ಬೆಂಗಳೂರಿನಲ್ಲಿ ಸುಡು ಬಿಸಿಲು: ನಿರ್ಜಲೀಕರಣದಿಂದ ಮೂತ್ರಪಿಂಡ ಸಮಸ್ಯೆ ಹೆಚ್ಚಳ; ವೈದ್ಯರ ಸಲಹೆ ಇಲ್ಲಿದೆ..
ಕಿಡ್ನಿ ಸ್ಟೋನ್ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಸೋಂಕು ಉಲ್ಬಣಗೊಂಡು ಅದು ಮೂತ್ರಪಿಂಡಗಳಿಗೂ ಹಾನಿ ಮಾಡುವ ಸಾಧ್ಯತೆ ಇದೆ.

ಬೆಂಗಳೂರು: ನಗರದಲ್ಲಿ ತಾಪಮಾನ ಹೆಚ್ಚಳದಿಂದ ನಿರ್ಜಲೀಕರಣ ಸಮಸ್ಯೆ (ಡಿಹೈಡ್ರೇಷನ್) ಹೆಚ್ಚುತ್ತಿದ್ದು, ಇದರಿಂದ ಮೂತ್ರನಾಳ ಸೋಂಕು (UTI), ಕಿಡ್ನಿ ಸ್ಟೋನ್ ಹಾಗೂ ಪ್ರೊಸ್ಟೇಟೈಟಿಸ್ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಬದಲಾಗುತ್ತಿರುವ ಹವಾಮಾನ, ಕಡಿಮೆ ನೀರಿನ ಸೇವನೆ, ದೀರ್ಘ ಸಮಯ ಕುಳಿತು ಕೆಲಸ ಮಾಡುವ ಜೀವನಶೈಲಿ ಹಾಗೂ ಕೆಲಸದ ಒತ್ತಡ ಇವು ಪ್ರಮುಖ ಕಾರಣಗಳಾಗಿವೆ ಎಂದು ತಜ್ಞರು ಹೇಳಿದ್ದಾರೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿ UTI ಪ್ರಕರಣಗಳು ಇತರ ಋತುಗಳಿಗಿಂತ ಎರಡು ಪಟ್ಟು ಹೆಚ್ಚಾಗುತ್ತವೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಆಸ್ಟರ್ ಆರ್‌ವಿ ಆಸ್ಪತ್ರೆಯ ಗೈನಕಾಲಜಿಸ್ಟ್ ಡಾ. ಗಾಯತ್ರಿ ಕಾರ್ತಿಕ್ ನಾಗೇಶ್ ಅವರು ಮಾತನಾಡಿ, ಪ್ರತಿ ವರ್ಷವೂ ಬೇಸಿಗೆ ತೀವ್ರವಾಗುತ್ತಿದೆ. ಜನರು ಕೆಲಸದ ಒತ್ತಡದಿಂದ ಸಾಕಷ್ಟು ನೀರು ಕುಡಿಯುವುದಿಲ್ಲ. ಪ್ರಯಾಣದ ವೇಳೆ ಅಥವಾ ಕೆಲಸದ ನಡುವೆ ಯೂರಿನ್ ತಡೆಯುವುದು, ಅಸ್ವಚ್ಛ ಶೌಚಾಲಯ ಬಳಕೆಯಿಂದಾಗಿ ಸೋಂಕು ಹೆಚ್ಚುತ್ತಿದೆ ಎಂದು ತಿಳಿಸಿದ್ದಾರೆ.
ವಿಶೇಷವಾಗಿ ಕೆಲಸ ಮಾಡುವ ಮಹಿಳೆಯರು, ಸೇಲ್ಸ್ ವೃತ್ತಿಯಲ್ಲಿರುವವರು ಹೆಚ್ಚು ಅಪಾಯದಲ್ಲಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಮಹಿಳೆಯರಲ್ಲಿ ಮೂತ್ರನಾಳ ಚಿಕ್ಕದಾಗಿರುವುದರಿಂದ UTI ಸಂಭವ ಹೆಚ್ಚು ಎಂದು ಅವರು ತಿಳಿಸಿದ್ದಾರೆ.
