'ಮಾಧ್ಯಮಗಳ ನಿರ್ಬಂಧ ಸಂವಿಧಾನಬಾಹಿರ': ವೈಟ್ ಹೌಸ್ ಮಾಧ್ಯಮ ನಿಷೇಧಕ್ಕೆ ಕೋರ್ಟ್ ತಡೆ; ಟ್ರಂಪ್ ಆಡಳಿತಕ್ಕೆ ಮುಖಭಂಗ..!
ಪ್ರಕರಣದ ಅಂತಿಮ ವಿಚಾರಣೆಯಲ್ಲಿ ತಮ್ಮ ಪರ ತೀರ್ಪು ಬರುವ ಸಾಧ್ಯತೆ ಇದೆ ಮತ್ತು ನ್ಯಾಯಾಲಯದ ತಕ್ಷಣದ ಮಧ್ಯಪ್ರವೇಶವಿಲ್ಲದಿದ್ದರೆ ಸರಿಪಡಿಸಲಾಗದ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂಬುದನ್ನು ಅರ್ಜಿದಾರರು ಸಾಬೀತುಪಡಿಸಿದ್ದಾರೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ವಾಷಿಂಗ್ಟನ್: ಮೂರು ಪ್ರಮುಖ ಸುದ್ದಿ ಸಂಸ್ಥೆಗಳ ಮೇಲೆ ಟ್ರಂಪ್ ಆಡಳಿತ ಹೇರಿದ್ದ ನಿರ್ಬಂಧಕ್ಕೆ ಅಮೆರಿಕಾ ಫೆಡರಲ್ ಕೋರ್ಟ್ ತಡೆಯಾಜ್ಞೆ ನೀಡಿದೆ.
ಸಿಎನ್‌ಎನ್ (CNN), ಎಂಎಸ್ ನೌ (MS NOW) ಮತ್ತು ಪೊಲಿಟಿಕೊ (Politico) ಸಂಸ್ಥೆಗಳಿಗೆ ಶ್ವೇತಭವನದ ಪ್ರವೇಶವನ್ನು ಮರುಸ್ಥಾಪಿಸುವಂತೆ ಫೆಡರಲ್ ನ್ಯಾಯಾಧೀಶರು ಆದೇಶಿಸಿದ್ದಾರೆ.
ಟ್ರಂಪ್ ಹಾಗೂ ತಮಗೆ ಇಷ್ಟವಿಲ್ಲದ ವರದಿಗಳನ್ನು ಪ್ರಕಟಿಸುವ ಮಾಧ್ಯಮ ಸಂಸ್ಥೆಗಳ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ.
ಸೆಪ್ಟೆಂಬರ್ 18ರಂದು ಟ್ರಂಪ್ ಈ ಮೂರು ಮಾಧ್ಯಮ ಸಂಸ್ಥೆಗಳನ್ನು ಶ್ವೇತಭವನದಿಂದ ನಿರ್ಬಂಧಿಸುವುದಾಗಿ ಘೋಷಿಸಿದ್ದರು. ಈ ಮಾಧ್ಯಮಗಳ ವರದಿಗಳನ್ನು ‘ಸುಳ್ಳು ಸುದ್ದಿ’ ಎಂದು ಟೀಕಿಸಿದ್ದ ಅವರು, ಇತ್ತೀಚೆಗೆ ತಮ್ಮ ವಿರುದ್ಧದ ನಕಾರಾತ್ಮಕ ವರದಿಗಳು ದೇಶಕ್ಕೆ ಅಪಾಯಕಾರಿ ಎಂದು ಹೇಳಿದ್ದರು.
ಮಾಧ್ಯಮ ಸಂಸ್ಥೆಗಳು ತಮ್ಮ ವರದಿಗಳ ವಿಷಯದ ಆಧಾರದ ಮೇಲೆ ತಮ್ಮನ್ನು ಗುರಿಯಾಗಿಸಲಾಗಿದೆ ಎಂದು ವಾದಿಸಿವೆ.
ಇದು ಅಮೆರಿಕ ಸಂವಿಧಾನದ ಮೊದಲ ತಿದ್ದುಪಡಿಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ, ಶ್ವೇತಭವನದ ನಿರ್ಬಂಧವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದವು.
