಷ ರೂಪಾಯಿಯನ್ನು ದರ್ಶನ್ ಖುದ್ದಾಗಿ ಬ್ಯಾಗ್‌ನಲ್ಲಿ ತಂದುಕೊಟ್ಟಿದ್ದರು. ಜೊತೆಗೆ ಚಿತ್ರದುರ್ಗದಿಂದ ರೇಣುಕಸ್ವಾಮಿಯನ್ನು ಕರೆತಂದಿದ್ದ ರಾಘವೇಂದ್ರನಿಗೂ 5 ಲಕ್ಷ ರೂಪಾಯಿ ನೀಡಲಾಗಿತ್ತು ಎಂದು ಮಾಫಿ ಸಾಕ್ಷಿ ಪ್ರದೋಷ್ ನ್ಯಾಯಾಲಯಕ್ಕೆ ತಿಳಿಸಿದ್ದಾನೆ.
ಮುಂದುವರೆದು, ಹಣ ಪಡೆದು ಹೊರಡುವ ಸಂದರ್ಭದಲ್ಲಿ ಸಹಾಯ ಮಾಡದಿದ್ದರೆ ತಾನು ನೇಣು ಹಾಕಿಕೊಂಡು ಪ್ರಾಣ ಕಳೆದುಕೊಳ್ಳುವುದಾಗಿ ದರ್ಶನ್ ಆತಂಕ ವ್ಯಕ್ತಪಡಿಸಿದ್ದರು. ನಂತರ ರೇಣುಕಾಸ್ವಾಮಿ ಮೃತದೇಹವನ್ನು ಬಿಸಾಡಲು ಸೂಕ್ತ ಜಾಗಕ್ಕಾಗಿ ಆರೋಪಿಗಳು ಕಾರಿನಲ್ಲಿ ಕೆಂಗೇರಿ, ನಾಯಂಡಹಳ್ಳಿ ಹಾಗೂ ನಾಗರಬಾವಿ ಮಾರ್ಗವಾಗಿ ಮಾಳಗಾಳ ಪ್ರದೇಶಕ್ಕೆ ತೆರಳಿದ್ದರು. ಅಲ್ಲಿ ನಿರ್ಜನ ಪ್ರದೇಶದಲ್ಲಿದ್ದ ದೊಡ್ಡ ಮೋರಿಯನ್ನು ಗುರುತಿಸಿ ವಾಪಸ್ ಶೆಡ್‌ಗೆ ಬಂದಿದ್ದರು.
ಅದರಂತೆ, ಶೆಡ್ ಬಳಿ ಸರೆಂಡರ್ ಆಗಲು ಕಾರ್ತಿಕ್ ಮತ್ತು ನಿಖಿಲ್ ಎಂಬ ಇಬ್ಬರು ಯುವಕರು ಬಂದಿದ್ದರು. ಅವರಿಗೆ ಹಣಕಾಸಿನ ವ್ಯವಹಾರದ ಸುಳ್ಳು ಕಥೆಯನ್ನು ಪೊಲೀಸರಿಗೆ ಹೇಳುವಂತೆ 13ನೇ ಆರೋಪಿ ದೀಪಕ್ ಸೂಚಿಸಿದ್ದನು. ರೇಣುಕಾಸ್ವಾಮಿ ಸಾಲ ಪಡೆದು ವಾಪಸ್ ನೀಡದ ಕಾರಣ ಗಲಾಟೆಯಾಗಿ ಮೃತಪಟ್ಟನೆಂದು ಬಿಂಬಿಸಲು ಯೋಜಿಸಲಾಗಿತ್ತು. ಕೊನೆಗೆ ಮಧ್ಯರಾತ್ರಿ ವೇಳೆ ಮೃತದೇಹವನ್ನು ಕಾರಿನಲ್ಲಿ ಕೊಂಡೊಯ್ದು ಮೋರಿಗೆ ಎಸೆದು ಬರಲಾಗಿತ್ತು ಎಂದು ಪ್ರದೋಷ್ ಕೋರ್ಟ್ ಮುಂದೆ ವಿವರಿಸಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



