ಹೆಚ್ಚುವರಿ ಕಾರ್ಮಿಕರ ಕರೆತಂದು, ಈಜಿಪುರ ಮೇಲ್ಸೇತುವೆ ಕಾಮಗಾರಿ ಕಾರ್ಯ ಪೂರ್ಣಗೊಳಿಸಿ: GBA ಖಡಕ್ ಸೂಚನೆ..!
ಮಳೆಗಾಲ ಹತ್ತಿರವಾಗುತ್ತಿರುವುದರಿಂದ ಫ್ಲೈಓವರ್ ನಿರ್ಮಾಣ ವಲಯದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಬೆಂಗಳೂರು: ಬೆಂಗಳೂರಿನ ಬಹು ನಿರೀಕ್ಷಿತ ಈಜಿಪುರ ಮೇಲ್ಸೇತುವೆ (ಫ್ಲೈಓವರ್) ಕಾಮಗಾರಿಯನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಮತ್ತು ಸಿಬ್ಬಂದಿಯನ್ನು ನಿಯೋಜಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಮುಖ್ಯ ಆಯುಕ್ತರಾದ ಎಂ. ಮಹೇಶ್ವರ್ ರಾವ್ ಅವರು ಗುತ್ತಿಗೆ ಸಂಸ್ಥೆಯಾದ ಬಿಎಸ್‌ಪಿಸಿಎಲ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆಯ ಪ್ರಗತಿ ಪರಿಶೀಲನೆಗಾಗಿ ಅಧಿಕಾರಿಗಳು ಮತ್ತು ಗುತ್ತಿಗೆದಾರರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಕಾಮಗಾರಿಗೆ ವೇಗ ನೀಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿದರು.
ಇದೇ ವೇಳೆ ಮಡಿವಾಳ ಕಡೆಯ ರ್ಯಾಂಪ್ ನಿರ್ಮಾಣ ಸ್ಥಳದಲ್ಲಿರುವ ಬೆಸ್ಕಾಂನ ರಿಂಗ್ ಮೇನ್ ಯೂನಿಟ್ ಅನ್ನು ಕೇವಲ 24 ಗಂಟೆಗಳಲ್ಲಿ ಸ್ಥಳಾಂತರಿಸಲು ಹಾಗೂ ಕೇಂದ್ರೀಯ ಸದನದ ಎದುರಿಗಿರುವ ಮೂರು ಮರಗಳನ್ನು ನಾಲ್ಕು ದಿನಗಳ ಒಳಗಾಗಿ ತೆರವುಗೊಳಿಸಲು ಅಧಿಕಾರಿಗಳಿಗೆ ಗಡುವು ನೀಡಿದರು.
ದೊಮ್ಮಲೂರು ಕಡೆಯ ಡೌನ್-ರಾಂಪ್ ಕಾಮಗಾರಿ ಈಗಾಗಲೇ ಶೇಕಡಾ 70 ರಷ್ಟು ಪೂರ್ಣಗೊಂಡಿದ್ದು, ಹೆಚ್ಚುವರಿ ಮಾನವಶಕ್ತಿಯನ್ನು ಬಳಸಿಕೊಂಡು ಉಳಿದ ಕೆಲಸವನ್ನು ಮುಂದಿನ 15 ದಿನಗಳಲ್ಲಿ ಮುಗಿಸಬೇಕು ಎಂದು ತಿಳಿಸಿದ್ದಾರೆ.
ಇದರ ಬೆನ್ನಲ್ಲೇ ಸರ್ಜಾಪುರ ಕಡೆಯ ಡೌನ್-ರಾಂಪ್ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಂಡು, ಮುಂದಿನ 15 ದಿನಗಳ ಅವಧಿಯಲ್ಲಿ ಪೂರ್ಣಗೊಳಿಸಬೇಕಿದೆ. ಈಜಿಪುರ ಸಿಗ್ನಲ್ ಜಂಕ್ಷನ್ ಬಳಿ ನಾಲ್ಕು ಸ್ಪ್ಯಾನ್‌ಗಳ ಜೋಡಣೆ ಕಾರ್ಯವು ಬುಧವಾರವಷ್ಟೇ ಆರಂಭವಾಗಿದ್ದು, ಇದನ್ನು ಎರಡು ತಿಂಗಳ ಒಳಗಾಗಿ ಪೂರ್ಣಗೊಳಿಸುವಂತೆ ಗುತ್ತಿಗೆ ಸಂಸ್ಥೆಗೆ ಸೂಚಿಸಿದರು.
