ರಾಜ್ಯ

'ಗೃಹಲಕ್ಷ್ಮಿ ಹಣ ಕೊಡಿಸಿ': ಹೈಕೋರ್ಟ್ ಮೆಟ್ಟಿಲೇರಿದ ಮಹಿಳೆಯರು; ಸರ್ಕಾರಕ್ಕೆ ನೋಟಿಸ್ ಜಾರಿ

ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ (Guarantee Schemes) ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಮಾಸಿಕ ಧನಸಹಾಯ ಸರಿಯಾಗಿ ತಲುಪುತ್ತಿಲ್ಲ..

'ಗೃಹಲಕ್ಷ್ಮಿ ಹಣ ಕೊಡಿಸಿ': ಹೈಕೋರ್ಟ್ ಮೆಟ್ಟಿಲೇರಿದ ಮಹಿಳೆಯರು; ಸರ್ಕಾರಕ್ಕೆ ನೋಟಿಸ್ ಜಾರಿ
ಗೃಹಲಕ್ಷ್ಮಿ
Published On :

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಬಾಕಿ ಉಳಿಸಿಕೊಂಡಿರುವ ಗೃಹಲಕ್ಷ್ಮಿ ಯೋಜನೆಯ ಹಣ ಕೊಡಿಸುವಂತೆ ಇಬ್ಬರು ಮಹಿಳೆಯರು ಹೈಕೋರ್ಟ್ ಮೊರೆ ಹೋಗಿದ್ದು, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ರಾಜ್ಯ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ (Guarantee Schemes) ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಮಾಸಿಕ ಧನಸಹಾಯ ಸರಿಯಾಗಿ ತಲುಪುತ್ತಿಲ್ಲ ಎಂದು ಬೇಸತ್ತ ಬೆಂಗಳೂರಿನ ಇಬ್ಬರು ಮಹಿಳೆಯರು ಇದೀಗ ನೇರವಾಗಿ ಕರ್ನಾಟಕ ಹೈಕೋರ್ಟ್ (karnataka High Court) ಮೆಟ್ಟಿಲೇರಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಡಿ ಹಿಂಬಾಕಿ ಹಣ ಬಿಡುಗಡೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿ ಆರ್ ‌ಗಂಗಾ ಮತ್ತು‌ ನಂದಿನಿ‌ ಲೇಔಟ್ ನಿವಾಸಿ ಜಿ ಡಿ ‌ಪವಿತ್ರಾ ಎಂಬುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ 2025ರ ಫೆಬ್ರವರಿ ಹಾಗೂ ಮಾರ್ಚ್‌ ತಿಂಗಳ ಹಿಂಬಾಕಿ ಹಣ ಬಿಡುಗಡೆ ಮಾಡಲು ಆದೇಶಿಸುವಂತೆ ಕೋರಿದ್ದರು.

ಅರ್ಜಿಯಲ್ಲೇನಿದೆ?

ರಾಜ್ಯ ಸರ್ಕಾರವು 2023ರ ಮೇ 5ರಂದು ಗೃಹಲಕ್ಷ್ಮಿ ಯೋಜನೆ ಜಾರಿಗೆ ಅನುಮೋದನೆ ನೀಡಿತು. ಮನೆಯ ಮುಖ್ಯಸ್ಥರಾದ ಮಹಿಳೆಗೆ ಮಾಸಿಕ 2 ಸಾವಿರ ರೂಪಾಯಿ ನೀಡಲು ಗೃಹಲಕ್ಷ್ಮಿ ಯೋಜನೆಯನ್ನು 2023ರ ಜೂನ್ 6ರಂದು ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿತ್ತು. 2023ರ ಆಗಸ್ಟ್ ನಲ್ಲಿ ಈ ಯೋಜನೆಯಡಿ ಹಣ ಬಿಡುಗಡೆ ಆರಂಭವಾಗಿತ್ತು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಅಲ್ಲದೇ, ಅಕ್ಟೋಬರ್ ವೇಳೆಗೆ ಈ ಯೋಜನೆಯಡಿ 1,28,80,594 ಫಲಾನುಭವಿಗಳು ನೋಂದಣಿಯಾಗಿದ್ದರು.‌ 2023ರ ಆಗಸ್ಟ್‌ನಿಂದ 2024 ಮಾರ್ಚ್‌ವರೆಗೆ ಎಂಟು ತಿಂಗಳ‌ ಕಾಲ ಹಣ ಬಿಡುಗಡೆ ಮಾಡಲಾಗಿತ್ತು. ಸರ್ಕಾರದ 2024-2025ನೇ ಹಣಕಾಸಿನ ಸಾಲಿಗೂ ಈ ಯೋಜನೆ ಮುಂದುವರಿಸಿತು.

