ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ
ಇಂದು ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಕಚೇರಿ ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಯ್ತು. ಸಿಎಂ ಸಿದ್ದರಾಮಯ್ಯ ಅವರು ಸಂಜೆ ಜಾತಿಗಣತಿ ವರದಿ ಸ್ವೀಕರಿಸಲು ವಿಧಾನಸೌಧಕ್ಕೆ ಆಗಮಿಸಿದ್ದರು.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ಗುರುವಾರ ರಾಜೀನಾಮೆ ನೀಡುತ್ತಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ನಿರಂತವಾಗಿ ಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಸಿಎಂ ಕಛೇರಿ ಸಿಬ್ಬಂದಿ ಕಣ್ಣೀರು ಹಾಕಿದರು.
ಇಂದು ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಗಳ ಕಚೇರಿ ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಯ್ತು. ಸಿಎಂ ಸಿದ್ದರಾಮಯ್ಯ ಅವರು ಸಂಜೆ ಜಾತಿಗಣತಿ ವರದಿ ಸ್ವೀಕರಿಸಲು ವಿಧಾನಸೌಧಕ್ಕೆ ಆಗಮಿಸಿದ್ದರು. ಈ ವೇಳೆ ಮುಖ್ಯಮಂತ್ರಿ ಕಚೇರಿಯ ನೌಕರರು ಹಾಗೂ ಪ್ರಮುಖವಾಗಿ ಗುತ್ತಿಗೆ ಆಧಾರದ ಸಿಬ್ಬಂದಿ ಸಿದ್ದರಾಮಯ್ಯ ಅವರನ್ನು ನೋಡಿ ತಡೆಯಲಾರದೆ ಕಣ್ಣೀರು ಹಾಕಲು ಆರಂಭಿಸಿದರು.
ಸರ್, ನೀವು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬೇಡಿ ಪ್ಲೀಸ್..." ಎಂದು ಸಿಬ್ಬಂದಿ ಕಣ್ಣೀರಿಡುತ್ತಾ ಮುಖ್ಯಮಂತ್ರಿಗಳ ಮುಂದೆ ಕೈಮುಗಿದು ಬೇಡಿಕೊಂಡರು. ಸಿಬ್ಬಂದಿಯ ಈ ಭಾವುಕತೆಯನ್ನು ಕಂಡು ಕೊಂಚ ಭಾವುಕರಾದ ಸಿಎಂ ಸಿದ್ದರಾಮಯ್ಯ, ತಕ್ಷಣವೇ ತಮ್ಮ ವಿಶಿಷ್ಟ ಶೈಲಿಯ ಕೈಸನ್ನೆಯ ಮೂಲಕವೇ ಸಮಾಧಾನಪಡಿಸಿ, ಧೈರ್ಯ ತುಂಬಿ ಮುಂದೆ ಸಾಗಿದರು. ಸಿಎಂ ಕಚೇರಿ ಇತಿಹಾಸದಲ್ಲಿ ಇಂತಹದ್ದೊಂದು ಭಾವುಕ ನಡೆ ಕಂಡುಬಂದಿರುವುದು ಇದೇ ಮೊದಲು ಎನ್ನಲಾಗಿದೆ.
ಬೆಂಬಲಿಗರಿಂದ ಪ್ರತಿಭಟನೆಗೆ
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿ ಬಳಿ ಜಮಾಯಿಸಿ ಸಿದ್ದರಾಮಯ್ಯ ಅವರು ಬೆಂಬಲಿಗರು ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಪ್ರತಿಭಟನೆ ನಡೆಸಿದರು.
ಸಿಎಂ ಅಧಿಕೃತ ನಿವಾಸ ಕಾವೇರಿಯ ಹೊರಗೆ ನಿಯೋಜಿಸಲಾಗಿದ್ದ ಪೊಲೀಸರು ಪ್ರತಿಭಟನಾಕಾರರನ್ನು ಬಸ್‌ಗಳಲ್ಲಿ ಕರೆದೊಯ್ದರು. ಈ ವೇಳೆ ಬೆಂಬಲಿಗರು ಸಿದ್ದರಾಮಯ್ಯ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದರು.
ಪೊಲೀಸ್ ವ್ಯಾನ್‌ನಲ್ಲಿ ಕರೆದೊಯ್ಯಲ್ಪಟ್ಟ ಬೆಂಬಲಿಗರಲ್ಲಿ ಒಬ್ಬರು, ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗಿಳಿದರೆ, ರಾಜ್ಯದಲ್ಲಿ ಕಾಂಗ್ರೆಸ್ ಭಾರಿ ಹಿನ್ನಡೆ ಎದುರಿಸಬೇಕಾಗುತ್ತದೆ ಎಂದು ವರದಿಗಾರರಿಗೆ ತಿಳಿಸಿದರು.
ಕರ್ನಾಟಕದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಮತ್ತು ಅವರ ಅಹಿಂದ(ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಮತ್ತು ದಲಿತ) ಬೆಂಬಲವೇ ಕಾರಣ ಎಂದು ಒತ್ತಿ ಹೇಳಿದ ಅವರು, ಈ ಬಿಕ್ಕಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಕಾರಣ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಬದಲಾವಣೆಯ ಕ್ರಮದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನಾಕಾರರು, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಘೋಷಣೆಗಳನ್ನು ಕೂಗಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