ಗುರುವಾರ ಮಧ್ಯರಾತ್ರಿಯ ನಂತರ ಹೊರಡಿಸಿದ ಆದೇಶದಲ್ಲಿ ಅಮೆರಿಕ ಜಿಲ್ಲಾ ನ್ಯಾಯಾಧೀಶ ಟಿಮೊಥಿ ಕೆಲ್ಲಿ, ಮಾಧ್ಯಮ ಸಂಸ್ಥೆಗಳು ತಾತ್ಕಾಲಿಕ ನಿರ್ಬಂಧಾಜ್ಞೆ ಪಡೆಯಲು ಅಗತ್ಯವಿರುವ ಕಾನೂನು ಮಾನದಂಡಗಳನ್ನು ಪೂರೈಸಿವೆ ಎಂದು ಹೇಳಿದ್ದಾರೆ.
ಪ್ರಕರಣದ ಅಂತಿಮ ವಿಚಾರಣೆಯಲ್ಲಿ ತಮ್ಮ ಪರ ತೀರ್ಪು ಬರುವ ಸಾಧ್ಯತೆ ಇದೆ ಮತ್ತು ನ್ಯಾಯಾಲಯದ ತಕ್ಷಣದ ಮಧ್ಯಪ್ರವೇಶವಿಲ್ಲದಿದ್ದರೆ ಸರಿಪಡಿಸಲಾಗದ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂಬುದನ್ನು ಅರ್ಜಿದಾರರು ಸಾಬೀತುಪಡಿಸಿದ್ದಾರೆ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. “ಇದು ಕಠಿಣ ಮಾನದಂಡವಾಗಿದ್ದರೂ, ಅರ್ಜಿದಾರರು ಅದನ್ನು ಪೂರೈಸಿದ್ದಾರೆ” ಎಂದು ಆದೇಶದಲ್ಲಿ ಹೇಳಿದ್ದಾರೆ.
ಟ್ರಂಪ್ ಅವರು 2017ರಲ್ಲಿ ನ್ಯಾಯಾಧೀಶ ಕೆಲ್ಲಿಯನ್ನು ನೇಮಕ ಮಾಡಿದ್ದರು. 2018ರಲ್ಲಿ ಇದೇ ರೀತಿಯ ಪ್ರಕರಣದಲ್ಲಿ ಸಿಎನ್‌ಎನ್ ಪತ್ರಕರ್ತರೊಬ್ಬರಿಗೆ ಶ್ವೇತಭವನದ ಪ್ರವೇಶವನ್ನು ಮರುಸ್ಥಾಪಿಸುವಂತೆ ಕೆಲ್ಲಿ ಆದೇಶಿಸಿದ್ದರು.
ಬುಧವಾರ ಪ್ರಕರಣದ ವಿಚಾರಣೆ ನಡೆಸಿದ್ದ ಕೆಲ್ಲಿ, ಯಾವುದೇ ತೀರ್ಪು ನೀಡದೆ ವಿಚಾರಣೆಯನ್ನು ಮುಕ್ತಾಯಗೊಳಿಸಿದ್ದರು. ಇದೀಗ ಗುರುವಾರ ಅವರು 14 ದಿನಗಳ ಕಾಲ ಜಾರಿಯಲ್ಲಿರುವ ತಾತ್ಕಾಲಿಕ ನಿರ್ಬಂಧಾಜ್ಞೆ ಹೊರಡಿಸಿದ್ದಾರೆ. ಪ್ರಕರಣದ ಕುರಿತು ಮತ್ತಷ್ಟು ಪರಿಶೀಲನೆ ನಡೆಸುವವರೆಗೆ ಈಗಿರುವ ಪರಿಸ್ಥಿತಿಯನ್ನು ಮುಂದುವರಿಸುವುದು ಇಂತಹ ಆದೇಶಗಳ ಉದ್ದೇಶವಾಗಿದೆ.
ವಿಚಾರಣೆ ವೇಳೆ, ಮಾಧ್ಯಮ ಸಂಸ್ಥೆಗಳ ಪ್ರವೇಶ ನಿರ್ಬಂಧಿಸುವ ಮುನ್ನ ಟ್ರಂಪ್ ಆಡಳಿತವು ಕಾನೂನುಬದ್ಧ ಜವಾಬ್ದಾರಿಗಳನ್ನು ಪೂರೈಸಿತೇ ಮತ್ತು ಸಿಎನ್‌ಎನ್, ಎಂಎಸ್ ನೌ ಹಾಗೂ ಪೊಲಿಟಿಕೊಗೆ ಸಮರ್ಪಕ ಅವಕಾಶ ನೀಡಿತೇ ಎಂಬುದರ ಕುರಿತು ನ್ಯಾಯಾಧೀಶರು ಪ್ರಶ್ನೆಗಳನ್ನು ಕೇಳಿದ್ದರು.