ಇದರೊಂದಿಗೆ ಐದು ಪೋರ್ಟಲ್ ಫ್ರೇಮ್‌ಗಳ ನಿರ್ಮಾಣವನ್ನು ತ್ವರಿತಗೊಳಿಸಿ, ಒಟ್ಟಾರೆ ಮೇಲ್ಸೇತುವೆಯ ಮುಖ್ಯ ಯೋಜನೆಯನ್ನು ಮುಂಬರುವ ಅಕ್ಟೋಬರ್ ಅಂತ್ಯದ ವೇಳೆಗೆ ಸಂಪೂರ್ಣವಾಗಿ ಮುಗಿಸಲು ನಿರ್ದೇಶನ ನೀಡಿದರು.
ಮಳೆಗಾಲ ಹತ್ತಿರವಾಗುತ್ತಿರುವುದರಿಂದ ಫ್ಲೈಓವರ್ ನಿರ್ಮಾಣ ವಲಯದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಕಾಮಗಾರಿ ನಡೆಯುವ ಜಾಗದ ಪಕ್ಕದ ರಸ್ತೆಗಳಲ್ಲಿನ ಗುಂಡಿಗಳನ್ನು ತಕ್ಷಣವೇ ಮುಚ್ಚಲು ಹಾಗೂ ಮಳೆನೀರು ಸರಾಗವಾಗಿ ಹರಿದು ಹೋಗಲು ರಸ್ತೆಯ ಎರಡೂ ಬದಿಯ ಚರಂಡಿಗಳಲ್ಲಿರುವ ಹೂಳನ್ನು ಸಂಪೂರ್ಣವಾಗಿ ತೆಗೆಯಲು ಕಟ್ಟುನಿಟ್ಟಿನ ಆದೇಶ ನೀಡಿದರು.
ಮಳೆಗಾಲದಲ್ಲಿ ಫ್ಲೈಓವರ್ ನಿರ್ಮಾಣ ಪ್ರದೇಶದ ಯಾವುದೇ ಭಾಗದಲ್ಲಿ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಮತ್ತು ರಸ್ತೆ ದೀಪಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒಟ್ಟು 2.59 ಕಿಲೋಮೀಟರ್ ಉದ್ದವಿರುವ ಈ ಈಜಿಪುರ ಮೇಲ್ಸೇತುವೆ ಯೋಜನೆಗೆ ಒಟ್ಟು 762 ಸೆಗ್ಮೆಂಟ್‌ಗಳ ಅಗತ್ಯವಿದ್ದು, ಅವುಗಳಲ್ಲಿ ಈಗಾಗಲೇ 731 ಸೆಗ್ಮೆಂಟ್‌ಗಳನ್ನು ಸಿದ್ಧಪಡಿಸಲಾಗಿದೆ. ಇನ್ನುಳಿದ ಸೆಗ್ಮೆಂಟ್‌ಗಳ ಕಾಸ್ಟಿಂಗ್ ಕೆಲಸವು ಜೂನ್ ಅಂತ್ಯದ ವೇಳೆಗೆ ಮುಗಿಯುವ ನಿರೀಕ್ಷೆಯಿದೆ.
ಇಡೀ ಯೋಜನೆಗೆ ಒಟ್ಟು 66 ಸ್ಪ್ಯಾನ್‌ಗಳನ್ನು ಯೋಜಿಸಲಾಗಿದ್ದು, ಈ ಪೈಕಿ 52 ಸ್ಪ್ಯಾನ್‌ಗಳ ಅಳವಡಿಕೆ ಕಾರ್ಯ ಯಶಸ್ವಿಯಾಗಿ ಮುಗಿದಿದೆ. ಸದ್ಯ ಉಳಿದಿರುವ 14 ಸ್ಪ್ಯಾನ್‌ಗಳ ಸ್ಥಾಪನೆ ಪ್ರಗತಿಯಲ್ಲಿದ್ದು, ಅಕ್ಟೋಬರ್ ವೇಳೆಗೆ ಇಡೀ ಮೇಲ್ಸೇತುವೆಯನ್ನು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲು ಸಿದ್ಧತೆಗಳು ನಡೆಯುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



