ಪ್ರಣಾಳಿಕೆಯಲ್ಲಿ ಸಮಾನತೆಯ ಮಾತು ಕೊಟ್ಟಿದ್ವಿ; ಯಾರ ಓಲೈಕೆ ಮಾಡುತ್ತಿಲ್ಲ, ಆದೇಶ ವಾಪಸ್ ಪಡೆಯಲ್ಲ: ಮಧು ಬಂಗಾರಪ್ಪ
ಹಿಜಾಬ್ ಮಾತ್ರ ಅಲ್ಲ. ಇದಕ್ಕೂ ಮುನ್ನ ನಾನು ಶಿವದಾರ ಹಾಗೂ ಜನಿವಾರದ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದೆ, ಹಾಗಾದರೆ ಇವರೆಲ್ಲ ಅದರ ವಿರೋಧಿಗಳಾ?, ಕಣ್ಣಿಗೆ ಇದೊಂದೇ ಕಾಣಿಸುತ್ತಾ?

ಬೆಂಗಳೂರು: ರಾಜ್ಯದ ಶಿಕ್ಷಣ ಸಚಿವರಿಗೆ ತಲೆ ಇಲ್ಲ, ಬುದ್ಧಿ ಇಲ್ಲ ಎಂದೆಲ್ಲ ಬಿಜೆಪಿ ನಾಯಕರು ಹೇಳುತ್ತಿದ್ದರು. ಈಗ ಆ ಹೇಳಿಕೆ ಕೊಟ್ಟವರು ದಡ್ಡರಾ ಅಥವಾ ಕೇಂದ್ರ ಶಿಕ್ಷಣ ಸಚಿವರು ದಡ್ಡರಾ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಖಾಸಗಿ ಚಾನೆಲ್ ಜೊತೆ ಮಾತನಾಡಿದ ಮಧು ಬಂಗಾರಪ್ಪ, ಹಿಜಬ್ ಬಗ್ಗೆ ಮಾತಾಡುವ ಬಿಜೆಪಿಯವರು ನೀಟ್ ಬಗ್ಗೆ ಮಾತಾಡಲಿ, 25 ಲಕ್ಷ ಮಕ್ಕಳ ಕಾಲಡಿ ನುಸುಳಿ ಬರಲಿ ಆಗ ಈ ಆದೇಶದ ಬಗ್ಗೆ ಉತ್ತರಿಸುತ್ತೇನೆ ಎಂದಿದ್ದಾರೆ.
ಹಿಜಾಬ್ ಮಾತ್ರ ಅಲ್ಲ. ಇದಕ್ಕೂ ಮುನ್ನ ನಾನು ಶಿವದಾರ ಹಾಗೂ ಜನಿವಾರದ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದೆ, ಹಾಗಾದರೆ ಇವರೆಲ್ಲ ಅದರ ವಿರೋಧಿಗಳಾ?, ಕಣ್ಣಿಗೆ ಇದೊಂದೇ ಕಾಣಿಸುತ್ತಾ? ಇದರ ಬಗ್ಗೆ ಮಾತಾಡೋರು ನೀಟ್ ಪರೀಕ್ಷೆ ಬಗ್ಗೆ ಮಾತಾಡಲಿ. ನೀಟ್ ಪಶ್ನೆಪತ್ರಿಕೆ ಲೀಕ್ನಿಂದಾಗಿ 25 ಲಕ್ಷ ಮಕ್ಕಳನ್ನು ಬೀದಿಗೆ ತಂದಿದ್ದಾರಲ್ಲ, ಅವರ ಕಾಲಡಿ ನುಸುಳಿ ಬರಲಿ, ಆಗ ಈ ಆದೇಶದ ಬಗ್ಗೆ ಉತ್ತರ ಕೊಡುತ್ತೇನೆಂದು ಕಿಡಿಕಾರಿದ್ದಾರೆ.
