ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ತಿರಸ್ಕಾರ: 'ಸುಪ್ರೀಂ' ತೀರ್ಪು ಸ್ವಾಗತಿಸಿದ ಡಿ.ಕೆ ಶಿವಕುಮಾರ್
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ಮೂವರು ಸದಸ್ಯರ ಪೀಠ ತಿರಸ್ಕರಿಸಿದೆ

ಬೆಂಗಳೂರು: ಕಾವೇರಿ ನದಿಯ ಮೇಲಿನ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿರುವ ತೀರ್ಪನ್ನು ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮಂಗಳವಾರ ಸ್ವಾಗತಿಸಿದರು.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, 'ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ಮೂವರು ಸದಸ್ಯರ ಪೀಠ ತಿರಸ್ಕರಿಸಿದೆ. ಇದು ಕರ್ನಾಟಕಕ್ಕೆ ಒಳ್ಳೆಯ ಸುದ್ದಿ. ಕರ್ನಾಟಕದ ಜನರ ಪರವಾಗಿ ನಾವು ಸುಪ್ರೀಂ ಕೋರ್ಟ್‌ಗೆ ಕೃತಜ್ಞತೆ ಸಲ್ಲಿಸುತ್ತೇವೆ' ಎಂದರು.
'ತಮಿಳುನಾಡಿಗೆ ಸೇರಿದ 177 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕು ಎಂಬ ಷರತ್ತಿನೊಂದಿಗೆ ಸುಪ್ರೀಂ ಕೋರ್ಟ್ ತನ್ನ ಹಿಂದಿನ ಆದೇಶದಲ್ಲೇ ನಮಗೆ ಸ್ಪಷ್ಟ ಸೂಚನೆ ನೀಡಿತ್ತು. ಈಗ ಈ ಯೋಜನೆಗೆ ಸಂಬಂಧಿಸಿದ ಅಂತಿಮ ನಿರ್ಧಾರ ಕೈಗೊಳ್ಳುವುದು ಕೇಂದ್ರ ಸರ್ಕಾರದ ಹೊಣೆ. ನಾವು ಪರಿಷ್ಕೃತ DPR ಸಲ್ಲಿಸುವ ಪ್ರಕ್ರಿಯೆಯಲ್ಲಿದ್ದೇವೆ. ಯೋಜನೆಗೆ ಸಂಬಂಧಿಸಿದ ಪರಿಷ್ಕೃತ ವಿವರವಾದ ಯೋಜನಾ ವರದಿ (DPR) ಸಲ್ಲಿಸುವ ಪ್ರಕ್ರಿಯೆಯಲ್ಲಿ ರಾಜ್ಯ ಈಗಾಗಲೇ ತೊಡಗಿದೆ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಕೆ ಶಿವಕುಮಾರ್ ಹೇಳಿದ್ದಾರೆ ಎಂದು ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
2025ರ ನವೆಂಬರ್ ತೀರ್ಪಿನ ವಿರುದ್ಧ ತಮಿಳುನಾಡು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಆ ತೀರ್ಪಿನಲ್ಲಿ ಕರ್ನಾಟಕದ ಪ್ರಸ್ತಾವಿತ ಮೇಕೆದಾಟು ಯೋಜನೆ ವಿರುದ್ಧದ ಅರ್ಜಿಯನ್ನು ಪರಿಗಣಿಸಲು ನ್ಯಾಯಾಲಯ ನಿರಾಕರಿಸಿತ್ತು.
ಕಾವೇರಿ ನದಿಯ ಮೇಲಿನ ಮೇಕೆದಾಟು ಯೋಜನೆ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನವೆಂಬರ್‌ನಲ್ಲಿ "ಅಕಾಲಿಕ" ಎಂದು ಹೇಳಿ ತಿರಸ್ಕರಿಸಿತ್ತು. ಆ ವೇಳೆ, ರಾಜ್ಯದ ಆಕ್ಷೇಪಣೆಗಳು ಹಾಗೂ ತಜ್ಞ ಸಂಸ್ಥೆಗಳಾದ ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ಮತ್ತು ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ (CWMA)ಗಳ ಅಭಿಪ್ರಾಯಗಳನ್ನು ಪರಿಗಣಿಸಿದ ಬಳಿಕವೇ ಯೋಜನೆಗೆ ಅನುಮೋದನೆ ನೀಡಲಾಗುವುದು ಎಂದು ನ್ಯಾಯಾಲಯ ಹೇಳಿತ್ತು.
ಮೇಕೆದಾಟು ಯೋಜನೆ ಕರ್ನಾಟಕ ಪ್ರಸ್ತಾಪಿಸಿರುವ ಬಹುಉದ್ದೇಶಿತ (ಕುಡಿಯುವ ನೀರು ಮತ್ತು ವಿದ್ಯುತ್) ಯೋಜನೆಯಾಗಿದ್ದು, ಇದರಲ್ಲಿ ರಾಮನಗರ ಜಿಲ್ಲೆ (ಈಗ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣಗೊಂಡಿದೆ)ಯ ಕನಕಪುರ ಸಮೀಪ ಸಮತೋಲನ ಜಲಾಶಯ ನಿರ್ಮಾಣ ಒಳಗೊಂಡಿದೆ. ಈ ಯೋಜನೆ ಜಾರಿಯಾದರೆ ರಾಜ್ಯಕ್ಕೆ ಹಾನಿಯಾಗಬಹುದು ಎಂಬ ಆತಂಕ ವ್ಯಕ್ತಪಡಿಸಿ ತಮಿಳುನಾಡು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದೆ.
ಯೋಜನೆ ಪೂರ್ಣಗೊಂಡ ನಂತರ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ 4.75 ಟಿಎಂಸಿಎಫ್‌ಟಿ ಕುಡಿಯುವ ನೀರು ಒದಗಿಸುವ ಉದ್ದೇಶ ಹೊಂದಿದ್ದು, ಜೊತೆಗೆ 400 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯವೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