2024ರ ಏಪ್ರಿಲ್‌ರಿಂದ 2025ರ ಜನವರಿವರೆಗೆ ಹಣ ಬಿಡುಗಡೆ ಮಾಡಿದ ಸರ್ಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬದಲಿಗೆ ತಾಲೂಕು ಪಂಚಾಯಿತಿ ಮೂಲಕ‌ ಹಣವನ್ನು‌ ಫಲಾನುಭವಿಗಳಿಗೆ ಪಾವತಿ ಮಾಡಲು ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ 2025ರ ಫೆಬ್ರವರಿ ತಿಂಗಳ ಹಣ ಬಿಡುಗಡೆ ಮಾಡಿಲ್ಲ. ಹಾಗೆಯೇ ಮಾರ್ಚ್ ತಿಂಗಳ‌ ಹಣವನ್ನು ಪಾವತಿ ಮಾಡಿಲ್ಲ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಹಣ ಮೀಸಲಿದ್ದರೂ ಬಿಡುಗಡೆಯಾಗಿಲ್ಲ

“ರಾಜ್ಯ ಸರ್ಕಾರವು ಪ್ರತಿ ವರ್ಷದ ಬಜೆಟ್‌ನಲ್ಲಿ ಗೃಹಲಕ್ಷ್ಮಿ ಯೋಜನೆಗಾಗಿ ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಡುತ್ತಿದೆ. ಬಜೆಟ್‌ನಲ್ಲಿ ಅಧಿಕೃತವಾಗಿ ಹಣ ಮೀಸಲಿಟ್ಟಿದ್ದರೂ, ಫಲಾನುಭವಿಗಳ ಖಾತೆಗೆ ಮಾತ್ರ ಹಣ ಜಮೆಯಾಗುತ್ತಿಲ್ಲ. ಹಾಗಿದ್ದಲ್ಲಿ ಸರ್ಕಾರ ಯೋಜನೆಗಾಗಿ ಇಟ್ಟ ಹಣ ಎಲ್ಲಿಗೆ ಹೋಯಿತು?” ಎಂದು ವಕೀಲರು ಪ್ರಶ್ನಿಸಿದರು. ಅಲ್ಲದೆ, ಇದುವರೆಗಿನ ಎಲ್ಲಾ ಹಿಂಬಾಕಿ (Arrears) ಹಣವನ್ನು ಒಟ್ಟಿಗೆ ಬಿಡುಗಡೆ ಮಾಡಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ರಾಜ್ಯಸರ್ಕಾರಕ್ಕೆ ನೋಟಿಸ್

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರಜ್ ಗೋವಿಂದರಾಜ್ ಮತ್ತು ಡಾ. ಕೆ ಮನ್ಮಥ ರಾವ್‌ ಅವರ ರಜಾಕಾಲೀನ ವಿಭಾಗೀಯ ಪೀಠ ನಡೆಸಿತು. ಅರ್ಜಿದಾರರ ಪರ ಹಿರಿಯ ವಕೀಲ ವಿಕ್ರಮ್‌ ಹುಯಿಲಗೋಳ ಅವರ ವಾದ ಆಲಿಸಿದ ಪೀಠವು

ಯೋಜನೆಯ ಅನುಷ್ಠಾನದಲ್ಲಿ ಆಗುತ್ತಿರುವ ವಿಳಂಬದ ಕುರಿತು ವಿವರಣೆ ಕೇಳಿ ಪ್ರತಿವಾದಿಗಳಾದ ರಾಜ್ಯ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ, ರಾಜ್ಯ ಪಂಚಾಯತ್ ರಾಜ್ ಇಲಾಖೆ,‌ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಈ ಕುರಿತು ಸರ್ಕಾರದ ನಿಲುವೇನು ಎಂಬುದನ್ನು ಸ್ಪಷ್ಟಪಡಿಸುವಂತೆ ಕೇಳಿ ಸೂಚಿಸಿ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.