ಮಾಧ್ಯಮ ಪ್ರವೇಶಕ್ಕೆ ಸಂಬಂಧಿಸಿದ ಹಿಂದಿನ ಎರಡು ಪ್ರಕರಣಗಳ ತೀರ್ಪುಗಳು, ಅವುಗಳಲ್ಲಿ ಒಂದು ಅಮೆರಿಕ ಸುಪ್ರೀಂ ಕೋರ್ಟ್‌ವರೆಗೂ ಹೋಗಿದ್ದ ಪ್ರಕರಣವೂ ಸೇರಿದ್ದು, ಪತ್ರಕರ್ತರ ಪತ್ರಿಕಾ ಪ್ರವೇಶ ಹಕ್ಕು ರದ್ದುಗೊಳಿಸುವ ಮುನ್ನ ಅವರಿಗೆ ತಮ್ಮ ವಾದ ಮಂಡಿಸಲು ಅವಕಾಶ ನೀಡಬೇಕು ಎಂದು ಸ್ಪಷ್ಟಪಡಿಸಿವೆ.
ಆದರೆ, ಹಿಂದಿನ ಪ್ರಕರಣಗಳಲ್ಲಿನ ತೀರ್ಪುಗಳು ತಪ್ಪಾಗಿವೆ ಎಂದು ಅಮೆರಿಕ ನ್ಯಾಯಾಂಗ ಇಲಾಖೆಯ ಪರ ವಕೀಲ ಮೈಕೆಲ್ ವೆಲ್ಚಿಕ್ ವಾದಿಸಿದರು.
ಈ ವಾದದ ನಡುವೆಯೂ, ತೀರ್ಪು ನೀಡುವಾಗ ಹಿಂದಿನ ಇದೇ ರೀತಿಯ ಸಂವಿಧಾನದ ಮೊದಲ ತಿದ್ದುಪಡಿ ಪ್ರಕರಣಗಳ ನ್ಯಾಯಾಲಯದ ತೀರ್ಪುಗಳನ್ನು ಪರಿಗಣಿಸುವುದಾಗಿ ನ್ಯಾಯಾಧೀಶ ಕೆಲ್ಲಿ ಸ್ಪಷ್ಟಪಡಿಸಿದ್ದಾರೆ. ಸರ್ಕಾರ ಆ ಹಿಂದಿನ ತೀರ್ಪುಗಳನ್ನು ಒಪ್ಪದಿದ್ದರೂ ಅವು ತಮ್ಮ ನಿರ್ಧಾರಕ್ಕೆ ಮಾರ್ಗದರ್ಶನ ನೀಡಲಿವೆ ಎಂದು ಅವರು ಹೇಳಿದ್ದಾರೆ.
ಕಳೆದ ಸೆಪ್ಟೆಂಬರ್ 18 ರಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ರುತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿ, ಈ ಮೂರು ಮಾಧ್ಯಮಗಳು ಸುಳ್ಳು ಸುದ್ದಿ (Fake News) ಪ್ರಸಾರ ಮಾಡುತ್ತಿವೆ ಎಂದು ಆರೋಪಿಸಿ ತಕ್ಷಣದಿಂದ ಜಾರಿಗೆ ಬರುವಂತೆ ನಿರ್ಬಂಧ ಹೇರಿದ್ದರು.
ಮರುದಿನವೇ ಪತ್ರಕರ್ತರ ಪ್ರವೇಶ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿತ್ತು. ಇದರ ವಿರುದ್ಧ ಸುದ್ದಿ ಸಂಸ್ಥೆಗಳು ಜಂಟಿಯಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದವು. ನ್ಯಾಯಾಂಗ ಇಲಾಖೆಯು ವೈಟ್ ಹೌಸ್ ಪ್ರವೇಶವು ಕೇವಲ ಒಂದು ಸವಲತ್ತು ಎಂದು ವಾದಿಸಿದರೂ, ಕೋರ್ಟ್ ಆ ವಾದವನ್ನು ತಳ್ಳಿಹಾಕಿ ಮಾಧ್ಯಮದ ಸ್ವಾತಂತ್ರ್ಯವನ್ನು ಎತ್ತಿಹಿಡಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