ಪ್ರಣಾಳಿಕೆಯಲ್ಲಿ ಸಮಾನತೆಯ ಮಾತು ಕೊಟ್ಟಿದ್ವಿ, ಜಾತಿ, ಧರ್ಮ ಓಲೈಸುವ ಮಾತಲ್ಲ. ಅದರಂತೆ ಮಾಡ್ತಾ ಇದ್ದೇವೆ. ಯಾವುದೇ ಕಾರಣಕ್ಕೂ ಆದೇಶ ವಾಪಸ್ ಪಡೆಯಲ್ಲ. ಬಿಜೆಪಿ ನಾಯಕರು, ವಿರೋಧ ಮಾಡೋರು ಕೇಂದ್ರೀಯ ವಿದ್ಯಾಲಯದ ಮುಂದೆ ವಿರೋಧಿಸಲಿ. ಮಹಾರಾಷ್ಟ್ರದಲ್ಲಿ ಹೋಗಿ ಪ್ರತಿಭಟನೆ ಮಾಡಲಿ. ಜನಿವಾರ ಕಟ್ ಮಾಡಿದಾಗ ಕಾಣಿಸಲಿಲ್ಲವೇ ಮಕ್ಕಳ ವಿದ್ಯಾಭ್ಯಾಸದ ವಿಷಯಕ್ಕೆ ಕೈ ಹಾಕಬೇಡಿ ಎಂದು ಬಿಜೆಪಿ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಮಾಡಿರುವ ಕಾನೂನನ್ನೇ ನಾನು ಈಗ ತಂದಿದ್ದೇನೆ. ಇದೇನು ಹೊಸದಲ್ಲ. ಜಾಸ್ತಿ ಫಲಿತಾಂಶ ಬಂತು ಅಂತ ಹೊಟ್ಟೆ ಕಿಚ್ಚಿಗೆ ಇವರೆಲ್ಲ ಹೀಗೆ ಮಾಡ್ತಿದ್ದಾರೆ. ಯಾರ ಓಲೈಕೆಗೂ ಆದೇಶ ಮಾಡಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಆದೇಶ ಮಾಡಿದ್ದೇನೆ, ವಾಪಸ್ ಪಡೆಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಾನು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಈ ಹಿಂದೆ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಗೆ 3 ಪರೀಕ್ಷೆಗಳನ್ನು ಮಾಡಿದಾಗ ನನಗೆ ತಲೆ ಇಲ್ಲ, ಬುದ್ಧಿ ಇಲ್ಲ ಅಂತ ಬಿಜೆಪಿ ನಾಯಕರು ಹೇಳಿದ್ದರು. ಈಗ ನೀಟ್ ಪರೀಕ್ಷೆ ವಿಚಾರದಲ್ಲಿ ಕೇಂದ್ರ ಶಿಕ್ಷಣ ಸಚಿವರ ಬಗ್ಗೆ ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದರು.
ಮಕ್ಕಳು ಭವಿಷ್ಯಕ್ಕಾಗಿ ಕಷ್ಟಪಟ್ಟು ಓದಿರುತ್ತಾರೆ. ಆದರೀಗ ಕೇಂದ್ರ ಸರ್ಕಾರ ಅದಕ್ಕೆ ಕಲ್ಲು ಹಾಕಿದಂತಾಗಿದೆ. 6ನೇ ಬಾರಿ ಪ್ರಶ್ನೆಪತ್ರಿಕೆ ಸೋರಿಕೆ ಆಗಿದೆ. ರಿಸರ್ವ್ ಬ್ಯಾಂಕ್ನಿಂದ ಹಣವನ್ನು ತೆಗೆದುಕೊಂಡು ಹೋಗುವಾಗ ಭದ್ರತೆ ಕೊಡುತ್ತಾರೆ. ದೇಶದ ಮಕ್ಕಳ ಭವಿಷ್ಯದ ವಿಚಾರಕ್ಕೆ ಭದ್ರತೆ ಬೇಡವೇ? ಎಂದು ಕೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




