ದುಬಾರೆ ದುರಂತಕ್ಕೆ 2019ರ ವರದಿ ನಿರ್ಲಕ್ಷ್ಯವೇ ಕಾರಣ..? ಸುರಕ್ಷತೆ ಬಗ್ಗೆ ಈ ಮೊದಲೇ ಎಚ್ಚರಿಕೆ ನೀಡಿತ್ತು ಸಮಿತಿ..!
ಪ್ರವಾಸಿಗರು ಆನೆಗಳಿಗೆ ಅತಿಯಾಗಿ ಹತ್ತಿರವಾಗುತ್ತಿದ್ದಾರೆ. ಜನರು ಮತ್ತು ಆನೆಗಳ ನಡುವೆ ನಿರ್ದಿಷ್ಟ ಅಂತರ ಕಾಪಾಡಬೇಕು” ಎಂದು ವರದಿ ಸ್ಪಷ್ಟವಾಗಿ ಶಿಫಾರಸು ಮಾಡಿತ್ತು. ಆದರೆ, ಈ ಸೂಚನೆಗಳನ್ನು ಅರಣ್ಯ ಇಲಾಖೆ ಜಾರಿಗೆ ತರಲಿಲ್ಲ ಎನ್ನಲಾಗಿದೆ.

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಸೂಚನೆಯ ಮೇರೆಗೆ 2019ರಲ್ಲಿ ರಚಿಸಲಾದ ತಜ್ಞರ ಸಮಿತಿ, ದುಬಾರೆ ಆನೆ ಶಿಬಿರ ಸೇರಿದಂತೆ ರಾಜ್ಯದ ಆನೆ ಶಿಬಿರಗಳಲ್ಲಿ ಮಿತಿಮೀರಿದ ಪ್ರವಾಸಿಗರ ಪ್ರವೇಶದಿಂದ ಮತ್ತು ಆನೆಗಳೊಂದಿಗೆ ಅತಿಯಾದ ಒಡನಾಟ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದ್ದರೂ, ಆ ಶಿಫಾರಸುಗಳನ್ನು ಜಾರಿಗೊಳಿಸದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಸಮಿತಿಯ ವರದಿಯಲ್ಲಿ, ದುಬಾರೆ ಮತ್ತು ಸಕ್ರೆಬೈಲ್ ಆನೆ ಶಿಬಿರಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದರಿಂದ ಆನೆಗಳ ಸುರಕ್ಷತೆ ಮತ್ತು ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಲಾಗಿತ್ತು.
“ಪ್ರವಾಸಿಗರು ಆನೆಗಳಿಗೆ ಅತಿಯಾಗಿ ಹತ್ತಿರವಾಗುತ್ತಿದ್ದಾರೆ. ಜನರು ಮತ್ತು ಆನೆಗಳ ನಡುವೆ ನಿರ್ದಿಷ್ಟ ಅಂತರ ಕಾಪಾಡಬೇಕು” ಎಂದು ವರದಿ ಸ್ಪಷ್ಟವಾಗಿ ಶಿಫಾರಸು ಮಾಡಿತ್ತು. ಆದರೆ, ಈ ಸೂಚನೆಗಳನ್ನು ಅರಣ್ಯ ಇಲಾಖೆ ಜಾರಿಗೆ ತರಲಿಲ್ಲ ಎನ್ನಲಾಗಿದೆ.
ಮೇ 18ರಂದು ದುಬಾರೆ ಶಿಬಿರದಲ್ಲಿ ಎರಡು ಆನೆಗಳ ನಡುವಿನ ಘರ್ಷಣೆಯ ವೇಳೆ ತಮಿಳುನಾಡಿನ ಪ್ರವಾಸಿರೊಬ್ಬರ ಸಾವನ್ನಪ್ಪಿದ ಘಟನೆ ನಂತರ ಈ ವರದಿ ಮತ್ತೆ ಚರ್ಚೆಗೆ ಬಂದಿದೆ.
ಸಮಿತಿಯ ಸದಸ್ಯರ ಅಭಿಪ್ರಾಯದಂತೆ, ವರದಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಿದ್ದರೆ ಈ ದುರಂತ ತಪ್ಪಿಸಬಹುದಾಗಿತ್ತು ಎಂದು ಹೇಳಿದ್ದಾರೆ.
ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (WP 21570/2019)ಯ ಹಿನ್ನೆಲೆಯಲ್ಲಿ ಈ ಸಮಿತಿಯನ್ನು ರಚಿಸಲಾಗಿತ್ತು. ರಾಜ್ಯದ ಆನೆ ಶಿಬಿರಗಳ ಪರಿಸ್ಥಿತಿ, ಆನೆಗಳ ಸಾವು ಹಾಗೂ ಶಿಬಿರಗಳ ನಿರ್ವಹಣೆಯನ್ನು ಅಧ್ಯಯನ ಮಾಡಿ ಸುಧಾರಣಾ ಕ್ರಮಗಳನ್ನು ಸೂಚಿಸುವ ಜವಾಬ್ದಾರಿ ಸಮಿತಿಗೆ ನೀಡಲಾಗಿತ್ತು.
ಮೂರು ಸದಸ್ಯರ ಸಮಿತಿಯಲ್ಲಿ ನಿವೃತ್ತ ಅರಣ್ಯಾಧಿಕಾರಿ ಕೆ.ಎಂ. ಚಿನ್ನಪ್ಪ, ತಮಿಳುನಾಡಿನ ಪಶುವೈದ್ಯ ಡಾ. ಕಲೈವಾನನ್ ಮತ್ತು ವನ್ಯಜೀವಿ ಟ್ರಸ್ಟ್ ಆಫ್ ಇಂಡಿಯಾದ ಹಿರಿಯ ಪಶುವೈದ್ಯ ಡಾ. ಎನ್‌ವಿಕೆ ಅಶ್ರಫ್ ಸೇರಿದ್ದರು.
ಸಮಿತಿಯು ಮತ್ತಿಗೋಡು ಆನೆ ಶಿಬಿರ, ಕಾವೇರಿ ಆನೆ ಶಿಬಿರ, ದುಬಾರೆ, ಬಳ್ಳೆ, ರಾಂಪುರ ಮತ್ತು ಸಾಕ್ರೆಬೈಲು ಸೇರಿ ಆರು ಆನೆ ಶಿಬಿರಗಳನ್ನು ಪರಿಶೀಲಿಸಿತ್ತು.
ಆನೆಗಳ ಆರೋಗ್ಯ, ನಿರ್ವಹಣೆ, ಮೂಲಸೌಕರ್ಯ, ನೀರಿನ ಸೌಲಭ್ಯ, ಪ್ರಾಣಿ ಕಲ್ಯಾಣ ಮತ್ತು ವಾಸಸ್ಥಳ ಸೇರಿದಂತೆ ಹಲವು ಅಂಶಗಳ ಆಧಾರದ ಮೇಲೆ ಶಿಬಿರಗಳನ್ನು ಮೌಲ್ಯಮಾಪನ ಮಾಡಲಾಗಿತ್ತು.
ಐದು ಅಂಕಗಳ ಮಾನದಂಡದಲ್ಲಿ ಯಾವುದೇ ಶಿಬಿರವೂ ಉತ್ತಮ ಅಂಕ ಗಳಿಸಿರಲಿಲ್ಲ. ದುಬಾರೆ ಶಿಬಿರಕ್ಕೆ 3.5 ಅಂಕ ಬಂದಿದ್ದರೂ, ಮೂಲಸೌಕರ್ಯ ಮತ್ತು ನಿರ್ವಹಣೆಯಲ್ಲಿ ಕೇವಲ 2.5 ಅಂಕ ಪಡೆದಿತ್ತು.
ವರದಿಯಲ್ಲಿ “ಅರಣ್ಯ ಪ್ರದೇಶಗಳ ಸಮಸ್ಯೆಯಿಂದ ಸರ್ಕಾರ ಅನೇಕ ಆನೆಗಳನ್ನು ಬಂಧಿಸಿ ಶಿಬಿರಗಳಿಗೆ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಈಗಿರುವ ಶಿಬಿರಗಳ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಿದೆ” ಎಂದು ಉಲ್ಲೇಖಿಸಲಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ಈ ವರದಿ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಸರ್ಕಾರದ ಗಮನಕ್ಕೂ ಇದನ್ನು ತರಲಾಗಿಲ್ಲ. ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸದಿರುವ ವಿಚಾರವನ್ನು ಪರಿಶೀಲಿಸಲಾಗುವುದು ಎಂದು ಹೇಳಿದ್ದಾರೆ.
ದುಬಾರೆ ದುರಂತಕ್ಕೆ ಯಾರು ಹೊಣೆ ಎಂಬ ಪ್ರಶ್ನೆಗೆ ಉತ್ತರಿಸಿ, ಇದು ಅಪಘಾತ. ಘಟನೆ ಕುರಿತು ತನಿಖೆ ನಡೆಯುತ್ತಿದೆ. ವಿವರಗಳನ್ನು ಪರಿಶೀಲಿಸಲು ವಿಶೇಷ ತಂಡ ಕಳುಹಿಸಲಾಗಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



