ಶಾಲೆಯಿಂದ ನಾಪತ್ತೆಯಾದ 4 ವರ್ಷದ ಬಳಿಕ ಪೋಷಕರ ಮಡಿಲು ಸೇರಿದ ಬಾಲಕ: ಪತ್ತೆ ಹಚ್ಚಿದ್ದು ಕಬಡ್ಡಿ ಆಟ!
ಆದರೆ ಆತ ಸ್ಕೂಲ್ಗೆ ತೆರಳದ ಕಾರಣ ಹೋಗಿದ್ದೆಲ್ಲಿಗೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಹುಡುಕಾಟ ನಡೆಸಿದರೂ ಆತನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.

ಮೈಸೂರು: ನಿಗೂಢವಾಗಿ ನಾಪತ್ತೆಯಾಗಿದ್ದ ಬಾಲಕ ನಾಲ್ಕು ವರ್ಷದ ಬಳಿಕ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ಶಾಲೆಯ ಆವರಣದಿಂದ ನಾಪತ್ತೆಯಾಗಿದ್ದ ಮಗನಿಗಾಗಿ ಹುಡುಕಾಟ ನಡೆಸುತ್ತಿದ್ದ ತಂದೆ ಕೊನೆಗೂ ನಿಟ್ಟುಸಿರು ಬಿಟ್ಟಿದ್ದಾರೆ.
ಪಾಂಡವಪುರ ತಾಲೂಕಿನ ಹಿರೇಮರಹಳ್ಳಿ ಗ್ರಾಮದ ಈರೇಗೌಡರ ಪುತ್ರ ಕಿಶೋರ್ ಮಂಡ್ಯ ತಾಲೂಕಿನ ತಂಗಳಗೆರೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡಲು ಬಿಟ್ಟು ಹೋಗಿದ್ದರು.
ಮತ್ತೆ 20 ದಿನ ಬಿಟ್ಟು ಶಾಲೆಗೆ ಬಂದು ಮಗನನ್ನು ಊರಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಅವರು ತಿಳಿಸಿದ್ದರು. 20 ದಿನದ ನಂತರ ಮಗನನ್ನು ನೋಡಲು ತಂದೆ ಶಾಲೆಗೆ ಬಂದಿದ್ದಾರೆ. ಆತ 20 ದಿನದಿಂದ ಶಾಲೆಗೆ ಬಂದಿಲ್ಲ ಎಂಬ ಉತ್ತರ ಬಂದಿದೆ.
ಈ ವೇಳೆ ಸಿಸಿ ಕ್ಯಾಮರಾ ಪರಿಶೀಲನೆ ಮಾಡಿದಾಗ 2022ರ ಆಗಸ್ಟ್ 10ರಂದು ಬಾಲಕ ಶಾಲೆಗೆ ಹೋಗುತ್ತಿರುವ ವಿಡಿಯೋ ಸೆರೆಯಾಗಿದೆ. ಆದರೆ ಆತ ಸ್ಕೂಲ್ಗೆ ತೆರಳದ ಕಾರಣ ಹೋಗಿದ್ದೆಲ್ಲಿಗೆ ಎಂಬ ಪ್ರಶ್ನೆ ಉದ್ಭವಿಸಿತ್ತು. ಹುಡುಕಾಟ ನಡೆಸಿದರೂ ಆತನ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆ ಬಳಿಕ ಪೊಲೀಸರು ಈ ವಿಚಾರವಾಗಿ ಕಳೆದ ನಾಲ್ಕು ವರ್ಷದಿಂದ ಬಾಲಕನ ಹುಡುಕಾಟ ನಡೆಸುತ್ತಿದ್ದರು.
ಈ ವೇಳೆ ಪೊಲೀಸರು ನಾಪತ್ತೆ ಪ್ರಕರಣವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ್ದರು. ತಮ್ಮ ಮಗನನ್ನು ಯಾರೋ ಅಪಹರಿಸಿ ಕೊಂದಿದ್ದಾರೆ ಎಂದು ಪೋಷಕರು ಅಳಲು ತೋಡಿಕೊಂಡಿದ್ದರು. ಪೊಲೀಸರೂ ಈತನಿಗಾಗಿ ಶೋಧ ನಡೆಸುತ್ತಿದ್ದರು. ಅಂತಿಮವಾಗಿ ಆತನನ್ನು ಬೆಂಗಳೂರಿನಲ್ಲಿ ಪತ್ತೆ ಮಾಡಲಾಗಿದೆ.
ಹಿರೇಮರಳಿ ಗ್ರಾಮದ ಕಿಶೋರ್ ನನ್ನು ಮರಳಿ ಕುಟುಂಬಸ್ಥರ ಮಡಿಲಿಗೆ ಸೇರಿಸಲಾಗಿದೆ. ವಿಶೇಷ ಅಂದರೆ ಆತನನ್ನು ಪತ್ತೆ ಹಚ್ಚಿದ್ದು ಯಾವುದೇ ವಿಧಿ ವಿಜ್ಞಾನ ಪ್ರಯೋಗದಾಗಾಲಯದ ಸಾಕ್ಷ್ಯಗಳಲ್ಲ, ಬದಲಿಗೆ ಕಬಡ್ಡಿ ಆಟದ ಮೂಲಕ ಆತ ಪತ್ತೆಯಾಗಿದ್ದಾನೆ.
ಕಿಶೋರ್ನನ್ನು ಯಾರೂ ಅಪಹರಣ ಮಾಡಿರಲಿಲ್ಲ. ಓದಲು ಇಷ್ಟ ಇಲ್ಲದ ಕಾರಣ ಆತನೇ ಶಾಲೆ ಕಾಂಪೌಂಡ್ ಹಾರಿ ಹೋಗಿ ಬೆಂಗಳೂರು ಸೇರಿದ್ದ. ಹಲವೆಡೆ ಹೋಟೆಲ್ನಲ್ಲಿ ಕೆಲಸ ಮಾಡಿ ನಾಲ್ಕು ವರ್ಷ ಜೀವನ ಮಾಡಿದ್ದ ಎಂಬುದು ಗೊತ್ತಾಗಿದೆ. ಕಬಡ್ಡಿ ಮೇಲೆ ವಿಶೇಷ ಆಸಕ್ತಿ ಹೊಂದಿದ್ದ ಕಿಶೋರ್ ಸ್ಥಳೀಯ ಯುವಕರೊಂದಿಗೆ ಲೋಕಲ್ ಟೂರ್ನಮೆಂಟ್ ಆಡುತ್ತಿದ್ದ ವೇಳೆ ಸಿಕ್ಕಿದ್ದಾನೆ.
ತಾಂತ್ರಿಕ ಪುರಾವೆಗಳ ಆಧಾರದಲ್ಲಿ ಪೊಲೀಸರು ಕೊನೆಗೂ ಕಿಶೋರ್ನನ್ನು ಹುಡುಕಿ ಗ್ರಾಮಕ್ಕೆ ವಾಪಸ್ ಕರೆತಂದಿರುವುದಾಗಿ ಮಂಡ್ಯ ಮಹಿಳಾ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಲಿಯಾಕತ್ ಉಲ್ಲಾ ಬಹಿರಂಗಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