ಅದೇ ರೀತಿ, 20ರಿಂದ 35 ವರ್ಷದ ಪುರುಷರಲ್ಲಿ ಕಿಡ್ನಿ ಸ್ಟೋನ್ ಹಾಗೂ ಪ್ರೊಸ್ಟೇಟೈಟಿಸ್ ಪ್ರಕರಣಗಳು ಹೆಚ್ಚುತ್ತಿರುವುದಾಗಿಯೂ ವೈದ್ಯರು ತಿಳಿಸಿದ್ದಾರೆ.
ಕಿಡ್ನಿ ಸ್ಟೋನ್ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಸೋಂಕು ಉಲ್ಬಣಗೊಂಡು ಅದು ಮೂತ್ರಪಿಂಡಗಳಿಗೂ ಹಾನಿ ಮಾಡುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸೇಂಟ್ ಜಾನ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಯೂರಾಲಜಿಸ್ಟ್ ಡಾ. ಪವನ್ ಕುಮಾರ್ ಎಸ್.ಕೆ. ಅವರು ಮಾತನಾಡಿ, “ನಮ್ಮ OPDಗೆ ಬರುವ 10 ರೋಗಿಗಳಲ್ಲಿ ಕನಿಷ್ಠ 3 ಜನರು ಕಿಡ್ನಿ ಸ್ಟೋನ್ ಸಮಸ್ಯೆಯಿಂದಲೇ ಬರುತ್ತಿದ್ದಾರೆ. ನಿರ್ಜಲೀಕರಣ, ಜಂಕ್ ಫುಡ್ ಸೇವನೆ ಹಾಗೂ ದೀರ್ಘ ಸಮಯ ಕುಳಿತು ಕೆಲಸ ಮಾಡುವುದು ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ ಎಂದು ತಿಳಿಸಿದ್ದಾರೆ.
ಐಟಿ ಉದ್ಯೋಗಿಗಳು ಮತ್ತು ಡೆಸ್ಕ್ ಕೆಲಸ ಮಾಡುವವರು 8–10 ಗಂಟೆಗಳ ಕಾಲ ನಿರಂತರವಾಗಿ ಕುಳಿತುಕೊಳ್ಳುವುದರಿಂದ ಹೆಚ್ಚಿನ ಅಪಾಯಕ್ಕೆ ಒಳಗಾಗುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಮೂತ್ರ ವಿಸರ್ಜನೆ ಮಾಡದೇ ಇರುವುದು ಮತ್ತು ಕಡಿಮೆ ನೀರು ಕುಡಿಯುವುದು ಸಮಸ್ಯೆಯನ್ನು ಹೆಚ್ಚಿಸುತ್ತಿದೆ ಎಂದು ಹೇಳಿದ್ದಾರೆ.
ಆರಂಭಿಕ ನೋವು ಕಡಿಮೆಯಾದ ನಂತರ ಕಿಡ್ನಿ ಸ್ಟೋನ್ ಸಮಸ್ಯೆಯನ್ನು ನಿರ್ಲಕ್ಷಿಸಿದರೆ ಗಂಭೀರ ಪರಿಣಾಮಗಳು ಉಂಟಾಗಬಹುದು. ಕೆಲ ಸಂದರ್ಭಗಳಲ್ಲಿ ಕಿಡ್ನಿಗಳನ್ನು ತೆಗೆದುಹಾಕುವ ಪರಿಸ್ಥಿತಿಯೂ ಎದುರಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
ಮಕ್ಕಳಲ್ಲಿಯೂ ಬೇಸಿಗೆಯಲ್ಲಿ ಮೂತ್ರನಾಳ ಸೋಂಕು ಹೆಚ್ಚುತ್ತಿರುವುದಾಗಿ ರೇನ್‌ಬೋ ಚಿಲ್ಡ್ರನ್ ಆಸ್ಪತ್ರೆಯ ಡಾ. ದರ್ಶನ್ ಜಿ. ಹೆಗಡೆ ತಿಳಿಸಿದ್ದಾರೆ.
ನಿರ್ಜಲೀಕರಣ, ಅಶುದ್ಧ ಶೌಚಾಲಯ ಬಳಕೆ ಹಾಗೂ ಆಟದ ಸಮಯದಲ್ಲಿ ಮೂತ್ರ ತಡೆದು ಇರುವುದು ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



