ಸಕ್ರೆಬೈಲು: ಇಬ್ಬರನ್ನು ಬಲಿ ಪಡೆದಿದ್ದ ಕಾಡಾನೆ 'ಶೌರ್ಯ' ಸಾವು
ಸಕ್ರೆಬೈಲು ಆನೆ ಬಿಡಾರಕ್ಕೆ ಕರೆತಂದ ನಂತರ ಇಲ್ಲಿನ ಕ್ರಾಲ್ ನಲ್ಲಿಟ್ಟು ಪಳಗಿಸುವ ಕಾರ್ಯ ನಡೆಸಲಾಗುತ್ತಿತ್ತು. ಆದರೆ, ಪಳಗಿಸುವ ವೇಳೆ ಆನೆಯು ಅನಾರೋಗ್ಯದಿಂದ ಬಳಲುತ್ತಿತ್ತು. ಬಿಡಾರದ ವೈದ್ಯರಾದ ಡಾ. ಮುರುಳಿ ಅವರು ಆನೆಗೆ ಚಿಕಿತ್ಸೆ ನೀಡುತ್ತಿದ್ಧರು

ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದ 32 ವರ್ಷದ ಶೌರ್ಯ ಹೆಸರಿನ ಗಂಡಾನೆ ಅನಾರೋಗ್ಯದಿಂದ ಸಾವನ್ನಪ್ಪಿದೆ. ಆನೆಯನ್ನು ಫೆಬ್ರುವರಿ ತಿಂಗಳಲ್ಲಿ ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರಿನಲ್ಲಿ ಹಿಡಿದು ತರಲಾಗಿತ್ತು.
ಆ ಭಾಗದಲ್ಲಿ ಸ್ಥಳೀಯರ ಜನರಿಗೆ ಉಪಟಳ ನೀಡಲಾಗುತ್ತಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಶೌರ್ಯ ಆನೆಯನ್ನು ಸೆರೆ ಹಿಡಿದು ಇಲ್ಲಿಗೆ ತರಲಾಗಿತ್ತು.
ಸಕ್ರೆಬೈಲು ಆನೆ ಬಿಡಾರಕ್ಕೆ ಕರೆತಂದ ನಂತರ ಇಲ್ಲಿನ ಕ್ರಾಲ್ ನಲ್ಲಿಟ್ಟು ಪಳಗಿಸುವ ಕಾರ್ಯ ನಡೆಸಲಾಗುತ್ತಿತ್ತು. ಆದರೆ, ಪಳಗಿಸುವ ವೇಳೆ ಆನೆಯು ಅನಾರೋಗ್ಯದಿಂದ ಬಳಲುತ್ತಿತ್ತು. ಬಿಡಾರದ ವೈದ್ಯರಾದ ಡಾ. ಮುರುಳಿ ಅವರು ಆನೆಗೆ ಚಿಕಿತ್ಸೆ ನೀಡುತ್ತಿದ್ಧರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಾವನ್ನಪ್ಪಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬಿಡಾರದ ಆನೆಗಳ ಸಂಖ್ಯೆ 23ಕ್ಕೆ ಇಳಿಕೆ: ಆನೆಯು ಬಿಡಾರಕ್ಕೆ ಕರೆತಂದಾಗ ಆರೋಗ್ಯದಿಂದ ಗಟ್ಟಿಮುಟ್ಟಾಗಿತ್ತು. ಆದರೆ, ಪಳಗಿಸುವ ವೇಳೆ ಮಾಡಿದ ಸಣ್ಣ ಗಾಯದಿಂದ ಅನಾರೋಗ್ಯಕ್ಕೆ ತುತ್ತಾಗಿತ್ತು. ಫೆಬ್ರವರಿ ತಿಂಗಳಿನಲ್ಲಿಯೇ ಬಿಡಾರಕ್ಕೆ ಕರೆ ತರಲಾಗಿತ್ತು.
