ಮೌಂಟ್ ಎವರೆಸ್ಟ್ ಶಿಖರದ ಮೇಲೆ ಕನ್ನಡದ ಕೀರ್ತಿ ಪತಾಕೆ; ಬೆಂಗಳೂರಿನ ಇಬ್ಬರು ಸಾಹಸಿಗಳಿಂದ ಐತಿಹಾಸಿಕ ಸಾಧನೆ..!
ಉದ್ಯಮಿ ಸಂತೋಷ್ ದೇವರಾಜಪ್ಪ (40) ಹಾಗೂ ನೇತ್ರ ತಜ್ಞೆ ಡಾ. ಚಿನ್ಮಯೀ ತ್ರಿಶೂಲಮೂರ್ತಿ (45) ಮೇ 21ರಂದು ಎವರೆಸ್ಟ್ ಶಿಖರ ಏರುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು: ಬೆಂಗಳೂರು ಮೂಲದ ಇಬ್ಬರು ಪರ್ವತಾರೋಹಿಗಳು 46 ದಿನಗಳ ಕಠಿಣ ಸಾಹಸ ಯಾತ್ರೆಯ ಬಳಿಕ ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿ ದಾಖಲೆ ಮಾಡಿದ್ದಾರೆ.
ಉದ್ಯಮಿ ಸಂತೋಷ್ ದೇವರಾಜಪ್ಪ (40) ಹಾಗೂ ನೇತ್ರ ತಜ್ಞೆ ಡಾ. ಚಿನ್ಮಯೀ ತ್ರಿಶೂಲಮೂರ್ತಿ (45) ಮೇ 21ರಂದು ಎವರೆಸ್ಟ್ ಶಿಖರ ಏರುವಲ್ಲಿ ಯಶಸ್ವಿಯಾಗಿದ್ದಾರೆ.
ಕರ್ನಾಟಕ ಮೌಂಟಿನಿಯರಿಂಗ್ ಅಸೋಸಿಯೇಷನ್ (KMA) 60ನೇ ವರ್ಷದ ಸಂಭ್ರಮಾಚರಣೆಯ ಅಂಗವಾಗಿ ಈ ಸಾಹಸ ಯಾತ್ರೆ ಕೈಗೊಳ್ಳಲಾಗಿತ್ತು.
29,031 ಅಡಿ (8,848.86 ಮೀಟರ್) ಎತ್ತರದ ಎವರೆಸ್ಟ್ ಶಿಖರವನ್ನು ನೇಪಾಳದ ದಕ್ಷಿಣ-ಪೂರ್ವ ‘ಸೌತ್ ಕೋಲ್’ ಮಾರ್ಗದ ಮೂಲಕ ಮಧ್ಯಾಹ್ನ 12.10ರ ಸುಮಾರಿಗೆ ಇಬ್ಬರೂ ತಲುಪಿದ್ದಾರೆ ಎಂದು ಸಂಘ ತಿಳಿಸಿದೆ.
ಪರ್ವತಾರೋಹಿಗಳು ಏಪ್ರಿಲ್ 4ರಂದು ಬೆಂಗಳೂರಿನಿಂದ ತಮ್ಮ ಯಾತ್ರೆ ಆರಂಭಿಸಿ ಕಠ್ಮಂಡುವಿಗೆ ತೆರಳಿದ್ದರು. ಎವರೆಸ್ಟ್ ಏರಿಕೆಗೆ ಅಗತ್ಯವಾದ ದೈಹಿಕ ಹೊಂದಾಣಿಕೆ ಮತ್ತು ತಯಾರಿಯ ಭಾಗವಾಗಿ ಏಪ್ರಿಲ್ 22ರಂದು 20,070 ಅಡಿ ಎತ್ತರದ ಲೋಬುಚೆ ಈಸ್ಟ್ ಶಿಖರವನ್ನೂ ಯಶಸ್ವಿಯಾಗಿ ಏರಿದ್ದರು.
ಈ ಸಾಹಸ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 9ರಂದು ವಿಧಾನಸೌಧದಲ್ಲಿ ಚಾಲನೆ ನೀಡಿದ್ದರು. ಬಳಿಕ ಮಾರ್ಚ್ 22ರಂದು ಬೆಂಗಳೂರಿನ ಯುವನಿಕಾದಲ್ಲಿ ಸಾಹಸ ಪ್ರಿಯರು, ಸ್ನೇಹಿತರು ಹಾಗೂ ಹಿತೈಷಿಗಳ ಸಮ್ಮುಖದಲ್ಲಿ ವಿಶೇಷ ಬೀಳ್ಕೊಡುಗೆ ಕಾರ್ಯಕ್ರಮವೂ ನಡೆದಿತ್ತು.
46 ದಿನಗಳ ಯಾತ್ರೆಯಲ್ಲಿ ತೀವ್ರ ಹವಾಮಾನ, ಕಡಿಮೆ ಆಮ್ಲಜನಕ, ಎತ್ತರದ ಪ್ರದೇಶದ ಸವಾಲುಗಳು ಹಾಗೂ ಕಠಿಣ ಭೂಪ್ರದೇಶವನ್ನು ಎದುರಿಸಿ ಇಬ್ಬರೂ ಯಶಸ್ವಿಯಾಗಿ ಎವರೆಸ್ಟ್ ಶಿಖರ ತಲುಪಿದ್ದಾರೆ.
ಕರ್ನಾಟಕ ಮೌಂಟಿನಿಯರಿಂಗ್ ಅಸೋಸಿಯೇಷನ್‌ನ ಎಸ್. ಶ್ರೀವತ್ಸ ಮಾತನಾಡಿ, “KMAಗೆ 60 ವರ್ಷ ತುಂಬಿದ ಸಂದರ್ಭದಲ್ಲಿ ಈ ಸಾಧನೆ ವಿಶೇಷ ಮಹತ್ವ ಪಡೆದಿದೆ. ಕಳೆದ ಹಲವು ವರ್ಷಗಳಿಂದ ಸಂಘವು 20 ಸಾವಿರಕ್ಕೂ ಹೆಚ್ಚು ಸದಸ್ಯರಲ್ಲಿ ಪರ್ವತಾರೋಹಣ ಮತ್ತು ಸಾಹಸ ಕ್ರೀಡೆಗಳ ಬಗ್ಗೆ ಆಸಕ್ತಿ ಬೆಳೆಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಇದೇ ವೇಳೆ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ತರಬೇತಿ ಹಾಗೂ ಸಾಹಸ ಚಟುವಟಿಕೆಗಳಿಗೆ ಸ್ಥಳಾವಕಾಶ ನೀಡಿರುವುದಕ್ಕೂ ಅವರು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



