ಖಾನಾಪುರ ಹೆದ್ದಾರಿ ದರೋಡೆ ಪ್ರಕರಣಕ್ಕೆ ಟ್ವಿಸ್ಟ್: ಸ್ನೇಹಿತನ ದೋಚಿ ಸುಳ್ಳು ಕಥೆ ಕಟ್ಟಿದ ಕಿರಾತಕರು: ಮಾಸ್ಟರ್‌ಮೈಂಡ್ ಸೇರಿ 8 ಮಂದಿ ಅರೆಸ್ಟ್..!
ಪಶ್ಚಿಮ ಬಂಗಾಳ ಮೂಲದ ಹಾಗೂ ಬೆಳಗಾವಿಯ ಶಾಹಾಪುರದಲ್ಲಿ ವಾಸವಾಗಿರುವ ಚಿನ್ನಾಭರಣ ಕಾರಿಗರ ಎಸ್.ಕೆ. ಇಬಾದುಲ್ ಅವರು ಮೇ 20ರಂದು ತಮ್ಮ ಸ್ನೇಹಿತರಾದ ರಬಿಯುಲ್ ಗಾಜಿ ಮತ್ತು ಅಲಿ ಹುಸೇನ್ ಮಂಡಲ್ ಅವರೊಂದಿಗೆ ಗೋವಾಗೆ ತೆರಳುತ್ತಿದ್ದರು.

ಬೆಳಗಾವಿ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿ ನಡೆದಿದ್ದ ಹೈವೇ ದರೋಡೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ರಬಿಯುಲ್ ಘಾಜಿ, ಅಲಿ ಹುಸೇನ್ ಮಂಡಲ್, ಸಾದಿಕ್ ಟೋರ್ಗಲ್, ವಿವೇಕ್ ಪಾಟೀಲ್, ಪ್ರಶಾಂತ್ ಚವಾಣ್, ನಿತಿನ್ ಚವಾಣ್, ದಿಗಂಬರ್ ಪಾಟೀಲ್ ಮತ್ತು ಮಯೂರ್ ಘಾಡಿ ಎಂದು ಗುರ್ತಿಸಲಾಗಿದೆ.
ಪಶ್ಚಿಮ ಬಂಗಾಳ ಮೂಲದ ಹಾಗೂ ಬೆಳಗಾವಿಯ ಶಾಹಾಪುರದಲ್ಲಿ ವಾಸವಾಗಿರುವ ಚಿನ್ನಾಭರಣ ಕಾರಿಗರ ಎಸ್.ಕೆ. ಇಬಾದುಲ್ ಅವರು ಮೇ 20ರಂದು ತಮ್ಮ ಸ್ನೇಹಿತರಾದ ರಬಿಯುಲ್ ಗಾಜಿ ಮತ್ತು ಅಲಿ ಹುಸೇನ್ ಮಂಡಲ್ ಅವರೊಂದಿಗೆ ಗೋವಾಗೆ ತೆರಳುತ್ತಿದ್ದರು.
ಖಾನಾಪುರ ತಾಲ್ಲೂಕಿನ ಉಚವಾಡೆ ಗ್ರಾಮದ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-748ರ ಬೈಲೂರು ಕ್ರಾಸ್ ಸಮೀಪ ಅವರ ವಾಹನವನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ದರೋಡೆ ನಡೆಸಿದ್ದರು.
ಆರೋಪಿಗಳು ವಾಹನದಲ್ಲಿದ್ದವರನ್ನು ಸಮೀಪದ ಜಮೀನಿಗೆ ಎಳೆದುಕೊಂಡು ಹೋಗಿ ದೇಶೀ ಪಿಸ್ತೂಲ್ ಮತ್ತು ಚಾಕು ತೋರಿಸಿ ಬೆದರಿಕೆ ಹಾಕಿದ್ದರು. ಬಳಿಕ 1,00,200 ರೂಪಾಯಿ ನಗದು ಹಾಗೂ ರಬಿಯುಲ್ ಬಳಿ ಇದ್ದ ಸುಮಾರು 225 ಗ್ರಾಂ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡ ಖಾನಾಪುರ ಪೊಲೀಸರು ತನಿಖೆ ಆರಂಭಿಸಿದಾಗ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ದರೋಡೆಗೆ ಒಳಗಾದವರಂತೆ ಕಾಣಿಸಿಕೊಂಡಿದ್ದ ರಬಿಯುಲ್ ಗಾಜಿ ಮತ್ತು ಅಲಿ ಹುಸೇನ್ ಮಂಡಲ್ ಅವರೇ ಈ ಕೃತ್ಯದ ಪ್ರಮುಖ ಸಂಚುಕೋರರು ಎಂಬುದು ಗೊತ್ತಾಗಿದೆ.
ಸಾಲದ ಹೊರೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಈ ಇಬ್ಬರು ಆರೋಪಿಗಳು, ತಮ್ಮ ಸ್ನೇಹಿತ ಇಬಾದುಲ್ ಆರ್ಥಿಕವಾಗಿ ಸದೃಢರಾಗಿರುವುದನ್ನು ತಿಳಿದುಕೊಂಡಿದ್ದರು. ಇದೇ ಕಾರಣಕ್ಕೆ ಶಾಹಾಪುರದ ಮತ್ತೊಬ್ಬ ವ್ಯಕ್ತಿಯೊಂದಿಗೆ ಸೇರಿ ದರೋಡೆ ಸಂಚು ರೂಪಿಸಿದ್ದರು.
ದರೋಡೆ ನಡೆಸಲು ಮತ್ತೊಬ್ಬ ಆರೋಪಿಗೆ 3 ಲಕ್ಷ ರೂಪಾಯಿ ಸುಪಾರಿ ನೀಡಲಾಗಿದ್ದು, ಆತ ತನ್ನ ಸಹಚರರ ತಂಡವನ್ನು ಕಟ್ಟಿಕೊಂಡು ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಆರೋಪಿಗಳಿಂದ ಎರಡು ಕಾರುಗಳು, 1,00,200 ರೂಪಾಯಿ ನಗದು, ದೇಶೀ ಪಿಸ್ತೂಲ್, ಚಾಕು, ಎಂಟು ಮೊಬೈಲ್ ಫೋನ್‌ಗಳು ಹಾಗೂ ಒಂದು ಬೈಕ್ ಸೇರಿದಂತೆ ಒಟ್ಟು ಸುಮಾರು 40 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