ಇಲ್ಲಿನ ಮಾವುತರು ಕೇವಲ ಮೂರು ತಿಂಗಳಲ್ಲಿ ಪಳಗಿಸಿ ಕ್ರಾಲ್ನಿಂದ (ಕಾಡಿನಿಂದ ಸೆರೆಹಿಡಿಯಲಾದ ಆನೆಗಳನ್ನು ಕಟ್ಟಿಹಾಕಲು, ಆರೈಕೆ ಮಾಡಲು ಮತ್ತು ತರಬೇತಿ ನೀಡಲು ನಿರ್ಮಿಸಲಾದ ವಿಶೇಷವಾದ ಸ್ಥಳ) ಹೊರ ತಂದು ಬಾಲಣ್ಣ ಹೆಸರಿನ ಆನೆಯ ಜೊತೆ ಬಿಟ್ಟಿದ್ದರು. ಆದರೆ, ಆನೆಯು ತೀವ್ರ ಅನಾರೋಗ್ಯದಿಂದ ಸಾವನ್ನಪ್ಪಿದೆ. ಶೌರ್ಯ ಆನೆ ಸಾವಿನಿಂದ ಬಿಡಾರದ ಆನೆಗಳ ಸಂಖ್ಯೆ 23ಕ್ಕೆ ಇಳಿದಿದೆ.
ಅರಣ್ಯ ಅಧಿಕಾರಿಗಳ ಪ್ರತಿಕ್ರಿಯೆ: ಶೌರ್ಯ ಆನೆ ಮೃತಪಟ್ಟಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ವನ್ಯಜೀವಿ ವಿಭಾಗದ ಡಿಎಫ್‌ಒ ಪ್ರಸನ್ನ ಪಟಗಾರ್, ಕ್ರಾಲ್‌ನಲ್ಲಿದ್ದ ಆನೆ ನಿನ್ನೆ ಬೆಳಿಗ್ಗೆ 8:00 ಗಂಟೆಗೆ ಸಾವನಪ್ಪಿದೆ. ಇದ್ದಕ್ಕಿದ್ದಂತೆ ಆನೆ ಕುಸಿದುಬಿದ್ದಿತ್ತು.
ಗ್ಲುಕೋಸ್ ನೀಡಿ ಎಬ್ಬಿಸಲು ಯತ್ನಿಸಿದರೂ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಕ್ರಾಲ್‌ನಲ್ಲಿ ಯಾವಾಗಲೂ ಅಗ್ರೆಸಿವ್ ಆಗಿರುತ್ತಿತ್ತು. ಹೊರಬರಲು ಯತ್ನಿಸಿ ಮರಗಳಿಗೆ ಡಿಕ್ಕಿ ಹೊಡೆದು ಕಾಲಿಗೆ ಗಾಯ ಮಾಡಿಕೊಂಡಿತ್ತು. ತೊಡೆಯ ಭಾಗದಲ್ಲಿ ತೀವ್ರ ಗಾಯ ಆಗಿತ್ತು. ನಿರಂತರವಾಗಿ ಚಿಕಿತ್ಸೆ ನೀಡಲಾಗಿತ್ತು. ಬ್ಯಾಕ್ಟೀರಿಯಾ ಸೋಂಕಿನಿಂದ ಟಾಕ್ಸೇಮಿಯಾ ಮತ್ತು ಸೆಪ್ಟಿಕ್ ಶಾಕ್ ಉಂಟಾಗಿ ಸಾವು ಸಂಭವಿಸಿರುವ ಶಂಕೆ ಇದೆ ಎಂದು ತಿಳಿಸಿದ್ದಾರೆ.
ಬಾಳೆಹೊನ್ನೂರು ಭಾಗದಲ್ಲಿ ಇಬ್ಬರು ಕಾರ್ಮಿಕರನ್ನು ಈ ಆನೆ ಬಲಿ ಪಡೆದಿತ್ತು. 2026ರ ಫೆಬ್ರವರಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಭಾಗದಲ್ಲಿ ನಡೆದ ಕಾಡಾನೆ ದಾಳಿಗಳ ಬಳಿಕ ಶೌರ್ಯ ಆನೆಯನ್ನು ಸೆರೆಹಿಡಿಯಲಾಗಿತ್ತು. ಬಳಿಕ ಸಕ್ರೆಬೈಲು ಆನೆ ಬಿಡಾರಕ್ಕೆ ತಂದು ಪಳಗಿಸಲಾಗಿತ್ತು. ಸೆರೆ ಕಾರ್ಯಾಚರಣೆ ಹಾಗೂ ತರಬೇತಿ ವೇಳೆ ಆನೆ ಗಾಯಗೊಂಡಿತ್ತು ಎಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



