ಬೆಂಗಳೂರು ಕೈಗಾರಿಕೆಗಳಿಗೆ ಕಾವೇರಿ ನೀರಿನ ಭದ್ರತೆ; ಕೊಳ್ಳೇಗಾಲ ಕೆರೆಗಳ ಅಭಿವೃದ್ಧಿಗೆ ಸರ್ಕಾರ ಮೆಗಾ ಪ್ಲ್ಯಾನ್: ಎಂ.ಬಿ ಪಾಟೀಲ್
ಈ ಯೋಜನೆ ಕುರಿತು ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರೊಂದಿಗೆ ಖನಿಜ ಭವನದಲ್ಲಿ ಸಭೆ ನಡೆಸಿದ ಸಚಿವರು, ಸ್ಥಳೀಯ ರೈತರು ವ್ಯಕ್ತಪಡಿಸಿದ್ದ ಆತಂಕಗಳನ್ನು ನಿವಾರಿಸುವ ಪ್ರಯತ್ನ ನಡೆಸಿದರು. ರೈತರ ಜೊತೆ ಶೀಘ್ರದಲ್ಲೇ ಸಭೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ಕೂಡ ನೀಡಿದರು.

ಬೆಂಗಳೂರು: ಬೆಂಗಳೂರಿನ ಸುತ್ತಮುತ್ತಲಿನ ಕೈಗಾರಿಕಾ ಪ್ರದೇಶಗಳಿಗೆ ಕಾವೇರಿ ನೀರು ಪೂರೈಕೆ ಮಾಡಲು ರಾಜ್ಯ ಸರ್ಕಾರ ಮಹತ್ವದ ಯೋಜನೆ ರೂಪಿಸಿದೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಅಗರ ಮತ್ತು ಮದ್ದೂರು ಕೆರೆಗಳ ಸಂಗ್ರಹ ಸಾಮರ್ಥ್ಯ ಹೆಚ್ಚಿಸಿ, ಮಳೆಗಾಲದಲ್ಲಿ ಕಾವೇರಿ ನೀರನ್ನು ಸಂಗ್ರಹಿಸಿ ಬಳಿಕ ಕೈಗಾರಿಕೆಗಳಿಗೆ ಪೂರೈಸುವ ಯೋಜನೆ ಸಿದ್ಧವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ತಿಳಿಸಿದ್ದಾರೆ.
ಈ ಯೋಜನೆ ಕುರಿತು ಕೊಳ್ಳೇಗಾಲ ಶಾಸಕ ಎ.ಆರ್. ಕೃಷ್ಣಮೂರ್ತಿ ಅವರೊಂದಿಗೆ ಖನಿಜ ಭವನದಲ್ಲಿ ಸಭೆ ನಡೆಸಿದ ಸಚಿವರು, ಸ್ಥಳೀಯ ರೈತರು ವ್ಯಕ್ತಪಡಿಸಿದ್ದ ಆತಂಕಗಳನ್ನು ನಿವಾರಿಸುವ ಪ್ರಯತ್ನ ನಡೆಸಿದರು. ರೈತರ ಜೊತೆ ಶೀಘ್ರದಲ್ಲೇ ಸಭೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ಕೂಡ ನೀಡಿದರು.
ಯೋಜನೆಯಿಂದ ರೈತರಿಗೆ ಯಾವುದೇ ಅನ್ಯಾಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಕಾವೇರಿ ನ್ಯಾಯಮಂಡಳಿ ಕೈಗಾರಿಕೆಗಳ ಬಳಕೆಗೆ ಮೀಸಲಿಟ್ಟಿರುವ ನೀರನ್ನೇ ಬಳಸಲಾಗುತ್ತದೆ, ಕೃಷಿಗೆ ಮೀಸಲಾದ ನೀರನ್ನು ಬಳಸುವುದಿಲ್ಲ ಎಂದು ಹೇಳಿದರು.
ಕೈಗಾರಿಕೆಗಳಿಗೆ ಒಟ್ಟು 4 ಟಿಎಂಸಿ ಅಡಿ ನೀರು ಮೀಸಲಾಗಿದ್ದು, ಅದರಲ್ಲಿ ಈಗಾಗಲೇ 1.37 ಟಿಎಂಸಿ ಬಳಕೆಯಲ್ಲಿದೆ. ಉಳಿದ ನೀರಿನಲ್ಲಿ ಸುಮಾರು 2.5 ಟಿಎಂಸಿ ನೀರನ್ನು ಈ ಯೋಜನೆಗೆ ಬಳಸುವ ಪ್ರಸ್ತಾವನೆ ಇದೆ ಎಂದು ವಿವರಿಸಿದರು.
ಮಳೆಗಾಲದಲ್ಲಿ ನೇರವಾಗಿ ಕಾವೇರಿ ನದಿಯಿಂದ ನೀರನ್ನು ಎತ್ತಿ ಅಗರ ಮತ್ತು ಮದ್ದೂರು ಕೆರೆಗಳಲ್ಲಿ ಸಂಗ್ರಹಿಸಲಾಗುತ್ತದೆ. ನಂತರ ವರ್ಷಪೂರ್ತಿ ಕೈಗಾರಿಕೆಗಳಿಗೆ ಆ ನೀರನ್ನು ಪೂರೈಸಲಾಗುತ್ತದೆ. ಇದಕ್ಕಾಗಿ ಕೆರೆಗಳನ್ನು ಆಳಗೊಳಿಸುವ ಮೂಲಕ ಸಂಗ್ರಹ ಸಾಮರ್ಥ್ಯ ಹೆಚ್ಚಿಸಲಾಗುತ್ತದೆ. ಯಾವುದೇ ಹೆಚ್ಚುವರಿ ಭೂಸ್ವಾಧೀನ ಮಾಡುವ ಅಗತ್ಯವಿಲ್ಲ ಎಂದು ಸಚಿವರು ಹೇಳಿದರು.
ಇದೇ ವೇಳೆ ಅಗರ ಮತ್ತು ಮದ್ದೂರು ಕೆರೆಗಳ ಕೆಳಭಾಗದಲ್ಲಿರುವ ಚಿಕ್ಕಹೊಳೆ ಹಾಗೂ ಸುವರ್ಣಮುಖಿ ಕೆರೆಗಳನ್ನೂ ಅಭಿವೃದ್ಧಿಪಡಿಸಲಾಗುತ್ತದೆ. ಈ ಕೆರೆಗಳಲ್ಲಿನ ನೀರು ಕೂಡ ರೈತರಿಗೆ ವರ್ಷಪೂರ್ತಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಈ ಯೋಜನೆಯಿಂದ ಕೈಗಾರಿಕೆಗಳಿಗೆ ನೀರಿನ ಭದ್ರತೆ ಒದಗಿಸುವುದರ ಜೊತೆಗೆ, ರೈತರಿಗೆ ವರ್ಷಕ್ಕೆ ಒಂದು ಬೆಳೆ ಬದಲು ಎರಡು ಬೆಳೆ ಬೆಳೆಸುವ ಅವಕಾಶವೂ ಸಿಗಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



